ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ 2 ಪಂದ್ಯಗಳನ್ನು ಸೋತು ನೀರಸ ಪ್ರದರ್ಶನ ತೋರಿದೆ. ಟಿ20 ವಿಶ್ವಕಪ್ ಮುಕ್ತಾಯವಾಗಿ ಕೇವಲ 3 ದಿನಗಳ ಬಳಿಕ ಟೀಂ ಇಂಡಿಯಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ ಸೀಮಿತ ಓವರ್‌ಗಳ ಸರಣಿಯನ್ನಾಡಲಿದೆ.
ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರು ದೀರ್ಘಕಾಲದಿಂದ ಬಿಡುವಿರದ ಕ್ರಿಕೆಟ್ ಆಡುತ್ತಿದ್ದಾರೆ. ಬಯೋ ಬಬಲ್‌ನಿಂದ ಕೊಂಚ ಬಿಡುವ ಕೊಡುವ ಉದ್ದೇಶದಿಂದ ನ್ಯೂಜಿಲೆಂಡ್ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಟೀಂ ಇಂಡಿಯಾದ ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ.
ಐಸಿಸಿ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಈಗಾಗಲೇ ಘೋಷಿಸಿದ್ದಾರೆ. ಇನ್ನು ಕಿವೀಸ್ ಎದುರಿನ ಸರಣಿಗೆ ರೋಹಿತ್ ಶರ್ಮಾ ಕೂಡಾ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಹೀಗಾಗಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಟಿ20 ಸರಣಿಗೆ ಕನ್ನಡಿಗ ಕೆ.ಎಲ್. ರಾಹುಲ್‌ಗೆ ನಾಯಕ ಪಟ್ಟ ಕಟ್ಟುವ ಸಾಧ್ಯತೆ ದಟ್ಟವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಟಿ20 ಕ್ರಿಕೆಟ್‌ನಲ್ಲಿ ಕೆ.ಎಲ್. ರಾಹುಲ್ ಟೀಂ ಇಂಡಿಯಾ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಬಹುತೇಕ ರಾಹುಲ್ ಅವರೇ ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ ಅನುಭವ ರಾಹುಲ್‌ಗಿದೆ. ಇದಷ್ಟೇ ಅಲ್ಲದೇ ನಾಯಕನಾಗಿದ್ದುಕೊಂಡೇ ಐಪಿಎಲ್‌ನಲ್ಲಿ ರಾಹುಲ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು.
ಇದೇ ವೇಳೆ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ಪ್ರೇಕ್ಷಕರು ಮೈದಾನ ಪ್ರವೇಶಿಸಲು ಅನುವು ಮಾಡಿಕೊಡಲಾಗುವುದು. ಈ ಸಂಬಂಧ ಸ್ಥಳೀಯ ಸರ್ಕಾರಿ ಸಂಸ್ಥೆಗಳ ಜತೆ ಮಾತುಕತೆ ನಡೆಯುತ್ತಿದೆ ಎಂದು ಬಿಸಿಸಿಐ ಅಧಿಕಾರಿಗಳು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಮೊದಲಿಗೆ ನವೆಂಬರ್ 17ರಿಂದ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಆರಂಭವಾಗಲಿದ್ದು, ನವೆಂಬರ್ 17ರಂದು ಜೈಪುರದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಇದಾದ ಬಳಿಕ ನವೆಂಬರ್ 19ರಂದು ರಾಂಚಿಯಲ್ಲಿ ಹಾಗೂ ನವೆಂಬರ್ 21ರಂದು ಕೋಲ್ಕತದ ಈಡನ್ ಗಾರ್ಡನ್ ಮೈದಾನದಲ್ಲಿ ಕೊನೆಯ ಟಿ20 ಪಂದ್ಯ ನಡೆಯಲಿದೆ.
ಇದಾದ ಬಳಿಕ ಕಿವೀಸ್ ತಂಡವು ಭಾರತ ವಿರುದ್ದ 2 ಪಂದ್ಯಗಳ ಟೆಸ್ಟ್ ಚಾಂಪಿಯನ್‌ನಲ್ಲಿ ಪಾಲ್ಗೊಳ್ಳಲಿದ್ದು, ಮೊದಲ ಟೆಸ್ಟ್ ಪಂದ್ಯವು ನವೆಂಬರ್ 25ರಿಂದ 29ರವರೆಗೆ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆದರೆ, ಡಿಸೆಂಬರ್ 03ರಿಂದ 07ರವರೆಗೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.