ಬುಮ್ರಾರನ್ನು ಕೋತಿಗೆ ಹೋಲಿಸಿದ ಇಂಗ್ಲೆಂಡ್ ಮಾಜಿ ಆಟಗಾರ್ತಿ! ಇದೆಂಥಾ ಅತಿರೇಕ

First Published | Dec 16, 2024, 1:15 PM IST

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಗಾಬಾ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್‌ ಬುಮ್ರಾ ಅವರನ್ನು ಇಂಗ್ಲೆಂಡ್ ಮಾಜಿ ಆಟಗಾರ್ತಿ ಹಾಗೂ ಹಾಲಿ ವೀಕ್ಷಕ ವಿವರಣೆಗಾರ್ತಿ ಜನಾಂಗೀಯ ನಿಂದನೆ ಮಾಡಿ ಸುದ್ದಿಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

ಜಸ್ಪ್ರೀತ್ ಬುಮ್ರಾ & ಈಷಾ ಗುಹಾ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 445 ರನ್ ಗಳಿಸಿ ಆಲೌಟ್ ಆಯಿತು. ಭಾರತಕ್ಕೆ ನಿರಂತರವಾಗಿ ತಲೆನೋವಾಗಿರುವ ಟ್ರಾವಿಸ್ ಹೆಡ್ ಅದ್ಭುತ ಶತಕ (160 ಎಸೆತಗಳಲ್ಲಿ 152 ರನ್) ಬಾರಿಸಿ ಔಟಾದರು. ಸ್ಟೀವ್ ಸ್ಮಿತ್ ಸುಮಾರು ಎರಡು ವರ್ಷಗಳ ನಂತರ ಶತಕ ಬಾರಿಸಿದ್ದಾರೆ. ಭಾರತದ ಪರ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಪಡೆದು ಮಿಂಚಿದರು. ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಮಾಜಿ ಮಹಿಳಾ ಆಟಗಾರ್ತಿ ಇಷಾ ಗುಹಾ, ಬುಮ್ರಾರನ್ನು ಕೋತಿಗಳ ಜೊತೆ ಹೋಲಿಸಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಬೌಲಿಂಗ್

ಒಂದು ಟಿವಿ ವಾಹಿನಿಗೆ ಬ್ರಾಡ್ಲಿ ಮತ್ತು ಇಷಾ ಗುಹಾ ಕಾಮೆಂಟ್ರಿ ನೀಡುತ್ತಿದ್ದರು. ಆಗ ಬ್ರಾಡ್ಲಿ, ಬುಮ್ರಾ ಅತ್ಯುತ್ತಮವಾಗಿ ಆಡುತ್ತಿರುವುದನ್ನು ಸೂಚಿಸುವಂತೆ 'ಮೋಸ್ಟ್ ವ್ಯಾಲ್ಯುವಬಲ್ ಪ್ಲೇಯರ್' ಎಂದು ಹೊಗಳಿದರು. ಇದನ್ನು ಮುಂದುವರೆಸಿದ ಇಷಾ ಗುಹಾ, ಬುಮ್ರಾರನ್ನು ಹೊಗಳುವುದೆಂದು ಭಾವಿಸಿ 'ಮೋಸ್ಟ್ ವ್ಯಾಲ್ಯುವಬಲ್ ಪ್ರೈಮೇಟ್' ಎಂದು ಹೇಳಿದರು. 

Tap to resize

ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ

ಸಾಮಾನ್ಯವಾಗಿ ಕೋತಿಗಳಂತಹ ದೊಡ್ಡ ಸಸ್ತನಿಗಳನ್ನು ಪ್ರೈಮೇಟ್ ಎಂದು ಕರೆಯುತ್ತಾರೆ. ಹಾಗಾಗಿ ಇಷಾ ಗುಹಾ ಪ್ರೈಮೇಟ್ ಎಂದು ಕರೆದಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಪ್ರಪಂಚದಾದ್ಯಂತದ ಭಾರತೀಯ ಅಭಿಮಾನಿಗಳು ಇಷಾ ಗುಹಾರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ''ಒಬ್ಬ ಆಟಗಾರನನ್ನು ಹೊಗಳುವುದಕ್ಕೆ ಹಲವು ಒಳ್ಳೆಯ ಪದಗಳಿವೆ. ಆದರೆ ಇಷಾ ಗುಹಾ ಉದ್ದೇಶಪೂರ್ವಕವಾಗಿ ಈ ಪದವನ್ನು ಬಳಸಿದ್ದಾರೆ'' ಎಂದು ಹೇಳಿದ್ದಾರೆ.

ಇನ್ನು ಕೆಲವು ಭಾರತೀಯ ಅಭಿಮಾನಿಗಳು, ''ವಿಿದೇಶಿ ನೆಲದಲ್ಲಿ ಭಾರತೀಯ ಆಟಗಾರರು ಚೆನ್ನಾಗಿ ಆಡುವುದನ್ನು ಸಹಿಸಲಾರದೆ ವಿದೇಶಿ ಮಾಜಿ ಆಟಗಾರರು ನಮ್ಮ ಆಟಗಾರರನ್ನು ಟೀಕಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಹಾಗಾಗಿ ಇಷಾ ಗುಹಾ ತಾನು ಬಳಸಿದ ಪದವನ್ನು ಹಿಂಪಡೆಯಬೇಕು. ಅವರು ವೀಕ್ಷಣೆ ನೀಡುವುದನ್ನು ನಿಷೇಧಿಸಬೇಕು'' ಎಂದು ಹೇಳಿದ್ದಾರೆ.

2007-08ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಆಸ್ಟ್ರೇಲಿಯಾದ ಆಟಗಾರ ಆಂಡ್ರ್ಯೂ ಸೈಮಂಡ್ಸ್ ಭಾರತೀಯ ಆಟಗಾರ ಹರ್ಭಜನ್ ಸಿಂಗ್ ಅವರನ್ನು 'ಮಂಕಿ' ಎಂದು ಕರೆದಿದ್ದರು. ಈಗ ಅದೇ ರೀತಿ ಇಷಾ ಗುಹಾ ಬುಮ್ರಾ ಬಗ್ಗೆ ಹೇಳಿರುವುದು ದೊಡ್ಡ ಸಂಚಲನ ಮೂಡಿಸಿದೆ. 

ಇನ್ನು ಇಷಾ ಗುಹಾ ಅವರ ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಇಂಗ್ಲೆಂಡ್ ಮಾಜಿ ಆಟಗಾರ್ತಿ, ತಮ್ಮ ಅಚಾತುರ್ಯದ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನಾನು ಬುಮ್ರಾ ಅವರನ್ನು ಹೊಗಳುವ ಭರದಲ್ಲಿ ಆ ಪದ ಬಳಸಿದ್ದೇನೆ. ಅದರಿಂದ ನೋವಾಗಿದ್ದರೇ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಭಾರತೀಯ ಮೂಲದ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಆಗಿದ್ದ ಇಷಾ ಗುಹಾ, ಆಂಗ್ಲರ ಪರ 8 ಟೆಸ್ಟ್, 83 ಏಕದಿನ ಹಾಗೂ 22 ಟಿ20 ಪಂದ್ಯಗಳನ್ನಾಡಿದ್ದಾರೆ. ಇಷಾ ಗುಹಾ 2002ರಲ್ಲಿ ಇಂಗ್ಲೆಂಡ್ ಮಹಿಳಾ ತಂಡವನ್ನು ಪ್ರತಿನಿಧಿಸುವ ಮೂಲಕ, ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ ಭಾರತೀಯ ಮೂಲದ ಮೊದಲ ಮಹಿಳಾ ಕ್ರಿಕೆಟರ್ ಎನ್ನುವ ಇತಿಹಾಸವನ್ನು ನಿರ್ಮಿಸಿದ್ದರು.

Latest Videos

click me!