T20 World Cup 2021: ಗಂಭೀರ್, ಬಟ್ಲರ್ ದಾಖಲೆ ಅಳಿಸಿ ಹಾಕಿದ ಕನ್ನಡಿಗ KL Rahul

First Published Nov 6, 2021, 6:55 AM IST

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ಟೀಂ ಇಂಡಿಯಾ (Team India) ಮತ್ತೊಂದು ಭರ್ಜರಿ ಜಯ ದಾಖಲಿಸಿದೆ. ಬೌಲರ್‌ಗಳ ಮಾರಕ ದಾಳಿ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ಗಳ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ನಮೀಬಿಯಾ ಎದುರು ಟೀಂ ಇಂಡಿಯಾ 8 ವಿಕೆಟ್‌ಗಳ ಜಯ ಸಾಧಿಸಿದೆ. ಇದೇ ವೇಳೆ ಕನ್ನಡಿಗ ಕೆ.ಎಲ್‌. ರಾಹುಲ್ (KL Rahul) 2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Team India

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಮೀಬಿಯಾ ಎದುರು ಟೀಂ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ನಮೀಬಿಯಾ ನೀಡಿದ್ದ 86 ರನ್‌ಗಳ ಸಾಧಾರಣ ಗುರಿಯನ್ನು ಟೀಂ ಇಂಡಿಯಾ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ

ಮೊದಲೆರಡು ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ ಇದಾದ ಬಳಿಕ ಆಫ್ಘಾನಿಸ್ತಾನ ಹಾಗೂ ನಮೀಬಿಯಾ ಎದುರು ಭರ್ಜರಿ ಪ್ರದರ್ಶನ ತೋರುವ ಮೂಲಕ ತನ್ನ ನೆಟ್‌ ರನ್‌ರೇಟ್‌ ಉತ್ತಮಪಡಿಸಿಕೊಂಡಿದೆ.
 

ನಮೀಬಿಯಾ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ಜೋಡಿಯಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಜೋಡಿ ಕೇವಲ 4.5 ಓವರ್‌ಗಳಲ್ಲಿ 70 ರನ್‌ಗಳ ಜತೆಯಾಟವಾಡುವ ಮೂಲಕ ಮಿಂಚಿನ ಆರಂಭ ಒದಗಿಸಿಕೊಟ್ಟಿತು.
 

ಅದರಲ್ಲೂ ಕನ್ನಡಿಗ ಕೆ.ಎಲ್. ರಾಹುಲ್‌ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ 2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅತಿವೇಗವಾಗಿ ಅರ್ಧಶತಕ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆ ನಿರ್ಮಿಸಿದ್ದಾರೆ.

jos buttler

ಈ ಮೊದಲು ಜೋಸ್ ಬಟ್ಲರ್ ಇದೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಆ ದಾಖಲೆಯನ್ನು ಇದೀಗ ರಾಹುಲ್ ಅಳಿಸಿ ಹಾಕಿದ್ದಾರೆ.
 

ಇನ್ನು ಇದೇ ವೇಳೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಅತಿವೇಗದ ಅರ್ಧಶತಕ ಪೂರೈಸಿದ ಎರಡನೇ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೂ ರಾಹುಲ್ ಭಾಜನರಾಗಿದ್ದಾರೆ.

ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ದ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆ ಇಂದಿಗೂ ಅಚ್ಚಳಿಯದೇ ಉಳಿದಿದೆ.
 

ಇನ್ನು ಗೌತಮ್ ಗಂಭೀರ್ 2009ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಆ ದಾಖಲೆಯನ್ನು ಅಳಿಸಿಹಾಕುವಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಯಶಸ್ವಿಯಾಗಿದ್ದಾರೆ.
 

click me!