Ind vs Eng ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಇಂಗ್ಲೆಂಡ್ ಮಾರಕ ವೇಗಿ..!

First Published Aug 23, 2021, 5:01 PM IST

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳು ಮುಕ್ತಾಯವಾಗಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಇದೀಗ ಮೂರನೇ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್‌ ಪಂದ್ಯವು ಆಗಸ್ಟ್ 25ರಿಂದ ಆರಂಭವಾಗಲಿದ್ದು,ಈ ಹೈವೋಲ್ಟೇಜ್ ಪಂದ್ಯಕ್ಕೆ ಹೆಡಿಂಗ್ಲೆ ಆತಿಥ್ಯವನ್ನು ವಹಿಸಿದೆ. ಹೀಗಿರುವಾಗಲೇ ಆತಿಥೇಯ ತಂಡಕ್ಕೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ.
 

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 151 ರನ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ 272 ರನ್‌ಗಳ ಗುರಿ ಬೆನ್ನತ್ತಿದ್ದ ಆತಿಥೇಯ ಇಂಗ್ಲೆಂಡ್ ತಂಡವು ಕೇವಲ 120 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಕೊನೆಯ ದಿನ ವಿರಾಟ್ ಕೊಹ್ಲಿ ಪಡೆಗೆ ಶರಣಾಗಿತ್ತು. 
 

ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ತಂಡದ ಮಾರಕ ವೇಗಿ ಮಾರ್ಕ್‌ ವುಡ್‌ ಮೂರನೇ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದಾರೆ. 
 

ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವೇ ಮಾರ್ಕ್‌ ವುಡ್‌ ಬಲಗೈ ಭುಜದ ನೋವಿಗೆ ಒಳಗಾಗಿದ್ದರು. ಇದೀಗ ಬುಧವಾರ(ಆ.25)ದಿಂದ ಹೆಡಿಂಗ್ಲೆಯಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್‌ಗೆ ಸಂಪೂರ್ಣ ಫಿಟ್ ಇಲ್ಲದೇ ಇರುವುದರಿಂದ ಮೂರನೇ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ.

31 ವರ್ಷದ ಮಾರ್ಕ್‌ ವುಡ್‌ ಲೀಡ್ಸ್‌ನಲ್ಲಿ ತಂಡದೊಟ್ಟಿಗೆ ಇರಲಿದ್ದು, ವೈದ್ಯಕೀಯ ಸಿಬ್ಬಂದಿ ಮಾರ್ಕ್‌ ವುಡ್‌ ಗಾಯದ ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ. ಮೂರನೇ ಟೆಸ್ಟ್ ಅಂತ್ಯದ ವೇಳೆಗೆ ಮಾರ್ಕ್‌ ವುಡ್‌ ಅವರನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಲಿದ್ದಾರೆ.

ಆತಿಥೇಯ ಇಂಗ್ಲೆಂಡ್ ತಂಡದ ವೇಗದ ಬೌಲರ್‌ಗಳಿಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಈಗಾಗಲೇ ಸ್ಟುವರ್ಟ್‌ ಬ್ರಾಡ್‌, ಜೋಫ್ರಾ ಆರ್ಚರ್‌, ಕ್ರಿಸ್ ವೋಕ್ಸ್, ಓಲಿ ಸ್ಟೋನ್‌ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ.

ಇದೀಗ ಮಾರ್ಕ್‌ ವುಡ್‌ ಅನುಪಸ್ಥಿತಿಯಲ್ಲಿ ಸಕೀಬ್ ಮೊಹಮ್ಮದ್‌ ಇಂಗ್ಲೆಂಡ್ ತಂಡ ಕೂಡಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ. ಪ್ರಮುಖ ವೇಗಿಗಳ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್‌ ಯಾವ ರೀತಿಯ ಪ್ರದರ್ಶನ ತೋರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

click me!