ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಇದುವರೆಗೂ ಒಟ್ಟು 19 ಟಿ20 ಪಂದ್ಯಗಳನ್ನಾಡಿದ್ದು, ಈ ಪೈಕಿ ಭಾರತ 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ವೆಸ್ಟ್ ಇಂಡೀಸ್ ತಂಡವು 6 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನೊಂದು ಪಂದ್ಯದ ಫಲಿತಾಂಶ ಹೊರಬಿದ್ದಿರಲಿಲ್ಲ.
ಯುಜುವೇಂದ್ರ ಚಹಲ್ ಇನ್ನೊಂದು ವಿಕೆಟ್ ಕಬಳಿಸಿದರೆ, ಭಾರತ ಪರ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಲಿದ್ದಾರೆ. ಸದ್ಯ ಜಸ್ಪ್ರೀತ್ ಬುಮ್ರಾ ಹಾಗೂ ಚಹಲ್ ತಲಾ 66 ವಿಕೆಟ್ ಕಬಳಿಸಿ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
200ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾದ ಭುವನೇಶ್ವರ್ ಕುಮಾರ್:
ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ 121 ಏಕದಿನ, 21 ಟೆಸ್ಟ್ ಹಾಗೂ 57 ಪಂದ್ಯಗಳ ಸಹಿತ ಒಟ್ಟು 199 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದೀಗ ಮೂರನೇ ಟಿ20 ಪಂದ್ಯದಲ್ಲಿ ಭುವಿ ಕಣಕ್ಕಿಳಿದರೆ ಭುವಿ ಭಾರತ ಪರ ಇನ್ನೂರನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದಂತಾಗುತ್ತದೆ.
ಸಿಕ್ಸರ್ ಶತಕ ಬಾರಿಸಲು ಪೊಲ್ಲಾರ್ಡ್‌ಗೆ ಬೇಕಿದೆ ಇನ್ನೊಂದು ಸಿಕ್ಸರ್:
ವೆಸ್ಟ್ ಇಂಡೀಸ್ ತಂಡದ ನಾಯಕ ಕೀರನ್ ಪೊಲ್ಲಾರ್ಡ್ 100 ಟಿ20 ಪಂದ್ಯಗಳನ್ನಾಡಿ 99 ಸಿಕ್ಸರ್ ಬಾರಿಸಿದ್ದಾರೆ. ಪೊಲ್ಲಾರ್ಡ್ ಇನ್ನೊಂದು ಸಿಕ್ಸರ್ ಬಾರಿಸಿದರೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಬಾರಿಸಿದ ಸಾಧನೆ ಮಾಡಲಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸದ್ಯ 30 ಅರ್ಧಶತಕ ಬಾರಿಸುವುದರ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಜತೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ ಇನ್ನೊಂದು ಅರ್ಧಶತಕ ಬಾರಿಸಿದರೆ, ಭಾರತ ಪರ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಅರ್ಧಶತಕ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್ ಸದ್ಯ ಟಿ20 ಕ್ರಿಕೆಟ್‌ನಲ್ಲಿ 48 ವಿಕೆಟ್ ಕಬಳಿಸಿದ್ದು, ಇಂದಿನ ಪಂದ್ಯದಲ್ಲಿ ಇನ್ನೆರಡು ವಿಕೆಟ್ ಪಡೆದರೆ ಕಾಟ್ರೆಲ್ 50 ವಿಕೆಟ್ ಕ್ಲಬ್ ಸೇರ್ಪಡೆಗೊಳ್ಳಲಿದ್ದಾರೆ.