T20 World Cup: Eng vs NZ ಇಂಗ್ಲೆಂಡ್ ಎದುರು ಗೆದ್ದರೂ ನೀಶಮ್ ಏಕೆ ಸಂಭ್ರಮಿಸಲಿಲ್ಲ..?

First Published Nov 11, 2021, 1:43 PM IST

ದುಬೈ: ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ (England Cricket Team) ತಂಡವನ್ನು ಮಣಿಸುವ ಮೂಲಕ ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ನ್ಯೂಜಿಲೆಂಡ್ ತಂಡವು (New Zealand Cricket) ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಗೆಲುವಿನೊಂದಿಗೆ 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಅನುಭವಿಸಿದ್ದ ಸೋಲಿನ ಲೆಕ್ಕಾಚಾರವನ್ನು ಚುಕ್ತಾ ಮಾಡಿದೆ. ಇಂಗ್ಲೆಂಡ್ ಎದುರು ಗೆಲ್ಲುತ್ತಿದ್ದಂತೆಯೇ ಇಡೀ ತಂಡವೇ ಸಂಭ್ರಮಿಸಿದರೂ ಸಹಾ, ಜೇಮ್ಸ್‌ ನೀಶಮ್ (James Neesham) ಹಾಗೂ ನಾಯಕ ಕೇನ್ ವಿಲಿಯಮ್ಸನ್‌ ಸುಮ್ಮನೇ ಕುಳಿತ್ತಿದ್ದರು. ಇದೀಗ ತಾವು ಸಂಭ್ರಮಿಸದಿರಲು ಕಾರಣವೇನು ಎನ್ನುವ ಕುತೂಹಲಕ್ಕೆ ನೀಶಮ್ ತೆರೆ ಎಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಇಂಗ್ಲೆಂಡ್ ವಿರುದ್ದ ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕೇನ್‌ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.

ಇಂಗ್ಲೆಂಡ್ ತಂಡವನ್ನು ಮಣಿಸುತ್ತಿದ್ದಂತೆಯೇ ಡಗೌಟ್‌ನಲ್ಲಿದ್ದಂತಹ ನ್ಯೂಜಿಲೆಂಡ್ ಕ್ರಿಕೆಟ್‌ ತಂಡದ ಆಟಗಾರರು, ಸಹಾಯಕ ಸಿಬ್ಬಂದಿ ಕುಣಿದು ಕುಪ್ಪಳಿಸಿದರು. ಆದರೆ ಅಲ್ಲೇ ಇದ್ದಂತಹ ಜೇಮ್ಸ್ ನೀಶಮ್ ಹಾಗೂ ಕೇನ್‌ ವಿಲಿಯಮ್ಸನ್‌ ಶಾಂತರೀತಿಯಿಂದ ಕುಳಿತುಕೊಂಡಂತಹ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವು, ಮೋಯಿನ್ ಅಲಿ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 166 ರನ್ ಕಲೆಹಾಕಿತು. ಈ ಮೂಲಕ ಮಹತ್ವದ ಪಂದ್ಯದಲ್ಲಿ ಕಿವೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿತು.

ಈ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಆರಂಭಿಕ ಆಘಾತ ಅನುಭವಿಸಿತಾದರೂ, ಮಧ್ಯಮ ಕ್ರಮಾಂಕದಲ್ಲಿ ಡೇರೆಲ್ ಮಿಚೆಲ್ ಹಾಗೂ ಡೆವೊನ್ ಕಾನ್‌ವೇ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

James Neesham

ಇನ್ನು ಮತ್ತೆ ಸತತ 2 ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ತಂಡವು ಕೊಂಚ ಆತಂಕಕ್ಕೆ ಸಿಲುಕಿದ್ದಾಗ ಜೇಮ್ಸ್ ನೀಶಮ್ ಕೇವಲ 11 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಸ್ಪೋಟಕ 27 ರನ್ ಬಾರಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವಲ್ಲಿ ಯಶಸ್ವಿಯಾದರು.
 

18ನೇ ಓವರ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿ, ಕೊನೆಯಲ್ಲಿ ನೀಶಮ್ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಸೇರಿದರು. ಆದರೆ 19ನೇ ಓವರ್‌ನಲ್ಲಿ ಡೇರಲ್ ಮಿಚೆಲ್ 20 ರನ್‌ ಚಚ್ಚುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು.

ಇದರ ಬೆನ್ನಲ್ಲೇ ಇಡೀ ಕಿವೀಸ್ ತಂಡ ಸಂಭ್ರಮದ ಅಲೆಯಲ್ಲಿ ತೇಲಿತು. ಆದರೆ ಜೇಮ್ಸ್‌ ನೀಶಮ್ ಕುಳಿತಲ್ಲಿಂದ ಕದಲಲಿಲ್ಲ ಹಾಗೂ ಸಂಭ್ರಮಿಸಲಿಲ್ಲ. ಆದರೆ ಇದೀಗ ನೀಶಮ್ ತಾವು ಹಾಗಿದಿದ್ದು ಏಕೆ ಎನ್ನುವ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.

ಖ್ಯಾತ ಕ್ರೀಡಾ ವೆಬ್‌ಸೈಟ್‌ ಇಎಸ್‌ಪಿಎನ್‌ ಕ್ರಿಕ್‌ಇನ್ಫೋ, ಕಿವೀಸ್ ಗೆದ್ದ ಕ್ಷಣದ ಫೋಟೋದೊಂದಿಗೆ ನೀಶಮ್‌ ಒಂಚೂರು ಅಲುಗಾಡಲಿಲ್ಲ ಎಂದು ಟ್ವೀಟ್ ಮಾಡಿತ್ತು. ಅದಕ್ಕೆ ಪ್ರತಿಯಾಗಿ ನೀಶಮ್, ಕೆಲಸ ಮುಗಿಯಿತಾ? ನನಗೇನೋ ಹಾಗನಿಸುತ್ತಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ನ್ಯೂಜಿಲೆಂಡ್ ತಂಡವು ಇದೇ ಮೊದಲ ಬಾರಿಸಿ ಚುಟುಕು ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲಲು ತುದಿಗಾಲಿನಲ್ಲಿ ನಿಂತಿದೆ. ಇಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಸೆಮೀಸ್‌ ಪಂದ್ಯದಲ್ಲಿ ವಿಜೇತರಾದ ತಂಡವು ಪ್ರಶಸ್ತಿಗಾಗಿ ನ್ಯೂಜಿಲೆಂಡ್ ಎದುರು ಕಾದಾಡಲಿದೆ.

click me!