ಯುವ ಕಾಂಗ್ರೆಸ್‌ನಲ್ಲಿ ಮಹಿಳಾ ನಾಯಕಿಯರನ್ನು ವ್ಯವಸ್ಥಿತವಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ: ದೀಪಿಕಾ ರೆಡ್ಡಿ ಗಂಭೀರ ಆರೋಪ!

Published : May 18, 2026, 04:03 PM IST

ಯುವ ಕಾಂಗ್ರೆಸ್‌ನಲ್ಲಿ ತಮ್ಮ ಹುದ್ದೆಯನ್ನು ತಡೆಹಿಡಿದಿರುವುದನ್ನು ವೈಯಕ್ತಿಕ ಸೇಡಿನ ಕ್ರಮ ಎಂದು ದೀಪಿಕಾ ರೆಡ್ಡಿ ಆರೋಪಿಸಿದ್ದಾರೆ. ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, ಮಹಿಳೆಯರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ  ಎಂದಿದ್ದಾರೆ.

PREV
15
ಹುದ್ದೆ ತಡೆಹಿಡಿದಿರುವುದು ವೈಯಕ್ತಿಕ ಸೇಡಿನ ಕ್ರಮ

ತಮ್ಮ ಹುದ್ದೆಯನ್ನು ತಡೆಹಿಡಿದಿರುವ ಯುವ ಕಾಂಗ್ರೆಸ್ ನಿರ್ಧಾರದ ವಿರುದ್ಧ ದೀಪಿಕಾ ರೆಡ್ಡಿ ಅಧಿಕೃತ ಪ್ರೆಸ್‌ನೋಟ್ ಬಿಡುಗಡೆ ಮಾಡುವ ಮೂಲಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ನನ್ನ ಹುದ್ದೆಯನ್ನು ತಡೆಹಿಡಿದಿರುವುದು ಕಾನೂನುಬಾಹಿರ ಹಾಗೂ ಪ್ರತೀಕಾರದ ಕ್ರಮವಾಗಿದೆ. ಇದು ಪಕ್ಷದ ಯಾವುದೇ ಶಿಸ್ತಿನ ಕ್ರಮವಲ್ಲ, ಬದಲಿಗೆ ನನ್ನ ವಿರುದ್ಧ ಮಾಡಲಾಗಿರುವ ವೈಯಕ್ತಿಕ ಸೇಡಿನ ರಾಜಕೀಯ" ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.

25
ದೇಶದಲ್ಲೇ ಅತಿ ಹೆಚ್ಚು ಮತ ಪಡೆದ ಹೆಗ್ಗಳಿಕೆ

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ತಾವು ಗಳಿಸಿದ ಜನಾದೇಶವನ್ನು ಉಲ್ಲೇಖಿಸಿರುವ ದೀಪಿಕಾ ರೆಡ್ಡಿ, "ನಾನು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಬರೋಬ್ಬರಿ 2.95 ಲಕ್ಷ ಮತಗಳನ್ನು ಪಡೆದಿದ್ದೇನೆ. ಇಡೀ ದೇಶದಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದ ಮಹಿಳಾ ಅಭ್ಯರ್ಥಿಗಳಲ್ಲಿ ನಾನು ಕೂಡ ಒಬ್ಬಳಾಗಿದ್ದೇನೆ. ಪುರುಷ ಪ್ರಾಬಲ್ಯದ ರಾಜಕೀಯ ವಾತಾವರಣದಲ್ಲೂ ನಾನು ಅವರ ವಿರುದ್ಧ ಧೈರ್ಯವಾಗಿ ಹೋರಾಟ ನಡೆಸಿದ್ದೇನೆ. ಚುನಾವಣೆಯ ಬಳಿಕವೂ ಪಕ್ಷದ ಸಂಘಟನೆಗಾಗಿ ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ" ಎಂದು ತಮ್ಮ ಸಾಧನೆಯನ್ನು ನೆನಪಿಸಿದ್ದಾರೆ.

35
ಅಧ್ಯಕ್ಷ ಎಚ್.ಎಸ್. ಮಂಜುನಾಥ್ ವಿರುದ್ಧ ಗಂಭೀರ ಆರೋಪ

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ದೀಪಿಕಾ, "ಅಧ್ಯಕ್ಷ ಮಂಜುನಾಥ್ ಅವರು ತೀವ್ರ ಅಭದ್ರತೆ ಮತ್ತು ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ನನಗಿರುವ ಸಾರ್ವಜನಿಕ ಬೆಂಬಲವನ್ನು ನೋಡಿ ಸಹಿಸಲಾರದೆ, ನನ್ನನ್ನು ಬೆದರಿಸಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಚುನಾವಣೆಯ ಮುಕ್ತಾಯದ ನಂತರವೂ ನನ್ನ ವಿರುದ್ಧ ನಿರಂತರವಾಗಿ ರಾಜಕೀಯ ಪಿತೂರಿ ನಡೆಸಲಾಗುತ್ತಿದ್ದು, ತೀವ್ರ ಮಾನಸಿಕ ಕಿರುಕುಳ ನೀಡಲಾಗಿದೆ" ಎಂದು ಕಿಡಿಕಾರಿದ್ದಾರೆ.

45
ಮಹಿಳೆಯರಿಗೆ ಅಸುರಕ್ಷಿತ ವಾತಾವರಣ

ಯುವ ಕಾಂಗ್ರೆಸ್‌ನಲ್ಲಿ ಮಹಿಳಾ ನಾಯಕಿಯರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, "ಮಂಜುನಾಥ್ ಗೌಡ ನೇತೃತ್ವದ ಯುವ ಕಾಂಗ್ರೆಸ್‌ನಲ್ಲಿ ಮಹಿಳಾ ನಾಯಕಿಯರನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯುವ ಕಾಂಗ್ರೆಸ್ ಕಚೇರಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ವಾತಾವರಣವಾಗಿ ನಿರ್ಮಾಣಗೊಂಡಿದೆ. ಈ ಸ್ತ್ರೀ ದ್ವೇಷದ ಪಿತೂರಿ ಮತ್ತು ಸೇಡಿನ ರಾಜಕೀಯದ ವಿರುದ್ಧ ನಾನು ಯಾವುದೇ ಕಾರಣಕ್ಕೂ ಮೌನವಾಗಿ ಕೂರುವುದಿಲ್ಲ" ಎಂದು ಎಚ್ಚರಿಸಿದ್ದಾರೆ.

55
ಹೈಕಮಾಂಡ್ ಮೇಲಿನ ನಿಷ್ಠೆ ಅಚಲ, ರಾಷ್ಟ್ರೀಯ ನಾಯಕರ ಭೇಟಿ

ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಸ್ಪಷ್ಟನೆ ನೀಡಿರುವ ದೀಪಿಕಾ ರೆಡ್ಡಿ, "ಇಂತಹ ಯಾವುದೇ ದ್ವೇಷದ ಕ್ರಮಗಳು ನನ್ನನ್ನು ಬೆದರಿಸಲು ಸಾಧ್ಯವಿಲ್ಲ. ಲಕ್ಷಾಂತರ ಯುವ ಜನತೆ ನನಗೆ ನೀಡಿರುವ ಜನಾದೇಶವನ್ನು ಇಂತಹ ಯಾವುದೇ ಕಾನೂನುಬಾಹಿರ ಆದೇಶಗಳು ಅಳಿಸಿಹಾಕಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ ಮೇಲಿನ ನನ್ನ ನಿಷ್ಠೆ ಎಂದಿಗೂ ಅಚಲವಾಗಿರುತ್ತದೆ. ನನ್ನ ವಿರುದ್ಧ ನಡೆದಿರುವ ಈ ಇಡೀ ಅನ್ಯಾಯದ ವಿಚಾರವನ್ನು ನಾನು ಶೀಘ್ರದಲ್ಲೇ ದೆಹಲಿಯ ರಾಷ್ಟ್ರೀಯ ನಾಯಕರ ಮುಂದೆ ತೆಗೆದುಕೊಂಡು ಹೋಗಿ ನ್ಯಾಯ ಕೇಳಲಿದ್ದೇನೆ" ಎಂದು ಪ್ರೆಸ್‌ನೋಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

Read more Photos on
click me!

Recommended Stories