IPL ಪ್ಲೇ ಆಫ್‌ ರೇಸ್‌ನಿಂದ ಗುಜರಾತ್ ಔಟ್: 3 ಸ್ಥಾನಕ್ಕೆ ಈ 6 ತಂಡಗಳ ಫೈಟ್..! ಹೀಗಿದೆ ನೋಡಿ ಹೊಸ ಲೆಕ್ಕಾಚಾರ

First Published | May 14, 2024, 6:17 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ನಿರ್ಣಾಯಕ ಘಟ್ಟದತ್ತ ಸಾಗುತ್ತಿರುವುದು ಒಂದು ಕಡೆಯಾದರೆ, ಪ್ಲೇ ಆಫ್‌ ರೇಸ್‌ ದಿನದಿಂದ ದಿನಕ್ಕೆ ರೋಚಕತೆಯನ್ನುಂಟು ಮಾಡುತ್ತಿದೆ. ಇದೀಗ 3 ಸ್ಥಾನಕ್ಕಾಗಿ 6 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಆರ್‌ಸಿಬಿ ಸೇರಿದಂತೆ ಎಲ್ಲಾ ತಂಡಗಳ ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ ನೋಡಿ.
 

17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 63 ಪಂದ್ಯಗಳು ಮುಕ್ತಾಯವಾಗಿದ್ದು, ಇನ್ನು ಕೇವಲ ಒಂದು ತಂಡ ಮಾತ್ರ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ಇದೀಗ ಅಧಿಕೃತವಾಗಿ ಮೊದಲ ಕ್ವಾಲಿ ಫೈಯರ್‌ಗೆ ಅರ್ಹತೆ ಪಡೆದುಕೊಂಡಿದೆ.

ಗುಜರಾತ್-ಕೆಕೆಆರ್ ನಡುವಿನ ಪಂದ್ಯ ಮಳೆಯಿಂದ ರದ್ದಾಗುತ್ತಿದ್ದಂತೆಯೇ, ಗುಜರಾತ್ ಟೈಟಾನ್ಸ್ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಇನ್ನೊಂದು ಕಡೆ ಒಂದು ದಶಕದ ಬಳಿಕ ಕೆಕೆಆರ್ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಗಿಟ್ಟಿಸಿಕೊಂಡಿದೆ.

Latest Videos


ಇನ್ನು 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಹಾಲಿ ರನ್ನರ್‌ಅಪ್ ಗುಜರಾತ್ ಟೈಟಾನ್ಸ್ ಹಾಗೂ ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿದ್ದ ಪಂಜಾಬ್ ಕಿಂಗ್ಸ್ ತಂಡಗಳು ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿವೆ.

ಹೀಗಾಗಿ ಇನ್ನುಳಿದ ಮೂರು ಪ್ಲೇ ಆಫ್‌ ಸ್ಥಾನಕ್ಕೆ ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

ಗುಜರಾತ್ ಟೈಟಾನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ರದ್ದಾದ ಬೆನ್ನಲ್ಲೇ ಪ್ಲೇ ಆಫ್‌ ಲೆಕ್ಕಾಚಾರಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದ್ದು, ಯಾವ ತಂಡದ ಪ್ಲೇ ಚಾನ್ಸ್ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ

1. ರಾಜಸ್ಥಾನ ರಾಯಲ್ಸ್:

ರಾಜಸ್ಥಾನ ರಾಯಲ್ಸ್ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಇದರ ಹೊರತಾಗಿಯೂ ರಾಯಲ್ಸ್ 12 ಪಂದ್ಯಗಳನ್ನಾಡಿ 16 ಅಂಕ ಗಳಿಸಿದೆ. ರಾಜಸ್ಥಾನ ತಂಡದ ನೆಟ್‌ ರನ್‌ರೇಟ್ +0.349 ಆಗಿದ್ದು, ಪ್ಲೇ ಆಫ್‌ಗೆ ಬಹುತೇಕ ಒಂದು ಕಾಲು ಇಟ್ಟಿದೆ.

ರಾಜಸ್ಥಾನ ತಂಡವು ಮೇ 15ರಂದು ಪಂಜಾಬ್ ಕಿಂಗ್ಸ್ ಹಾಗೂ ಮೇ 19ರಂದು ಕೆಕೆಆರ್ ಎದುರು ಕಣಕ್ಕಿಳಿಯಲಿದೆ. ಈ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯ ಗೆದ್ದರೂ ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಲಿದೆ. ಒಂದು ವೇಳೆ ಎರಡೂ ಪಂದ್ಯ ಸೋತರೂ ಸಹ ಉಳಿದ ತಂಡಗಳಿಗೆ ಹೋಲಿಸಿದರೆ ನೆಟ್‌ ರನ್‌ರೇಟ್ ಉತ್ತಮವಾಗಿರುವುದರಿಂದ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.

2. ಚೆನ್ನೈ ಸೂಪರ್ ಕಿಂಗ್ಸ್:

ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸದ್ಯ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ 5 ಬಾರಿಯ ಚಾಂಪಿಯನ್ ಚೆನ್ನೈ ಮೇ 18ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ. ಈ ಪಂದ್ಯ ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ.

ಸದ್ಯ ಚೆನ್ನೈ ನೆಟ್‌ ರನ್‌ರೇಟ್ +0.528 ಆಗಿದ್ದು, ಒಂದು ವೇಳೆ ಆರ್‌ಸಿಬಿ ಎದುರು ಅಲ್ಪ ಅಂತರದಲ್ಲಿ ಜಯಿಸಿದರೂ ಸಹ ನಾಲ್ಕನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಲಿದೆ. ಒಂದು ವೇಳೆ ಸಿಎಸ್‌ಕೆ 18 ರನ್‌ಗೂ ಅಧಿಕ ಅಂತರದಲ್ಲಿ ಸೋತರೆ ಅಥವಾ 18.1 ಓವರ್‌ನಲ್ಲಿ ಆರ್‌ಸಿಬಿ ಗುರಿ ಬೆನ್ನತ್ತಿದರೆ ಪ್ಲೇ ಆಫ್ ಕನಸು ನುಚ್ಚು ನೂರಾಗಲಿದೆ.

3. ಸನ್‌ರೈಸರ್ಸ್ ಹೈದರಾಬಾದ್:

ಸನ್‌ರೈಸರ್ಸ್ ಹೈದರಾಬಾದ್ ತಂಡ ಕೂಡಾ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅವಕಾಶವಿದೆ. ಸದ್ಯ ಆರೆಂಜ್ ಆರ್ಮಿ 12 ಪಂದ್ಯಗಳನ್ನಾಡಿ 14 ಅಂಕ ಗಳಿಸಿದೆ. ಸನ್‌ರೈಸರ್ಸ್ ನೆಟ್‌ ರನ್‌ರೇಟ್ +0.406 ಆಗಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೇ 16ರಂದು ಗುಜರಾತ್ ಹಾಗೂ ಮೇ 19ರಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯವನ್ನು ದೊಡ್ಡ ಅಂತರದಲ್ಲಿ ಜಯಿಸಿದರೆ ಮೊದಲ ಕ್ವಾಲಿಫೈಯರ್‌ಗೇರುವ ಅವಕಾಶವಿದೆ. ಒಂದು ವೇಳೆ ಒಂದು ಪಂದ್ಯ ಜಯಿಸಿದರೂ ನೆಟ್‌ ರನ್‌ರೇಟ್ ಆಧಾರದಲ್ಲಿ ಪ್ಲೇ ಆಫ್ ಪ್ರವೇಶಿಸಲಿದೆ.

ಒಂದು ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ತನ್ನ ಪಾಲಿನ ಎರಡೂ ಪಂದ್ಯವನ್ನು ಸೋತರೇ, ಚೆನ್ನೈ ಸೂಪರ್ ಕಿಂಗ್ಸ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ಈ ಮೂರು ತಂಡಗಳ ಪೈಕಿ ಎರಡು ತಂಡಗಳಿಗೆ ಪ್ಲೇ ಆಫ್‌ಗೇರಲು ಅನುಕೂಲವಾಗಲಿದೆ

4. ರಾಯಲ್ ಚಾಲೆಂಜರ್ಸ್ ಬೆಂಗಳೂರು;

ಸತತ 5 ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡವು ಪ್ಲೇ ಆಫ್‌ಗೇರಬೇಕಿದ್ದರೇ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಕೊನೆಯ ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ದಾಖಲಿಸಬೇಕು.

ಹೌದು, ಆರ್‌ಸಿಬಿ ತಂಡವು ಚೆನ್ನೈ ನೆಟ್‌ ರನ್‌ರೇಟ್ ಹಿಂದಿಕ್ಕಬೇಕಿದ್ದರೇ, ಮೊದಲು ಬ್ಯಾಟ್ ಮಾಡಿದರೆ, ಕನಿಷ್ಠ 18 ರನ್ ಅಂತರದ ಗೆಲುವು ದಾಖಲಿಸಬೇಕು. ಒಂದು ವೇಳೆ ಚೇಸಿಂಗ್ ಮಾಡಿದರೆ ಚೆನ್ನೈ ಎದುರು 18.1 ಓವರ್‌ನಲ್ಲಿ ಗುರಿ ತಲುಪಬೇಕು.

ಇನ್ನುಳಿದಂತೆ ಲಖನೌ ಸೂಪರ್ ಜೈಂಟ್ಸ್ ತಂಡ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಜಯಿಸಬಾರದು. ಹೀಗಾದಲ್ಲಿ ಮಾತ್ರ ಆರ್‌ಸಿಬಿ ಪ್ಲೇ ಆಫ್‌ಗೇರಲಿದೆ. ಅದೃಷ್ಟ ಕೈ ಹಿಡಿದರೆ ಆರ್‌ಸಿಬಿ ಖಂಡಿತ ನಾಕೌಟ್ ಹಂತ ತಲುಪಲಿದೆ.

5. ಲಖನೌ ಸೂಪರ್ ಜೈಂಟ್ಸ್:

ಕೆ ಎಲ್ ರಾಹುಲ್ ನೇತೃತ್ವದ ಲಖನೌ ತಂಡವು 12 ಪಂದ್ಯಗಳನ್ನಾಡಿ 12 ಅಂಕ ಹೊಂದಿದೆ. ಸದ್ಯ ಲಖನೌ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಲಖನೌ ತಂಡದ ನೆಟ್‌ ರನ್‌ರೇಟ್ -0.769 ಆಗಿದೆ.

ಲಖನೌ ತಂಡವು ಇಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮೇ 17ರಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಒಂದು ವೇಳೆ ಲಖನೌ ತಂಡವು ಎರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಜಯಸಿದರೆ ಅನಾಯಾಸವಾಗಿ ಪ್ಲೇ ಆಫ್‌ಗೇರಲಿದೆ.

ಒಂದು ವೇಳೆ ಲಖನೌ ಎರಡು ಪಂದ್ಯಗಳನ್ನು ಸಣ್ಣ ಅಂತರದಲ್ಲಿ ಜಯಿಸಿದರೆ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದರೂ ಅಚ್ಚರಿಯಿಲ್ಲ. ಯಾಕೆಂದರೆ ಸನ್‌ರೈಸರ್ಸ್ ಹಾಗೂ ಚೆನ್ನೈ ರನ್‌ರೇಟ್ ಉತ್ತಮವಾಗಿದ್ದು, ಆ ಎರಡು ತಂಡಗಳು ತಲಾ ಒಂದು ಪಂದ್ಯ ಗೆದ್ದರೂ ಲಖನೌ ಪ್ಲೇ ಆಫ್‌ ರೇಸ್‌ನಿಂದ ಹೊರಬೀಳಲಿದೆ.

6. ಡೆಲ್ಲಿ ಕ್ಯಾಪಿಟಲ್ಸ್:

ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಹೆಸರಿಗಷ್ಟೇ ಪ್ಲೇ ಆಫ್‌ ರೇಸ್‌ನಲ್ಲಿದೆ. ಡೆಲ್ಲಿ ಪ್ಲೇ ಆಫ್ ಪ್ರವೇಶಿಸಬೇಕಿದ್ದರೇ ಪವಾಡವೇ ನಡೆಯಬೇಕಿದೆ. ಯಾಕೆಂದರೆ ಡೆಲ್ಲಿ ಬಳಿ ಕೇವಲ 12 ಅಂಕವಿದೆ. ಆದರೆ ನೆಟ್‌ ರನ್‌ರೇಟ್ -0.482 ಆಗಿದೆ.

ಡೆಲ್ಲಿ ಪ್ಲೇ ಆಫ್ ಪ್ರವೇಶಿಸಬೇಕಿದ್ದರೇ, ಲಖನೌ ಎದುರು ಅತಿದೊಡ್ಡ ಅಂತರದ ಗೆಲುವು ಸಾಧಿಸಬೇಕು. ಇದರ ಜತೆಗೆ ಸನ್‌ರೈಸರ್ಸ್ ಹೈದರಾಬಾದ್ ತನ್ನ ಪಾಲಿನ ಎರಡು ಪಂದ್ಯವನ್ನು ಸೋಲಬೇಕು.  ಇನ್ನು ಚೆನ್ನೈ ತಂಡವು ಆರ್‌ಸಿಬಿಯನ್ನು ಸೋಲಿಸಬೇಕು, ಇದಷ್ಟೇ ಅಲ್ಲದೇ ಮುಂಬೈ ಎದುರು ಲಖನೌ ಸೋಲಬೇಕು. ಇದಿಷ್ಟು ಆದರೆ ಮಾತ್ರ ಡೆಲ್ಲಿ ಪ್ಲೇ ಆಫ್‌ಗೇರಲು ಸಾಧ್ಯ.

click me!