Ind vs SA: ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದು ಹಲವು ದಾಖಲೆ ಬರೆದ ಟೀಂ ಇಂಡಿಯಾ..!

First Published Dec 31, 2021, 9:44 AM IST

ಸೆಂಚೂರಿಯನ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದಲ್ಲಿ ಟೀಂ ಇಂಡಿಯಾ (Team India) 113 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಮೂರು ಪಂದ್ಯಗಳ ಫ್ರೀಡಂ ಟ್ರೋಫಿ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆ 1-0 ಮುನ್ನಡೆ ಸಾಧಿಸಿದೆ. ಇದರ ಜತೆಗೆ ಸೆಂಚೂರಿಯನ್‌ನಲ್ಲಿ (Centurion) ಟೆಸ್ಟ್‌ ಗೆದ್ದ ಏಷ್ಯಾದ ಮೊದಲ ತಂಡ ಎನ್ನುವ ಕೀರ್ತಿಗೂ ಭಾರತ ಪಾತ್ರವಾಗಿದೆ. ಸೆಂಚೂರಿಯನ್‌ನಲ್ಲಿ ಇನ್ನೂ ಹಲವು ದಾಖಲೆಗಳು ಟೀಂ ಇಂಡಿಯಾ ಪಾಲಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸೆಂಚೂರಿಯನ್‌ನ ಸೂಪರ್‌ ಸ್ಪೋರ್ಟ್‌ ಸ್ಟೇಡಿಯಂನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 113 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ 4ನೇ ಟೆಸ್ಟ್ ಜಯ

ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇದುವರೆಗೂ 21 ಟೆಸ್ಟ್ ಪಂದ್ಯಗಳನ್ನಾಡಿದ್ದು, ಇದೀಗ 4ನೇ ಗೆಲುವು ಸಾಧಿಸಿದೆ. 2006ರಲ್ಲಿ ಹರಿಣಗಳ ನಾಡಿನಲ್ಲಿ ಮೊದಲ ಟೆಸ್ಟ್ ಗೆಲುವು ದಾಖಲಿಸಿದ್ದ ಭಾರತ, ಆ ಬಳಿಕ 2010 ಹಾಗೂ 2018ರಲ್ಲಿ ಟೆಸ್ಟ್ ಗೆಲುವಿನ ರುಚಿ ಕಂಡಿತ್ತು. 

ಹರಿಣಗಳ ನಾಡಿನಲ್ಲಿ ರಾಹುಲ್ ದ್ರಾವಿಡ್ ಅಪರೂಪದ ದಾಖಲೆ

ರಾಹುಲ್ ದ್ರಾವಿಡ್‌ಗೆ ದಕ್ಷಿಣ ಆಫ್ರಿಕಾದ ಜತೆ ವಿಶೇಷ ನಂಟಿದೆ. 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ತಮ್ಮ ವೃತ್ತಿ ಬದುಕಿನ ಮೊದಲ ಶತಕ ಬಾರಿಸಿದ್ದು ದಕ್ಷಿಣ ಆಫ್ರಿಕಾದಲ್ಲಿ.'

ಇನ್ನು ಭಾರತ ತಂಡ, ದಕ್ಷಿಣ ಆಫ್ರಿಕಾದಲ್ಲಿ 2006ರಲ್ಲಿ ಮೊದಲ ಟೆಸ್ಟ್ ಗೆಲುವು ದಾಖಲಿಸಿದ್ದಾಗ ರಾಹುಲ್ ದ್ರಾವಿಡ್‌ ಟೀಂ ಇಂಡಿಯಾ ನಾಯಕರಾಗಿದ್ದರು. ಇದೀಗ ಟೀಂ ಇಂಡಿಯಾ ಕೋಚ್ ಆದ ಬಳಿಕ ವಿದೇಶದಲ್ಲಿ ಭಾರತಕ್ಕೆ ಸಿಕ್ಕಿದ ಮೊದಲ ಜಯ ದಕ್ಷಿಣ ಆಫ್ರಿಕಾದಲ್ಲಿ ಎನ್ನುವುದು ಮತ್ತೊಂದು ವಿಶೇಷ.

ಕಳೆದ 4 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಸೋತಿಲ್ಲ ಭಾರತ..!

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಅಜೇಯ ಗೆಲುವಿನ ನಾಗಾಲೋಟ ಮುಂದುವರೆಸಿದೆ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ದ ಮೆಲ್ಬೊರ್ನ್‌ ಟೆಸ್ಟ್‌ನಲ್ಲಿ ಡ್ರಾ ಮಾಡಿಕೊಂಡಿದ್ದ ಭಾರತ, ಇದಾದ ಬಳಿಕ 2018 ಹಾಗೂ 2020ರಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ಗೆದ್ದು ಬೀಗಿತ್ತು. ಇದೀಗ 2021ರಲ್ಲಿ ಭಾರತ, ಹರಿಣಗಳ ವಿರುದ್ದ ಬಾಕ್ಸಿಂಗ್ ಡೇ ಟೆಸ್ಟ್ ಜಯಿಸಿದೆ.

2014ರ ಬಳಿಕ ಸೆಂಚೂರಿಯನ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಮೊದಲ ಸೋಲು

ದಕ್ಷಿಣ ಆಫ್ರಿಕಾದ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಸೆಂಚೂರಿಯನ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ತಂಡ ಎನ್ನುವ ದಾಖಲೆಯನ್ನು ಭಾರತ ಬರೆದಿದೆ. 2014ರ ಬಳಿಕ ಹರಿಣಗಳ ಪಡೆಗೆ ಎದುರಾದ ಮೊದಲ ಸೋಲು ಇದು. ಇಲ್ಲಿ ದಕ್ಷಿಣ ಆಫ್ರಿಕಾ ಒಟ್ಟು 27 ಟೆಸ್ಟ್‌ ಪಂದ್ಯಗಳನ್ನಾಡಿದ್ದು, ಕೇವಲ 3 ಪಂದ್ಯಗಳಲ್ಲಿ ಮಾತ್ರ ಸೋತಿದೆ.
 

ದಕ್ಷಿಣ ಆಫ್ರಿಕಾದಲ್ಲಿ 2 ಟೆಸ್ಟ್ ಗೆದ್ದ ಭಾರತದ ಮೊದಲ ನಾಯಕ ವಿರಾಟ್ ಕೊಹ್ಲಿ

ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ 4ನೇ ಟೆಸ್ಟ್ ಗೆಲುವು ಸಾಧಿಸಿದಂತಾಗಿದೆ. ಈ ಪೈಕಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ 2006ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ಗೆಲುವು ದಾಖಲಿಸಿತ್ತು. ಇದಾದ ಬಳಿಕ 2010ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಡರ್ಬನ್‌ನಲ್ಲಿ ಗೆಲುವಿನ ನಗೆ ಬೀರಿತ್ತು. ಇನ್ನು ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2018ರಲ್ಲಿ ಜೊಹಾನ್ಸ್‌ಬರ್ಗ್‌ ಹಾಗೂ 2021ರಲ್ಲಿ ಸೆಂಚೂರಿಯನ್‌ನಲ್ಲಿ ಗೆಲುವಿನ ನಗೆ ಬೀರಿದೆ.

click me!