ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಕಿವೀಸ್ ತಂಡದ ಸ್ಟಾರ್ ವೇಗಿ ಕೈಲ್ ಜೇಮಿಸನ್, ಭಾರತ ವಿರುದ್ದದ ಟಿ20 ಸರಣಿಯಿಂದ ಹಿಂದೆ ಸರಿದಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ, ಪಿಂಕ್ ಸಿಟಿ ಖ್ಯಾತಿಯ ಜೈಪುರ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಸೋಲು ಕಂಡಿದ್ದ ನ್ಯೂಜಿಲೆಂಡ್ ತಂಡವು ಇದೀಗ ಭಾರತದಲ್ಲಿ ಟಿ20 ಸರಣಿಯನ್ನಾಡಲು ಸಜ್ಜಾಗಿದೆ. ಆದರೆ ಈ ಸರಣಿಗೆ ಹಲವು ಪ್ರಮುಖ ಆಟಗಾರರು ಗೈರಾಗಿದ್ದಾರೆ.
ನವೆಂಬರ್ 25ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟಿ20 ಸರಣಿಯಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದ್ದರು. ಹೀಗಾಗಿ ಟಿ20 ಸರಣಿಯಲ್ಲಿ ಟಿಮ್ ಸೌಥಿ ಕಿವೀಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಇದೀಗ ಕಿವೀಸ್ ತಂಡದ ಮತ್ತೋರ್ವ ಮಾರಕ ವೇಗಿ ಕೈಲ್ ಜೇಮಿಸನ್ ಕೂಡಾ ಇದೇ ಕಾರಣದಿಂದ ಟಿ20 ಸರಣಿಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಈ ವಿಷಯವನ್ನು ನ್ಯೂಜಿಲೆಂಡ್ ತಂಡದ ಹೆಡ್ ಕೋಚ್ ಗ್ಯಾರಿ ಸ್ಟೆಡ್ ಖಚಿತಪಡಿಸಿದ್ದಾರೆ.
Kyle Jamieson
ಭಾರತ ವಿರುದ್ದದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಕೇನ್ ವಿಲಿಯಮ್ಸನ್ ಹಾಗೂ ಕೈಲ್ ಜೇಮಿಸನ್ ಟಿ20 ಸರಣಿಯಿಂದ ಹಿಂದೆ ಸರಿದಿದ್ದಾರೆ. ಕೇವಲ 5 ದಿನಗಳ ಅಂತರದಲ್ಲಿ ಮೂರು ವಿವಿಧ ನಗರಗಳಲ್ಲಿ 3 ಟಿ20 ಪಂದ್ಯವನ್ನಾಡುವುದು ಸವಾಲಿನ ಸಂಗತಿಯಾಗಿದೆ ಎಂದು ಗ್ಯಾರಿ ಸ್ಟೆಡ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ವೇಗಿ ಲಾಕಿ ಫರ್ಗ್ಯೂಸನ್ ಚೇತರಿಸಿಕೊಂಡಿದ್ದು, ಭಾರತ ವಿರುದ್ದದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಕೋಚ್ ತಿಳಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಫರ್ಗ್ಯೂಸನ್ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರು.
ಭಾರತ ವಿರುದ್ದದ ಟಿ20 ಸರಣಿಗೆ ನ್ಯೂಜಿಲೆಂಡ್ ಸಂಪೂರ್ಣ ತಂಡ ಹೀಗಿದೆ ನೋಡಿ: ಟೊಡ್ ಆಶ್ಲೆ, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಮಾರ್ಟಿನ್ ಗಪ್ಟಿಲ್, ಲಾಕಿ ಫರ್ಗ್ಯೂಸನ್, ಆಡಂ ಮಿಲ್ನೆ, ಡೇರಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಫ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೈಫರ್ಟ್, ಇಶ್ ಸೋಧಿ, ಟಿಮ್ ಸೌಥಿ(ನಾಯಕ).