15ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಜತೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದು ಆರ್‌ಸಿಬಿ ಅಭಿಮಾನಿಗಳಿಗೆ ಖುಷಿಯನ್ನು ತಂದಿತ್ತು.
ಇದಾದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮೆಗಾ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್, ವನಿಂದು ಹಸರಂಗ, ಹರ್ಷಲ್ ಪಟೇಲ್ ಸೇರಿದಂತೆ ಹಲವು ತಾರಾ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.
ಇದೆಲ್ಲದರ ನಡುವೆ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತೀಯ ಮೂಲದ ಬಹುಕಾಲ ಗೆಳತಿ ವಿನಿ ರಾಮನ್ ಅವರನ್ನು ವಿವಾಹವಾಗಲು ಸಜ್ಜಾಗಿದ್ದಾರೆ. ಮಾರ್ಚ್ 27ರಂದು ಮೆಲ್ಬೊರ್ನ್‌ನಲ್ಲಿ ಮ್ಯಾಕ್ಸ್‌ವೆಲ್ ಹಿಂದೂ ಸಂಪ್ರದಾಯದಂತೆ ವಿನಿ ರಾಮನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.
ಇದೆಲ್ಲದರ ನಡುವೆ ಗ್ಲೆನ್ ಮ್ಯಾಕ್ಸ್‌ವೆಲ್, ಫಾಕ್ಸ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಾವು ಮುಂಬರುವ ಪಾಕಿಸ್ತಾನ ಎದುರಿನ ಪ್ರವಾಸ ಹಾಗೂ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯ ಬಗ್ಗೆ ತುಟಿಬಿಚ್ಚಿದ್ದಾರೆ.
ಈ ಮೊದಲೇ ನಾನು ಕ್ರಿಕೆಟ್ ಅಸ್ಟ್ರೇಲಿಯಾದ ಜತೆ ಚರ್ಚಿಸಿ, ಎರಡು ವಾರಗಳು ಬಿಡುವು ಮಾಡಿಕೊಂಡು ಮದುವೆಯ ದಿನಾಂಕವನ್ನು ನಿಗದಿಪಡಿಸಿದ್ದೆವು. ಈ ಮೂಲಕ ನಾನು ಯಾವುದೇ ಸರಣಿಯಿಂದ ಹೊರಗುಳಿಯುವುದಿಲ್ಲ ಎಂದು ಖುಷಿಯಾಗಿತ್ತು.
ಆದರೆ ಕ್ರಿಕೆಟ್ ಆಸ್ಟ್ರೇಲಿಯಾವು, ಪಾಕಿಸ್ತಾನ ಪ್ರವಾಸ ಮಾಡಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಮದುವೆ ದಿನಾಂಕ ಹಾಗೂ ಪಾಕಿಸ್ತಾನ ಎದುರಿನ ಸರಣಿಯ ದಿನಾಂಕಗಳ ನಡುವೆ ಕ್ಲಾಶ್ ಆಗುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರವಾಸದಿಂದ ತಾವು ಹಿಂದೆ ಸರಿಯುತ್ತಿರುವುದಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ.
ಇನ್ನು 2022ನೇ ಸಾಲಿನ ಐಪಿಎಲ್ ಟೂರ್ನಿಯು ಮಾರ್ಚ್ 29ರಿಂದ ಆರಂಭವಾಗುವ ಸಾಧ್ಯತೆಯಿದೆ. ಇನ್ನೊಂದೆಡೆ ಮ್ಯಾಕ್ಸ್‌ವೆಲ್ ವಿವಾಹ ಮಾರ್ಚ್ 27ಕ್ಕೆ ನಿಶ್ಚಯವಾಗಿದೆ. ಹೀಗಾಗಿ ಮ್ಯಾಕ್ಸಿ ಆರ್‌ಸಿಬಿ ಪರ ಕೆಲವು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.