ICC T20 World Cup Final ಗೂ ಮುನ್ನ ಕ್ರಿಕೆಟ್ ಅಭಿಮಾನಿಗಳು ತಿಳಿದಿರಲೇಬೇಕಾದ ಇಂಟ್ರೆಸ್ಟಿಂಗ್ ಮಾಹಿತಿಗಳಿವು..!

First Published Nov 13, 2021, 12:28 PM IST

ಬೆಂಗಳೂರು: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಫೈನಲ್‌ (ICC T20 World Cup Final) ಪಂದ್ಯ ಆರಂಭಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ನ್ಯೂಜಿಲೆಂಡ್ ತಂಡವು (New Zealand Cricket Team) ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು (Australia Cricket Team) ಎದುರಿಸಲಿದೆ. ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಏನಾಗುತ್ತೆ?, ಒಂದು ವೇಳೆ ಪಂದ್ಯ ಟೈ ಆದರೆ ಏನಾಗುತ್ತೆ? ಹೀಗೆ ಫೈನಲ್‌ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಕ್ರಿಕೆಟ್ ಅಭಿಮಾನಿಗಳು ತಿಳಿದಿರಲೇ ಬೇಕಾದ ಕೆಲವೊಂದು ಉಪಯುಕ್ತ ಮಾಹಿತಿ ಇಲ್ಲಿವೆ ನೋಡಿ..

ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅರ್ಹತಾ ಸುತ್ತಿನ ತಂಡಗಳು ಸೇರಿದಂತೆ ಒಟ್ಟು 16 ತಂಡಗಳು ಪಾಲ್ಗೊಂಡಿದ್ದು, ಇದೀಗ ಸೆಮೀಸ್‌ವರೆಗೆ ಒಟ್ಟು 44 ಪಂದ್ಯಗಳು ನಡೆದಿದ್ದು, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಫೈನಲ್‌ಗೆ ಲಗ್ಗೆಯಿಟ್ಟಿವೆ.
 

ಎರಡು ಸೆಮಿಫೈನಲ್‌ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದವು. ಇದೀಗ ನ್ಯೂಜಿಲೆಂಡ್ ತಂಡವು ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದರೆ, 2010ರ ಬಳಿಕ ಇದೀಗ ಆಸೀಸ್ ಎರಡನೇ ಬಾರಿಗೆ ಫೈನಲ್‌ ತಲುಪಿ, ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ.

ನವೆಂಬರ್ 14ರಂದು ಭಾರತೀಯ ಕಾಲಮಾನ ಸಂಜೆ.7.30ರಿಂದ ಫೈನಲ್‌ ಪಂದ್ಯ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಎರಡೂ ತಂಡಗಳು ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ ಟ್ರೋಫಿಗೆ ಮುತ್ತಿಕ್ಕಲು ತುದಿಗಾಲಿನಲ್ಲಿ ನಿಂತಿವೆ.

ಇನ್ನು ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಪಂದ್ಯಕ್ಕೆ ಅಡಚಣೆಯುಂಟಾದರೆ ಮರುದಿನ ಅಂದರೆ ನವೆಂಬರ್ 15ರಂದು ಪಂದ್ಯ ನಡೆಯಲಿದೆ. ಒಂದು ವೇಳೆ ಎರಡನೇ ಇನಿಂಗ್ಸ್‌ 10 ಓವರ್ ಮುಕ್ತಾಯದ ಬಳಿಕ ಪಂದ್ಯಕ್ಕೆ ಅಡಚಣೆಯುಂಟಾದರೆ ಡೆಕ್ವರ್ತ್‌ ಲೂಯಿಸ್ ನಿಯಮ ಬಳಸಿಕೊಂಡ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ಐಸಿಸಿ ತಿಳಿಸಿದೆ.

ಇನ್ನು ನಿಗದಿತ ದಿನದಂದೇ ಪಂದ್ಯ ಅರಂಭವಾಗಿ, ಕಾರಣಾಂತರದಿಂದ ಓವರ್‌ ಕಡಿತಗೊಳಿಸಿ ಆ ಬಳಿಕ ಪಂದ್ಯ ಸ್ಥಗಿತಗೊಂಡರೆ, ಮೀಸಲು ದಿನದಂದು ಅಂದರೆ ಮರುದಿನ ಪಂದ್ಯದ ಕೊನೆಯ ಎಸೆತ ಎಲ್ಲಿಂದ ನಿಂತಿತ್ತೋ ಅಲ್ಲಿಂದಲೇ ಮುಂದುವರೆಯಲಿದೆ ಎನ್ನುವುದನ್ನು ಐಸಿಸಿ ಸ್ಪಷ್ಟಪಡಿಸಿದೆ.

ಒಂದು ವೇಳೆ ಫೈನಲ್ ಪಂದ್ಯವು ಟೈ ಆದರೆ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಗುತ್ತದೆ. ಸೂಪರ್‌ ಓವರ್‌ ಕೂಡಾ ಟೈ ಆದರೆ ಫಲಿತಾಂಶ ಬರುವವರೆಗೂ ಸೂಪರ್‌ ಓವರ್‌ ನಡೆಸಲು ಐಸಿಸಿ ತೀರ್ಮಾನಿಸಿದೆ.

ಒಂದು ವೇಳೆ ಸೂಪರ್‌ ಓವರ್ ಟೈ ಆಗಿ, ಆ ಬಳಿಕ ಪಂದ್ಯ ನಡೆಸಲು ಸಾಧ್ಯವಾಗದೇ ಇದ್ದರೆ, ಎರಡೂ ತಂಡಗಳನ್ನು ಜಂಟಿ ಚಾಂಪಿಯನ್‌ ಎಂದು ಘೋಷಿಸಲಾಗುವುದು ಎಂದು ಐಸಿಸಿ ತಿಳಿಸಿದೆ

click me!