ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಈ ಹಿಂದೆ ಯಾವ ತಂಡವೂ ಮಾಡದ ಅಪರೂಪದ ದಾಖಲೆ ನಿರ್ಮಿಸಿದ ಪ್ರಚಂಡ ಇಂಗ್ಲೆಂಡ್..!

First Published | Oct 5, 2023, 6:50 PM IST

ಅಹಮದಾಬಾದ್‌(ಅ.05): 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ. 2023ರ ಐಸಿಸಿ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಹಿಂದೆ ಯಾವ ತಂಡವೂ ಮಾಡದ ಅಪರೂಪದ ದಾಖಲೆಯೊಂದನ್ನು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದೆ. ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದೆ.
 

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ಕಣಕ್ಕಿಳಿಯುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ.
 

Latest Videos


ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 282 ರನ್ ಕಲೆಹಾಕುವ ಮೂಲಕ ಕಿವೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಇನ್ನು ಇದೇ ಇನಿಂಗ್ಸ್‌ನಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡವು ಈ ಹಿಂದೆ ಯಾವ ತಂಡವೂ ಮಾಡದ ಅಪರೂಪದ ದಾಖಲೆಯೊಂದನ್ನು ನಿರ್ಮಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದೆ.
 

ಹೌದು, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಂಡದ ಎಲ್ಲಾ 11 ಆಟಗಾರರು ಎರಡಂಕಿ ಮೊತ್ತ ದಾಖಲಿಸಿದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಇಂಗ್ಲೆಂಡ್ ತಂಡ ಪಾತ್ರವಾಗಿದೆ. ಕಿವೀಸ್ ಎದುರು ಇಂಗ್ಲೆಂಡ್‌ನ ಎಲ್ಲಾ 11 ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಸಫಲರಾಗಿದ್ದಾರೆ. 

ಇದುವರೆಗೂ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 4,658 ಏಕದಿನ ಪಂದ್ಯಗಳು ನಡೆದಿವೆ. ಆದರೆ ಈ ಇನಿಂಗ್ಸ್‌ಗೂ ಮುನ್ನ ಜಗತ್ತಿನ ಯಾವ ತಂಡದ ಎಲ್ಲಾ 11 ಬ್ಯಾಟರ್‌ಗಳು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಎರಡಂಕಿ ಮೊತ್ತ ದಾಖಲಿಸಿರಲಿಲ್ಲ.
 

Moeen Ali

ಈ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಜೋ ರೂಟ್‌ 77 ರನ್ ಬಾರಿಸಿದ್ದು ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡರೆ, ಕ್ರಿಸ್ ವೋಕ್ಸ್‌ ಹಾಗೂ ಮೋಯಿನ್ ಅಲಿ ತಲಾ 11 ರನ್ ಬಾರಿಸಿದ್ದ ಕನಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು.
 

ಇಂಗ್ಲೆಂಡ್ ನೀಡಿರುವ 283 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿ ಕಿವೀಸ್ ಗೆಲುವಿನ ನಗೆ ಬೀರಲಿದೆಯಾ? ಕಳೆದ ವಿಶ್ವಕಪ್ ಫೈನಲ್ ಪಂದ್ಯದ ಸೋಲಿಗೆ ನ್ಯೂಜಿಲೆಂಡ್ ತಂಡ ತಿರುಗೇಟು ನೀಡಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ

click me!