" ಈ ಇಬ್ಬರು ಟೀಂ ಇಂಡಿಯಾದ ಭವಿಷ್ಯದ ಸೂಪರ್‌ ಸ್ಟಾರ್‌ಗಳೆಂದು" ಬಣ್ಣಿಸಿದ ಅನಿಲ್‌ ಕುಂಬ್ಳೆ..! ಯಾರವರು?

First Published Feb 2, 2023, 9:18 AM IST

ಬೆಂಗಳೂರು(ಫೆ.02): ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಟೀಂ ಇಂಡಿಯಾ, ಇದೀಗ ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್ ಮೇಲೆ ಚಿತ್ತ ನೆಟ್ಟಿದೆ. ಹೀಗಾಗಿ ಹಲವು ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ಇದೀಗ ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ, ಭಾರತದ ಭವಿಷ್ಯದ ಸೂಪರ್‌ ಸ್ಟಾರ್‌ಗಳು ಯಾರೆಂದು ಹೆಸರಿಸಿದ್ದಾರೆ. ಅಷ್ಟಕ್ಕೂ ಕುಂಬ್ಳೆ ಹೆಸರಿಸಿದ ಆ ಇಬ್ಬರು ಸೂಪರ್ ಸ್ಟಾರ್‌ಗಳು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಭಾರತ ಕ್ರಿಕೆಟ್ ತಂಡವು ಈಗಾಗಲೇ ಕಪಿಲ್ ದೇವ್, ಸುನಿಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಹಲವು ಸೂಪರ್‌ ಸ್ಟಾರ್‌ಗಳನ್ನು ಜಗತ್ತಿಗೆ ಪರಿಚಯಿಸಿದೆ.

ಇದೀಗ ಭವಿಷ್ಯದ ಟೀಂ ಇಂಡಿಯಾ ಸೂಪರ್‌ ಸ್ಟಾರ್ ಆಟಗಾರರು ಯಾರು ಎನ್ನುವ ಚರ್ಚೆಯೂ ಜೋರಾಗಿದೆ. ಈ ಕುರಿತಂತೆ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ.
 

ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಶುಭ್‌ಮನ್ ಗಿಲ್‌, ಉಮ್ರಾನ್ ಮಲಿಕ್‌ ಅವರಂತಹ ಆಟಗಾರರು ಸದ್ಯ ಮಿಂಚುತ್ತಿದ್ದರೂ, ಇವರೆಲ್ಲರ ಹೆಸರನ್ನು ಬಿಟ್ಟು, ಅನಿಲ್‌ ಕುಂಬ್ಳೆ ಬೇರೆ ಇಬ್ಬರು ಆಟಗಾರರನ್ನು ಸೂಪರ್‌ ಸ್ಟಾರ್ ಪಟ್ಟ ಅಲಂಕರಿಸಲಿರುವ ಆಟಗಾರರನ್ನು ಸೂಚಿಸಿದ್ದಾರೆ.

ಹೌದು, ಯುವ ಎಡಗೈ ವೇಗಿ ಆರ್ಶದೀಪ್ ಸಿಂಗ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌, ಟೀಂ ಇಂಡಿಯಾದ ಭವಿಷ್ಯದ ಸೂಪರ್‌ ಸ್ಟಾರ್‌ಗಳಾಗಲಿದ್ದಾರೆ ಎಂದು ಅನಿಲ್ ಕುಂಬ್ಳೆ ಭವಿಷ್ಯ ನುಡಿದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಹಲವು ಆಟಗಾರರಿದ್ದರೂ ಸಹಾ, ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಎಡಗೈ ವೇಗಿ ಆರ್ಶದೀಪ್ ಸಿಂಗ್, ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಆಗುವ ಸಾಧ್ಯತೆಯಿದೆ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
 

ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ರಾಂಚಿ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್‌ ಕಿಶನ್‌, ಭವಿಷ್ಯದ ಸೂಪರ್‌ ಸ್ಟಾರ್ ಆಗುವ ಸಾಧ್ಯತೆಯಿದೆ ಎಂದಿದ್ದಾರೆ. ಈ ಇಬ್ಬರು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಅತ್ಯುತ್ತಮ ಪ್ರದರ್ಶನ ತೋರುತ್ತಲೇ ಬಂದಿದ್ದಾರೆ.

ಆರ್ಶದೀಪ್ ಸಿಂಗ್, ಜುಲೈ 2022 ರಲ್ಲಿ ಇಂಗ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಮಗೆ ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ಆರ್ಶದೀಪ್ ಸಿಂಗ್, ತಂಡದ ಪ್ರಮುಖ ವೇಗಿಯಾಗುವತ್ತ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ.
 

ಇನ್ನು ಇಶಾನ್ ಕಿಶನ್‌, ಬಾಂಗ್ಲಾದೇಶ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ದ್ವಿಶತಕ ಚಚ್ಚಿದ್ದರು. ಅಗ್ರಕ್ರಮಾಂಕದಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಇಶಾನ್ ಕಿಶನ್, ಹೆಚ್ಚಿನ ಅವಕಾಶ ದೊರೆತರೇ, ತಂಡದ ಅವಿಭಾಜ್ಯ ಅಂಗವಾಗಿ ಬೆಳೆದು ನಿಂತರೂ ಅಚ್ಚರಿಪಡುವಂತಿಲ್ಲ.
 

click me!