ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಟೀಂ ಇಂಡಿಯಾದಿಂದ ಹೊರಬಿದ್ದ ಅಜಿಂಕ್ಯ ರಹಾನೆ ದೇಶೀ ಕ್ರಿಕೆಟ್‌ನಲ್ಲಿ ಬೌಲರ್‌ಗಳ ಮೇಲೆ ಸುನಾಮಿಯಂತೆ ಎದ್ದಿದ್ದಾರೆ. ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ರನ್‌ಗಳ ಪ್ರವಾಹವನ್ನೇ ಹರಿಸುತ್ತಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಒಂದರ ನಂತರ ಒಂದರಂತೆ ಬಿರುಗಾಳಿಯ ಇನ್ನಿಂಗ್ಸ್‌ಗಳನ್ನು ಆಡುತ್ತಾ ಸಂಚಲನ ಮೂಡಿಸುತ್ತಿದ್ದಾರೆ.
ವಿದರ್ಭ ಮತ್ತು ಆಂಧ್ರ ತಂಡಗಳ ವಿರುದ್ಧ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ ರಹಾನೆ, ಬರೋಡ ವಿರುದ್ಧವೂ ಸಹ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ದುರದೃಷ್ಟವಶಾತ್ ಕೇವಲ 2 ರನ್‌ಗಳ ಅಂತರದಿಂದ ಶತಕವನ್ನು ತಪ್ಪಿಸಿಕೊಂಡರು. ರಹಾನೆ ಸತತ 3 ಅರ್ಧಶತಕಗಳನ್ನು ಗಳಿಸಿದರು. ಮೂರು ಬಾರಿ ಕೆಲವೇ ರನ್‌ಗಳಿಂದ ಶತಕ ತಪ್ಪಿಸಿಕೊಂಡರು.
ಬರೋಡ ವಿರುದ್ಧ ರಹಾನೆ ಬ್ಯಾಟಿಂಗ್ ಅಬ್ಬರ
ಅಜಿಂಕ್ಯ ರಹಾನೆ ಅವರ ಪ್ರಸ್ತುತ ಫಾರ್ಮ್ ನೋಡಿದರೆ ಬೌಲರ್‌ಗಳಿಗೆ ಅವರನ್ನು ತಡೆಯುವುದು ಸುಲಭವಲ್ಲ. 8 ಇನ್ನಿಂಗ್ಸ್‌ಗಳಲ್ಲಿ 5 ಅರ್ಧಶತಕಗಳನ್ನು ಗಳಿಸಿದ್ದಾರೆ. ಟಿ20ಯಲ್ಲಿ ಬರೋಡ ವಿರುದ್ಧ 11 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳೊಂದಿಗೆ 98 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಿಂದ ಮುಂಬೈ 6 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಇನ್ನು ಫೈನಲ್‌ನಲ್ಲೂ ಅದ್ಭುತ ಪ್ರದರ್ಶನ ತೋರಿ ಮುಂಬೈ ಚಾಂಪಿಯನ್ ಪಟ್ಟ ಅಲಂಕರಿಸಿತು.
3 ಇನ್ನಿಂಗ್ಸ್‌ಗಳಲ್ಲಿ 3 ಅರ್ಧಶತಕ
ಅಜಿಂಕ್ಯ ರಹಾನೆ ಅವರ ಕೊನೆಯ 3 ಇನ್ನಿಂಗ್ಸ್‌ಗಳನ್ನು ಗಮನಿಸಿದರೆ, ಅವರು ಸತತ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ರಹಾನೆ ತಮ್ಮ ಇನ್ನಿಂಗ್ಸ್‌ಗಳಲ್ಲಿ 95, 84 ಮತ್ತು 98 ರನ್ ಗಳಿಸಿದರು. ಮೂರು ಇನ್ನಿಂಗ್ಸ್‌ಗಳಲ್ಲಿ ಒಟ್ಟು 12 ಸಿಕ್ಸರ್‌ಗಳು ಮತ್ತು 30 ಬೌಂಡರಿಗಳನ್ನು ಬಾರಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ರಹಾನೆ ಕೇವಲ 56 ಎಸೆತಗಳಲ್ಲಿ 98 ರನ್ ಗಳಿಸುವ ಮೂಲಕ ತಂಡ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೂರು ಬಾರಿ ತಪ್ಪಿದ ರಹಾನೆ ಶತಕ
ಅಜಿಂಕ್ಯ ರಹಾನೆ ಶತಕಕ್ಕೆ ಕೇವಲ 2 ರನ್‌ಗಳ ಅಂತರದಲ್ಲಿದ್ದರು. ತಂಡದ ಗೆಲುವಿಗೆ ಕೇವಲ 2 ರನ್‌ಗಳು ಬೇಕಾಗಿದ್ದವು. ಆದರೆ ಬೌಲರ್ ಅಭಿಮನ್ಯು ರಾಜಪೂತ್ ಬಹುಶಃ ಉದ್ದೇಶಪೂರ್ವಕವಾಗಿ ವೈಡ್ ಎಸೆತವನ್ನು ಎಸೆದಿರಬಹುದು. ಇದರಿಂದಾಗಿ ಸ್ಕೋರ್ ಸಮವಾಯಿತು. ಈ ಎಸೆತಕ್ಕೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಮುಂದಿನ ಎಸೆತದಲ್ಲಿ ದೊಡ್ಡ ಹೊಡೆತ ಬಾರಿಸಲು ಪ್ರಯತ್ನಿಸಿ ರಹಾನೆ ಔಟಾದರು. ರಹಾನೆ ಕಳೆದ 3 ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ 90+ ರನ್‌ಗಳಿಗೆ ಔಟಾಗಿದ್ದರು.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 9 ಪಂದ್ಯಗಳನ್ನಾಡಿ 8 ಇನ್ನಿಂಗ್ಸ್‌ಗಳಿಂದ 58.62ರ ಬ್ಯಾಟಿಂಗ್ ಸರಾಸರಿಯಲ್ಲಿ 5 ಅರ್ಧಶತಕ ಸಹಿತ 469 ರನ್ ಸಿಡಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸುವುದರೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇದು ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಕೆಕೆಆರ್ ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಕೆಕೆಆರ್ ಫ್ರಾಂಚೈಸಿಯು ರಹಾನೆಯನ್ನು ಖರೀದಿಸಿತ್ತು.
ಭಾರತ ತಂಡಕ್ಕೆ ಮರಳುವ ಬಗ್ಗೆ ರಹಾನೆ ಹೇಳಿದ್ದೇನು?
ಟೀಂ ಇಂಡಿಯಾಗೆ ಮರಳುವ ಬಗ್ಗೆ ಅಜಿಂಕ್ಯ ರಹಾನೆ ಮಾತನಾಡಿ, “ಟೆಸ್ಟ್ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡುವ ಮೊದಲು, ನಾನು ದೇಶೀ ಕ್ರಿಕೆಟ್‌ನಲ್ಲಿ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಆರು ಸೀಸನ್‌ಗಳನ್ನು ಆಡಿದ್ದೆ. ನಂತರ ಟೆಸ್ಟ್‌ಗಳಲ್ಲಿ ಪಾದಾರ್ಪಣೆ ಮಾಡಿದೆ. ನಾನು ಇನ್ನೂ ಕ್ರೀಡೆಯನ್ನು ಪ್ರೀತಿಸುತ್ತೇನೆ. ಭಾರತವನ್ನು ಪ್ರತಿನಿಧಿಸುವ ಶಕ್ತಿ ಇನ್ನೂ ನನ್ನಲ್ಲಿದೆ. ತಂಡಕ್ಕಾಗಿ ಯಾವಾಗಲೂ ಉತ್ತಮ ಪ್ರದರ್ಶನ ನೀಡುತ್ತಲೇ ಇರುತ್ತೇನೆ” ಎಂದು ಹೇಳಿದರು.