ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ದದ 3 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅದ್ಭುತ ಪ್ರದರ್ಶನ ತೋರುವ ಮೂಲಕ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಬಿಸಿಸಿಐ ಈ ಇಬ್ಬರು ಆಟಗಾರರಿಗೆ ಬಯೋ ಬಬಲ್‌ನಿಂದ ಬ್ರೇಕ್ ನೀಡಿದೆ.
ಹೌದು, ಆಟಗಾರರ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ರಿಷಭ್ ಪಂತ್ ಹಾಗೂ ವಿರಾಟ್ ಕೊಹ್ಲಿ ಅವರಿಗೆ 10 ದಿನಗಳ ಕಾಲ ಕ್ರಿಕೆಟ್‌ನಿಂದ ಬ್ರೇಕ್ ನೀಡಿದೆ. ಹೀಗಾಗಿ ಈ ಇಬ್ಬರು ಆಟಗಾರರು ಬಯೋ ಬಬಲ್ ತೊರೆದು ಭಾನುವಾರದೊಳಗಾಗಿ ತಮ್ಮ ತಮ್ಮ ಮನೆ ಸೇರಲಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಿಟಿಐ ವರದಿಯ ಪ್ರಕಾರ, ವಿಂಡೀಸ್ ವಿರುದ್ದದ ಸರಣಿ ಮುಕ್ತಾಯದ ಬಳಿಕ ಫೆಬ್ರವರಿ 24ರಿಂದ ಶ್ರೀಲಂಕಾ ವಿರುದ್ದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯಿಂದಲೂ ಕೊಹ್ಲಿ, ಪಂತ್ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ 24ರಂದು ಲಖನೌದಲ್ಲಿ ಮೊದಲ ಟಿ20 ಪಂದ್ಯ ನಡೆದರೆ, ಫೆಬ್ರವರಿ 26 ಮತ್ತು 27ರಂದು ಧರ್ಮಶಾಲಾದಲ್ಲಿ ಎರಡನೇ ಹಾಗೂ ಮೂರನೇ ಟಿ20 ಪಂದ್ಯ ನಡೆಯಲಿದೆ.
ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಜಯಿಸಿದ್ದರಿಂದ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಶನಿವಾರದ ಬೆಳಗ್ಗೆ ಅವರು ತಮ್ಮ ತಮ್ಮ ಮನೆಗೆ ತೆರಳಲಿದ್ದಾರೆ ಬಿಸಿಸಿಐ ಮೂಲಗಳು ತಿಳಿಸಿವೆ.
ಲಂಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿ ಮುಕ್ತಾಯದ ಬಳಿಕ, ಭಾರತ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದು, ಕೊಹ್ಲಿ ಹಾಗೂ ಪಂತ್ ಟೆಸ್ಟ್ ಸರಣಿ ವೇಳೆಗೆ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ. ಮಾರ್ಚ್ 4ರಂದು ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾದರೆ, ಮಾರ್ಚ್ 12ರಂದು ಬೆಂಗಳೂರಿನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.
ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಈ ಇಬ್ಬರು ಆಟಗಾರರು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಇಲ್ಲಿಯವರೆಗೆ ಬಹುತೇಕ ಎಲ್ಲಾ ಪಂದ್ಯಗಳನ್ನಾಡಿದ್ದಾರೆ. ಆಫ್ರಿಕಾ ಪ್ರವಾಸದಿಂದ ಕೊಹ್ಲಿ ಇಲ್ಲಿಯವರೆಗೆ 2 ಟೆಸ್ಟ್, 6 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದಾರೆ.