ಭಾರತದಲ್ಲಿ ಕಾರು ಖರೀದಿಸಲು ಕಠಿಣ ನಿಯಮಗಳೇನು ಇಲ್ಲ. ಡೌನ್‌ಪೇಮೆಂಟ್ ನೀಡಿ, ಉಳಿದ ಮೊತ್ತವನ್ನು ಲೋನ್ ಮಾಡಿದರೆ ಇಷ್ಟವಾದ ಕಾರು ಮನೆ ಮುಂದೆ ಬಂದಿರುತ್ತದೆ.
ಭಾರತ ಸೇರಿದಂತೆ ಬಹುತೇಕ ದೇಶಗಳಲ್ಲಿ ಇದೇ ನಿಯಮ. ಆದರೆ ಸಿಂಗಾಪೂರದಲ್ಲಿ ಕಾರು ಖರೀದಿ ಸುಲಭದ ಮಾತಲ್ಲ. ಪುಟ್ಟ ದೇಶವಾದರೂ ಇಲ್ಲಿರುವುದು ಕಠಿಣ ನಿಯಮ. ಕೇವಲ ಶ್ರೀಮಂತರಿಗೆ ಮಾತ್ರ ಇಲ್ಲಿ ಕಾರು ಖರೀದಿಸಲು ಸಾಧ್ಯ.
ಸಿಂಗಾಪುರದ ನಗರ,ಪಟ್ಟಣ ಎಲ್ಲವೂ ಅಚ್ಚುಕಟ್ಟು. ಶುಚಿತ್ವ, ಶಿಸ್ತಿಗೆ ಪ್ರಾಶಸ್ತ್ಯ. ಈ ಪುಟ್ಟ ದೇಶದಲ್ಲಿ 1990ರಲ್ಲಿ ಕಾರು ಖರೀದಿಗೆ ಹೊಸ ನಿಯಮ ಜಾರಿಗೆ ತರಲಾಗಿದೆ. ಕಾರಣ ಅತೀಯಾದ ವಾಹನಗಳಿಂದ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ನಿಯಮ ತರಲಾಗಿದೆ.
ಸಿಂಗಾಪುರದಲ್ಲಿನ ವಾಹನ ನಿಯಂತ್ರಣಕ್ಕೆ ತರಲು 1990ರಲ್ಲಿ ಸರ್ಕಾರ ಕಾರು ಖರೀದಿಸುವ ಮೊದಲು ಅರ್ಹತೆಯ ಪ್ರಮಾಣಪತ್ರ(Certificate of Entitlement) ಕಡ್ಡಾಯಗೊಳಿಸಿತು.
ಈ ಪ್ರಮಾಣ ಪತ್ರ ಸುಲಭಾಗಿ ಸಿಗುವುದಿಲ್ಲ. ಈ ಪ್ರಮಾಣ ಪತ್ರಕ್ಕೆ ಬಿಡ್ಡಿಂಗ್ ನಡೆಯಲಿದೆ. ಈ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡು ಪ್ರಮಾಣ ಪತ್ರ ಖರೀದಿಸಬೇಕು. ಕನಿಷ್ಠ 64.35 ಲಕ್ಷ ರೂಪಾಯಿ ನೀಡಿದರೆ ಮಾತ್ರ ಈ ಪ್ರಮಾಣ ಪತ್ರ ಸಿಗಲಿದೆ.
ಅರ್ಹತೆ ಪ್ರಮಾಣ ಪತ್ರ ಪಡೆದ ಬಳಿಕ ಇಷ್ಟದ ಕಾರು ಖರೀದಿಸಲು ಸಾಧ್ಯವಿದೆ. ಇದು ಕೇವಲ ಪ್ರಮಾಣ ಪತ್ರ, ಬಳಿಕ ಮಾರುಕಟ್ಟೆಯಲ್ಲಿರುವ ಬೆಲೆಯಲ್ಲಿ ಕಾರು ಖರೀದಿಸಬೇಕು.
ಸಿಂಗಾಪುರದಲ್ಲಿ ಒಂದು ಸಾಮಾನ್ಯ ಪ್ರಿಮಿಯಂ ಕಾರು ಖರೀದಿಸಲು ಭಾರತೀಯ ರೂಪಾಯಿಗಳಲ್ಲಿ 1 ಕೋಟಿ ರೂಪಾಯಿ ಅಗತ್ಯವಿದೆ. ಪ್ರಮಾಣ ಪತ್ರ ಹಾಗೂ ಕಾರಿನ ಬೆಲೆ ಒಟ್ಟುಗೂಡಿಸಿದರೆ ಕೋಟಿ ರೂಪಾಯಿ ದಾಟಲಿದೆ.
ಇಷ್ಟಕ್ಕೆ ಸಿಂಗಾಪುರದ ಕಾರು ಖರೀದಿ ನಿಯಮ ಮುಗಿದಿಲ್ಲ. ಒಂದು ಬಾರಿ ಪ್ರಮಾಣ ಪತ್ರ ಪಡೆದರೆ ಜೀವಮಾನ ಪರ್ಯಂತ ಈ ಪ್ರಮಾಣ ಪತ್ರ ಮಾನ್ಯವಾಗಿರುವುದಿಲ್ಲ. ಅರ್ಹತೆ ಪ್ರಮಾಣ ಪತ್ರ ಅವಧಿ 10 ವರ್ಷ ಮಾತ್ರ.
10 ವರ್ಷದ ಬಳಿಕ ಈ ಪ್ರಮಾಣ ಪತ್ರವನ್ನು ನವೀಕರಣ ಮಾಡಬೇಕು. ಇಷ್ಟಾದರೂ ಕೋವಿಡ್ ಬಳಿಕ ಸಿಂಗಾಪುರದಲ್ಲಿ ಕಾರುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸರ್ಕಾರ ಹೇಳಿದೆ.