Team India ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಆರೆಸ್ಟ್ ನಂತರ ಬಿಡುಗಡೆ..!

First Published Oct 18, 2021, 10:10 AM IST

ಚಂಡೀಗಢ: ಭಾರತ ಕ್ರಿಕೆಟ್ ತಂಡದ (Indian Cricket Team) ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರನ್ನು ಪೊಲೀಸರು ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ. ಕಳೆದ ವರ್ಷ ಮಾಡಿದ ಒಂದು ತಪ್ಪಿಗೆ ಯುವಿ ಪೊಲೀಸ್‌ ಠಾಣೆ ಮೆಟ್ಟಿಲೇರಬೇಕಾಗಿ ಬಂದಿದೆ. ಇದಾದ ಬಳಿಕ ಜಾಮೀನಿನ ಮೇಲೆ ಯುವಿ ಬಿಡುಗಡೆಯಾಗಿದ್ದಾರೆ. ಯುಜುವೇಂದ್ರ ಚಹಲ್ (Yuzvendra Chahal) ಕುರಿತಂತೆ ನೀಡಿದ ಒಂದು ಹೇಳಿಕೆ ಸ್ಟೇಷನ್‌ ಮೆಟ್ಟಿಲೇರುವಂತೆ ಮಾಡಿದೆ. ಅಷ್ಟಕ್ಕೂ ಯುವಿ ಮಾಡಿದ ಎಡವಟ್ಟೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಟೀಂ ಇಂಡಿಯಾ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಅವರನ್ನು ಹರ್ಯಾಣ ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ರನ್ನು ಹರಾರ‍ಯಣ ಪೊಲೀಸರು ಬಂಧಿಸಿ, ಬಳಿಕ ಮಧ್ಯಂತರ ಜಾಮೀನಿನ ಮೂಲಕ ಬಿಡುಗಡೆ ಮಾಡಿದ್ದಾರೆ.

Yuvraj Singh-Yuzvendra Chahal

ಭಾರತದ ಸ್ಪಿನ್ನರ್‌ ಯುಜುವೇಂದ್ರ ಚಹಲ್‌ ಬಗ್ಗೆ ಯುವರಾಜ್‌ ಕಳೆದ ವರ್ಷ ಇನ್‌ಸ್ಟಾಗ್ರಂ ವಿಡಿಯೋವೊಂದರಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಬಳಿಕ ಈ ಬಗ್ಗೆ ಯುವರಾಜ್‌ ಉದ್ದೇಶಪೂರ್ವಕವಾಗಿ ಹೀಗೆ ಮಾತನಾಡಿದ್ದಲ್ಲ ಎಂದು ಕ್ಷಮೆಯಾಚಿಸಿದ್ದರು. 

2020ರ ಜೂನ್‌ನಲ್ಲಿ ಟೀಂ ಇಂಡಿಯಾ ಸಹ ಆಟಗಾರ ರೋಹಿತ್ ಶರ್ಮಾ ಜತೆ ಇನ್‌ಸ್ಟಾಗ್ರಾಂ ಲೈವ್‌ ಚಾಟ್‌ನಲ್ಲಿ ಮಾತನಾಡುವಾಗ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಕುರಿತಂತೆ ಯುವಿ ಜಾತಿ ನಿಂದಕ ಪದ ಬಳಕೆ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದು ವಿವಾದದ ತಿರುವು ಪಡೆದುಕೊಳ್ಳುತ್ತಿದ್ದಂತೆಯೇ ನನ್ನ ಅರಿವಿಲ್ಲದೆಯೇ ಈ ಘಟನೆ ನಡೆದಿದೆ. ನನ್ನ ಮಾತಿನಿಂದ ಯಾರ ಭಾವನೆಗಳಿಗೆ ಧಕ್ಕೆ ಬಂದಿದ್ದರೆ, ಕ್ಷಮೆಯಾಚಿಸುತ್ತೇನೆ. ಭಾರತದ ಜನರ ಮೇಲಿನ ನನ್ನ ಪ್ರೀತಿ ಎಂದೆಂದಿಗೂ ನನ್ನಲ್ಲಿ ಶಾಶ್ವತವಾಗಿರಲಿದೆ ಎಂದು ಯುವಿ ಕಳೆದ ವರ್ಷವೇ ಟ್ವೀಟ್ ಮೂಲಕ ಕ್ಷಮೆಯಾಚಿಸಿದ್ದರು.

ಆದರೆ ರಜನ್‌ ಕಲ್ಸನ್‌ ಎಂಬುವ ವ್ಯಕ್ತಿ ಈ ಬಗ್ಗೆ ಕೇಸ್‌ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಹರಾರ‍ಯಣ ಹೈಕೋರ್ಟ್‌ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಯುವರಾಜ್‌ಗೆ ಸೂಚಿಸಿತ್ತು. 

ವಿಚಾರಣೆಗೆ ಬಂದಾಗ ಯುವರಾಜ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಮಧ್ಯಂತರ ಜಾಮೀನಿನ ಮೂಲಕ ಬಿಡುಗಡೆ ಮಾಡಲಾಗಿದೆ. ಕೋರ್ಟ್ ಆದೇಶದಂತೆ ಯುವರಾಜ್ ಸಿಂಗ್ ಅವರನ್ನು ಆರೆಸ್ಟ್ ಮಾಡಲಾಗಿದೆ, ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

click me!