ಆಸ್ಟ್ರೇಲಿಯಾದ ಈ ಇಬ್ಬರು ಆರ್‌ಸಿಬಿ ಕ್ರಿಕೆಟಿಗರು ಐಪಿಎಲ್ ಭಾಗ-2 ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ..!

First Published Aug 19, 2021, 4:44 PM IST

ಬೆಂಗಳೂರು(ಆ.19): ಕೊರೋನಾ ಕಾರ್ಮೋಡ ಕೊಂಚ ಮರೆಯಾಗುತ್ತಿದ್ದಂತೆಯೇ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಇನ್ನಿಳಿದ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್‌ ಭಾಗ-2 ಆರಂಭಕ್ಕೆ ಸರಿಯಾಗಿ ಇನ್ನೊಂದು ತಿಂಗಳು ಬಾಕಿ ಉಳಿದಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಭಾಗ-2 ಪಂದ್ಯಾವಳಿಗಳು ಯುಎಇನಲ್ಲಿ ಆರಂಭವಾಗಲಿದ್ದು, ಈಗಿನಿಂದಲೇ ಐಪಿಎಲ್‌ ಜ್ವರ ನಿಧಾನವಾಗಿ ಕಾವೇರ ತೊಡಗಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಇಬ್ಬರು ಸ್ಟಾರ್ ಆಟಗಾರರು ಐಪಿಎಲ್-2ನಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ. 
 

ಭಾರತದಲ್ಲೇ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಅರ್ಧಭಾಗ ಅತ್ಯಂತ ಯಶಸ್ವಿಯಾಗಿಯೇ ಆರಂಭ ಪಡೆದಿತ್ತು. ಆದರೆ ಬಯೋ ಬಬಲ್‌ನೊಳಗಿದ್ದ ಕೆಲ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗೆ ಕೋವಿಡ್ 19 ದೃಢಪಟ್ಟ ಹಿನ್ನೆಲೆಯಲ್ಲಿ ಮೇ.04ರಂದು ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ಇದೀಗ ಐಪಿಎಲ್‌ ಭಾಗ ಟೂರ್ನಿಯು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ಮಿಲಿಯನ್‌ ಡಾಲರ್‌ ಕ್ರಿಕೆಟ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಐಪಿಎಲ್‌ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 

ಕಳೆದೆರಡು ಆವೃತ್ತಿಗಳಲ್ಲಿ ನೀರಸ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 14ನೇ ಆವೃತ್ತಿಯ ಐಪಿಎಲ್‌ನಲ್ಲಿ 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಈ ಬಾರಿ ಐಪಿಎಲ್‌ ಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಆರ್‌ಸಿಬಿ ಗುರುತಿಸಿಕೊಂಡಿದೆ. 

ಇದೆಲ್ಲದರ ನಡುವೆ ಐಪಿಎಲ್‌ ಭಾಗ -2ನ ಇನ್ನುಳಿದ ಪಂದ್ಯಗಳಿಗೆ ಆರ್‌ಸಿಬಿ ಕ್ರಿಕೆಟಿಗರಾದ ಸ್ಪಿನ್ನರ್ ಆಡಂ ಜಂಪಾ ಹಾಗೂ ವೇಗಿ ಕೇನ್‌ ರಿಚರ್ಡ್‌ಸನ್‌ ಮಿಲಿಯನ್ ಡಾಲರ್ ಕ್ರಿಕೆಟ್‌ ಟೂರ್ನಿಯಿಂದ ಹೊರಗುಳಿಯುವುದು ಬಹುತೇಕ ಖಚಿತ ಎಂದು ವರದಿಯಾಗಿದೆ.

ಅಕ್ಟೋಬರ್ 17ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿದ್ದು, ಕಾಂಗರೂಗಳ ತಂಡದಲ್ಲಿ ಜಂಪಾ ಹಾಗೂ ರಿಚರ್ಡ್‌ಸನ್‌ ಸ್ಥಾನ ಪಡೆದಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ವರದಿಯ ಪ್ರಕಾರ ಕೇನ್‌ ರಿಚರ್ಡ್‌ಸನ್‌ ಐಪಿಎಲ್‌ನಲ್ಲಿ ಪಾಲ್ಗೊಳ್ಳದೇ ತವರಿನಲ್ಲೇ ಉಳಿಯುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. 

ಇನ್ನು ಆಸೀಸ್‌ ತಾರಾ ಲೆಗ್ ಸ್ಪಿನ್ನರ್ ಆಡಂ ಜಂಪಾ ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎನ್ನುವ ಕುರಿತಂತೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಇದುವರೆಗೂ ತೆಗೆದುಕೊಂಡಿಲ್ಲ.

14ನೇ ಆವೃತ್ತಿಯ ಐಪಿಎಲ್‌ ಆರಂಭವಾದಾಗ ಭಾರತ ಎರಡನೇ ಅಲೆಯ ಕೋವಿಡ್ ಭೀತಿ ಎದುರಿಸುತ್ತಿತ್ತು. ಹೀಗಾಗಿ ಭಾರತದಲ್ಲಿ ಆಯೋಜನೆಯಾಗಿದ್ದ ಐಪಿಎಲ್‌ನ ಬಯೋ ಬಬಲ್‌ ಅಷ್ಟೊಂದು ಸುರಕ್ಷಿತವಾಗಿಲ್ಲ ಎನ್ನುವ ಭೀತಿಯಿಂದ ಕೇನ್ ರಿಚರ್ಡ್‌ಸನ್ ಹಾಗೂ ಆಡಂ ಜಂಪಾ ಆರ್‌ಸಿಬಿ ತಂಡವನ್ನು ಅರ್ಧದಲ್ಲೇ ತೊರೆದು ಆಸ್ಟ್ರೇಲಿಯಾಗೆ ವಾಪಾಸಾಗಿದ್ದರು. 

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಭಾಗ-2ರಲ್ಲಿ ಪಾಲ್ಗೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ ನಿರಪೇಕ್ಷಣಾ ಪತ್ರ ನೀಡಿದೆ. ಹೀಗಾಗಿ ಆಸ್ಟ್ರೇಲಿಯಾದ ತಾರಾ ಕ್ರಿಕೆಟಿಗರಾದ ಡೇವಿಡ್‌ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್ ಸೇರಿದಂತೆ ಹಲವು ಆಸೀಸ್‌ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದು ಬಹುತೇಕ ಖಚಿತ ಎನಿಸಿದೆ.

click me!