ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಕಳೆದ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ತೋರುವ ಮೂಲಕ ಟೀಂ ಇಂಡಿಯಾ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದೀಗ ಖಾಸಗಿ ಚಾನೆಲ್‌ವೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಮೊಹಮ್ಮದ್ ಶಮಿ, ಧರ್ಮದ ಕುರಿತಾಗಿ ಮತ್ತೊಮ್ಮೆ ತಮ್ಮ ಸ್ಪಷ್ಟ ನಿಲುವನ್ನು ಪ್ರಕಟಿಸಿದ್ದಾರೆ.
"ಜೈ ಶ್ರೀರಾಮ್" ಅಥವಾ "ಅಲ್ಲಾಹು ಅಕ್ಬರ್" ಎಂದು ಸಾವಿರ ಬಾರಿ ನನ್ನೆದರು ಕೂಗಿದರೂ, ಅದರಿಂದ ನನಗೇನೂ ತೊಂದರೆಯಿಲ್ಲ. ಇದರಿಂದ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶಮಿ ಹೇಳಿದ್ದಾರೆ.
'ಪ್ರತಿಯೊಂದು ಧರ್ಮದಲ್ಲೂ 5-10 ಮಂದಿ ತಮ್ಮ ವಿರುದ್ದದ ಧರ್ಮದವರನ್ನು ಇಷ್ಟಪಡುವುದಿಲ್ಲ. ಇದರ ಬಗ್ಗೆ ನನ್ನದೇನೂ ತಕರಾರು ಇಲ್ಲ' ಎಂದು News18 ವಾಹಿನಿಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಅದೇ ರೀತಿ ನಾನು ಸಜ್ದಾ ಮಾಡಲು ಯತ್ನಿಸಿದೆ ಎನ್ನುವುದೂ ಒಂದು. ಒಂದು ವೇಳೆ ರಾಮ ಮಂದಿರ ಕಟ್ಟುವಾಗ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ನನಗೇನೂ ತೊಂದರೆಯಿಲ್ಲ. ಅದೇ ರೀತಿ ಒಂದು ವೇಳೆ ನಾನು ಅಲ್ಲಾಹು ಅಕ್ಬರ್ ಎಂದು ಹೇಳಬೇಕೆನಿಸಿದರೆ ನಾನು 1,000 ಬಾರಿ ಬೇಕಿದ್ದರೂ ಹೇಳುತ್ತೇನೆ. ಇದರಿಂದ ಯಾರಿಗೂ ಏನೂ ಆಗುವುದಿಲ್ಲ ಎಂದು ಶಮಿ ಹೇಳಿದ್ದಾರೆ.
33 ವರ್ಷದ ಮೊಹಮ್ಮದ್ ಶಮಿ ಸದ್ಯ ಹಿಮ್ಮಡಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದು, ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ಇನ್ನು ಭಾರತದಲ್ಲೇ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಯಲ್ಲಿ ಶಮಿ ಸಜ್ದಾ ಮಾಡಲು ಹೋಗಿ ಕೊನೆಯ ಕ್ಷಣದಲ್ಲಿ ವಿವಾದವಾಗಬಹುದು ಅಂದುಕೊಂಡು ಮಾಡಲಿಲ್ಲ ಎಂದು ಕೆಲವು ಪಾಕಿಸ್ತಾನದ ಮಂದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು. ಈ ಕುರಿತಂತೆ ಮತ್ತೊಮ್ಮೆ ಆ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
"ನಾನು ಸತತವಾಗಿ 5ನೇ ಓವರ್ ಬೌಲಿಂಗ್ ಮಾಡಿದೆ. ನನ್ನ ಪ್ರಕಾರ ಆಗ ನನ್ನ ಶಕ್ತಿಮೀರಿ ಬೌಲಿಂಗ್ ಮಾಡುತ್ತಿದ್ದೆ. ನಾನು ದಣಿದಿದ್ದೆ ಕೂಡ. ಪದೇ ಪದೇ ಬಾಲ್ ಬ್ಯಾಟ್ ಅಂಚು ಸವರದೇ ವಿಕೆಟ್ ಕೀಪರ್ ಕೈ ಸೇರುತ್ತಿತ್ತು. ಇದಾದ ನಂತರ ಕೊನೆಗೂ ನನಗೆ 5ನೇ ವಿಕೆಟ್ ಸಿಕ್ಕಿತು. ನಾನಾಗ ಮಂಡಿಯೂರಿದೆ."
Mohammed Shami
ಆಗ ಯಾರೋ ಹಿಂದಿನಿಂದ ನನ್ನ ತಳ್ಳಿದರು. ಹಾಗಾಗಿ ನಾನು ಕೊಂಚ ಮುಂದೆ ಬಾಗಿದೆ. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಯಿತು. ಆಗ ನಾನು ಸಜ್ದಾ ಮಾಡಲು ಹಿಂದೇಟು ಹಾಕಿದೆ ಎಂದು ಕೆಲವರು ಆರೋಪಿಸಿದರು. ಅಂತಹವರಿಗೆಲ್ಲಾ ಒಂದೇ ಮಾತು ಹೇಳಲು ಬಯಸುತ್ತೇನೆ. ಇದೆಲ್ಲಾ ನ್ಯೂಸೆನ್ಸ್ ಎಂದಿದ್ದಾರೆ.
ಧರ್ಮದ ವಿಚಾರದ ಬಗ್ಗೆ ಇಂತಹ ಸಂದರ್ಭ ಬಂದಾಗ ನಾನು ಒಂದು ಮಾತನ್ನು ಹೇಳಲು ಬಯಸುತ್ತೇನೆ. ನಾನು ಈ ವಿಚಾರವಾಗಿ ಯಾರಿಗೂ ಹೆದರುವುದಿಲ್ಲ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.
"ನಾನೊಬ್ಬ ಮುಸಲ್ಮಾನ, ನಾನು ಈ ಹಿಂದೆಯೂ ಹೇಳಿದ್ದೇನೆ. ನಾನು ಮುಸ್ಲಿಂ ಎನ್ನುವುದರ ಬಗ್ಗೆ ಹೆಮ್ಮೆಯಿದೆ, ಅದಕ್ಕಿಂತ ಹೆಚ್ಚಾಗಿ ನಾನೊಬ್ಬ ಭಾರತೀಯ ಎನ್ನುವುದಕ್ಕೆ ಹೆಮ್ಮೆಯಿದೆ. ನನ್ನ ಪಾಲಿಗೆ ದೇಶ ಮೊದಲು ಎಂದು ಶಮಿ ಹೇಳಿದ್ದಾರೆ.
ಇಂತಹ ವಿಚಾರಗಳು ಕೆಲವರಿಗೆ ತೊಂದರೆಯಾಗಬಹುದು. ಆದರೆ ಐ ಡೋಂಟ್ ಕೇರ್. ನಾನು ನನ್ನ ದೇಶಕ್ಕೆ ಗೌರವ ಕೊಡುತ್ತೇನೆ. ಅದೇ ರೀತಿ ನಾನು ಸಜ್ದಾ ಮಾಡಬೇಕೆನಿಸಿದರೆ ಮಾಡುತ್ತೇನೆ, ಅದಕ್ಕಾಗಿ ಇನ್ನೊಬ್ಬರ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಶಮಿ ಹೇಳಿದ್ದಾರೆ.