ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿದ್ದ ಟೀಂ ಇಂಡಿಯಾ, ಇದೇ ಮೊದಲ ಬಾರಿಗೆ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ಹರಿಣಗಳೆದುರು ಮೊದಲ ಸೋಲಿನ ಕಹಿಯುಂಡಿದೆ.
ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ, ಎರಡನೇ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿತು. ಟೀಂ ಇಂಡಿಯಾ ಸೋಲಿಗೆ ಐದು ಕಾರಣಗಳು ಇಲ್ಲಿವೆ ನೋಡಿ
1. ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿದ್ದು:
ಟಾಸ್ ಗೆದ್ದ ಭಾರತ ಹಂಗಾಮಿ ಟೆಸ್ಟ್ ತಂಡದ ನಾಯಕ ಕೆ.ಎಲ್. ರಾಹುಲ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಭಾರತ ಪರ ರಾಹುಲ್(50) ಹಾಗೂ ಅಶ್ವಿನ್(46) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳಿಂದ ನಿರೀಕ್ಷಿತ ರನ್ ರನ್ ಹರಿದು ಬರಲಿಲ್ಲ. ಪರಿಣಾಮ ಟೀಂ ಇಂಡಿಯಾ ಕೇವಲ 202 ರನ್‌ಗಳಿಗೆ ಸರ್ವಪತನ ಕಂಡಿದ್ದು ಭಾರತ ಸೋಲಿಗೆ ಪ್ರಮುಖ ಕಾರಣ
2. ವೇಗಿ ಮೊಹಮ್ಮದ್ ಸಿರಾಜ್ ಎರಡನೇ ಟೆಸ್ಟ್‌ನಲ್ಲಿ ಹೆಚ್ಚು ಓವರ್ ಬೌಲಿಂಗ್ ಮಾಡಲು ಸಾಧ್ಯವಾಗದಿದ್ದದು:
ಮೊದಲ ಟೆಸ್ಟ್ ಪಂದ್ಯದಲ್ಲಿ ಮೊನಚಾದ ದಾಳಿ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿರಾಜ್, ಎರಡನೇ ಟೆಸ್ಟ್ ಪಂದ್ಯದ ವೇಳೆಗೆ ಸ್ನಾಯು ಸೆಳೆತಕ್ಕೆ ಒಳಗಾಗಿ ಹೆಚ್ಚುಹೊತ್ತು ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಕೇವಲ 9.5 ಓವರ್ ಬೌಲಿಂಗ್ ಮಾಡಿದ್ದ ಸಿರಾಜ್ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 6 ಓವರ್‌ಗಳನ್ನಷ್ಟೇ ಬೌಲಿಂಗ್ ಮಾಡಿದರು. ಆದರೆ ಯಾವುದೇ ವಿಕೆಟ್ ದಕ್ಕಲಿಲ್ಲ.
3. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಬಿಟ್ಟುಕೊಟ್ಟಿದ್ದು:
ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 202 ರನ್‌ಗಳಿಗೆ ಆಲೌಟ್ ಆಗಿದ್ದರೂ ಸಹಾ, ವೇಗಿ ಶಾರ್ದೂಲ್ ಠಾಕೂರ್ ಮಾರಕ ದಾಳಿ ನಡೆಸುವ ಮೂಲಕ ಹರಿಣಗಳನ್ನು ಕಾಡಿದರು. ಒಂದು ಹಂತದಲ್ಲಿ 179 ರನ್‌ಗಳಿಗೆ ದಕ್ಷಿಣ ಆಫ್ರಿಕಾ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಕೇಶವ್ ಮಹರಾಜ್ ಹಾಗೂ ಮಾರ್ಕೊ ಯಾನ್ಸನ್ ಕೊನೆಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಅಲ್ಪ ಮುನ್ನಡೆ ಸಾಧಿಸಲು ನೆರವಾಗಿದ್ದು. ಇದು ಭಾರತಕ್ಕೆ ಹಿನ್ನೆಡೆಯಾಗಿ ಪರಿಣಮಿಸಿತು.
4. ಎರಡನೇ ಇನಿಂಗ್ಸ್‌ನಲ್ಲಿ ಪಂತ್ ಬೇಜವಾಬ್ದಾರಿಯುತ ಆಟವಾಡಿದ್ದು:
ಎರಡನೇ ಇನಿಂಗ್ಸ್‌ನಲ್ಲಿ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಆದರೆ ಮಹತ್ವದ ಘಟ್ಟದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕಿದ್ದ ಪಂತ್ ಕೇವಲ 3 ಎಸೆತಗಳನ್ನು ಎದುರಿಸಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದ್ದು ಭಾರತದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
5. ಕಾಡಿದ ವಿರಾಟ್ ಕೊಹ್ಲಿ ಎನ್ನುವ ನಾಯಕನ ಅನುಪಸ್ಥಿತಿ
ವಿರಾಟ್ ಕೊಹ್ಲಿ ಆಟಗಾರನಾಗಿ ಮಾತ್ರವಲ್ಲದೇ ನಾಯಕನಾಗಿಯೂ ತಂಡಕ್ಕೆ ಎಷ್ಟು ಅನಿವಾರ್ಯ ಎನ್ನುವುದು ಈ ಟೆಸ್ಟ್ ಪಂದ್ಯದ ಮೂಲಕ ಸಾಬೀತಾಯಿತು. ಇತ್ತೀಚಿಗಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎರಡನೇ ಇನಿಂಗ್ಸ್‌ನಲ್ಲಿ ಭಾರತ 200+ ರನ್ ಗುರಿ ನೀಡಿಯೂ ಸೋಲೊಪ್ಪಿಕೊಳ್ಳುವಂತೆ ಮಾಡಿತು.