RCB ಪರ ಇಲಿ, ಬೇರೆ ತಂಡ ಕೂಡಿಕೊಂಡ ಬಳಿಕ ಹುಲಿಯಾದ ಟಾಪ್ 3 ಕ್ರಿಕೆಟಿಗರು..!

First Published Feb 3, 2023, 12:33 PM IST

ಬೆಂಗಳೂರು: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು 15 ಆವೃತ್ತಿಗಳು ಯಶಸ್ವಿಯಾಗಿ ಮುಗಿದಿದ್ದು, ಇದೀಗ 16ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಿದ್ದತೆಗಳು ಆರಂಭವಾಗಿವೆ. ಐಪಿಎಲ್ ಹಲವು ತಾರಾ ಆಟಗಾರರನ್ನು ಜಗತ್ತಿಗೆ ಪರಿಚಯಿಸಿದೆ. ಇನ್ನು ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಕಪ್ ಗೆಲ್ಲುವ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿದೆ.

ಇನ್ನು ಆರ್‌ಸಿಬಿ ತಂಡವನ್ನು ಹಲವು ತಾರಾ ಆಟಗಾರರು ಪ್ರತಿನಿಧಿಸಿದ್ದರೂ, ಕಪ್ ಗೆಲ್ಲಿಸಿಕೊಡಲು ಸಾಧ್ಯವಾಗಿಲ್ಲ. ಇನ್ನು ಕೆಲ ಆಟಗಾರರು ಆರ್‌ಸಿಬಿ ಪರ ಆಡುವಾಗ ಮಂಕಾಗಿದ್ದರು, ಆದರೆ ಬೇರೆ ತಂಡ ಕೂಡಿಕೊಂಡ ಬಳಿಕ ಅವರ ಝಲಕ್ ಬೇರೆಯದ್ದೇ ರೀತಿಯಲ್ಲಿದೆ. ಅಂತಹ ಮೂರು ಆಟಗಾರರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
 

1. ಶೇನ್ ವಾಟ್ಸನ್‌

ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಶೇನ್ ವಾಟ್ಸನ್‌ ಕೂಡಾ ಒಬ್ಬರೆನಿಸಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ವಾಟ್ಸನ್‌, ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

ವಾಟ್ಸನ್‌, ಆರ್‌ಸಿಬಿ ಪರ 24 ಪಂದ್ಯಗಳನ್ನಾಡಿ ಕೇವಲ 13.16ರ ಬ್ಯಾಟಿಂಗ್ ಸರಾಸರಿಯಲ್ಲಿ 250 ರನ್‌ಗಳನ್ನಷ್ಟೇ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಕೇವಲ 25 ವಿಕೆಟ್ ಪಡೆದಿದ್ದರು.

ಆದರೆ ಮರು ವರ್ಷ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಕೂಡಿಕೊಂಡ ವಾಟ್ಸನ್‌, ಮೈಚಳಿ ಬಿಟ್ಟು ಬ್ಯಾಟಿಂಗ್ ಮಾಡುವ ಮೂಲಕ ಸಿಎಸ್‌ಕೆ ತಂಡವು 4ನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರವಹಿಸಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ.

2. ಕೆ ಎಲ್ ರಾಹುಲ್:

ಆಟಗಾರರ ಮೇಲೆ ನಂಬಿಕೆ ಇಡದೇ ಹೋದದ್ದೇ ಆರ್‌ಸಿಬಿ ತಂಡದ ಅತಿದೊಡ್ಡ ಪ್ರಮಾದ ಎನ್ನುವುದಕ್ಕೆ ಕೆ ಎಲ್ ರಾಹುಲ್, ಜೀವಂತ ಉದಾಹರಣೆ. ರಾಹುಲ್ 2016ರಲ್ಲಿ, ಆರ್‌ಸಿಬಿ ಪರ 14 ಪಂದ್ಯಗಳನ್ನಾಡಿ 44.11ರ ಸರಾಸರಿಯಲ್ಲಿ 397 ರನ್ ಚಚ್ಚಿದ್ದರು.

ಆದರೆ ಮರು ವರ್ಷ ಗಾಯದ ಸಮಸ್ಯೆಯಿಂದ ಐಪಿಎಲ್ ಆಡಿರಲಿಲ್ಲ. ಹೀಗಾಗಿ ಆರ್‌ಸಿಬಿ ಫ್ರಾಂಚೈಸಿ 2018ರ ಐಪಿಎಲ್‌ಗೂ ಮುನ್ನ ಅವರನ್ನು ತಂಡದಿಂದ ಕೈಬಿಟ್ಟಿತು. 2018ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಕೂಡಿಕೊಂಡ ಕೆ ಎಲ್ ರಾಹುಲ್, ಬಳಿಕ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

ಕೆ ಎಲ್ ರಾಹುಲ್, ಐಪಿಎಲ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಜತೆಗೆ ಸ್ಥಿರ ಪ್ರದರ್ಶನದ ಮೂಲಕ ರಾಹುಲ್ ಮಿಂಚುತ್ತಿದ್ದಾರೆ. ಸದ್ಯ ಕೆ ಎಲ್ ರಾಹುಲ್, ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ.

3. ಮೋಯಿನ್ ಅಲಿ 

ಮೋಯಿನ್ ಅಲಿ ಕೂಡಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. 13ನೇ ಆವೃತ್ತಿಯ ಐಪಿಎಲ್ ಬಳಿಕ ಅವರನ್ನು ರಿಲೀಸ್ ಮಾಡಲಾಗಿತ್ತು. 
 

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೋಯಿನ್ ಅಲಿ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡದ ಪರ ಮೂರನೇ ಗರಿಷ್ಠ ಸ್ಕೋರರ್‌ ಎನಿಸಿದ್ದರು. 15 ಇನಿಂಗ್ಸ್‌ಗಳಲ್ಲಿ ಮೋಯಿನ್ ಅಲಿ 357 ರನ್‌ ಬಾರಿಸಿದ್ದರು. 

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಋತುರಾಜ್ ಗಾಯಕ್ವಾಡ್‌ ಹಾಗೂ ಫಾಫ್ ಡು ಪ್ಲೆಸಿಸ್‌ ಬಳಿಕ ಮೋಯಿನ್ ಅಲಿ ಚೆನ್ನೈ ಸೂಪರ್‌ ಕಿಂಗ್ಸ್ ಪರ ಮೂರನೇ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದರು. ಈಗಲೂ ಮೋಯಿನ್ ಅಲಿ ಸಿಎಸ್‌ಕೆ ತಂಡದ ನಂಬಿಗಸ್ಥ ಆಲ್ರೌಂಡರ್ ಆಗಿ ಬೆಳೆದುನಿಂತಿದ್ದಾರೆ.
 

click me!