ಕೇಬಲ್ ಸಮಸ್ಯೆಯಿಂದ ಸುದ್ದಿಯಾಗಿದ್ದ ಪೀಣ್ಯ ಫ್ಲೈಓವರ್ ಕುರಿತ ಮಾಹಿತಿ ಇಲ್ಲಿದೆ. ಮೇಲ್ಸೇತುವೆಯು ಭಾರ ತಡೆಯುವ ಸಾಮರ್ಥ್ಯ ಹೊಂದಿದೆಯೇ ಎಂದು ಮೇ 5 ರಿಂದ ಲೋಡ್ ಟೆಸ್ಟಿಂಗ್ ನಡೆಸಿದೆ. ಈ ಪರೀಕ್ಷೆಯ ಫಲಿತಾಂಶ ಹೊರ ಬಂದಿದೆ.
ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್ ಸದೃಢವಾಗಿದ್ದು ಲೋಡ್ ಟೆಸ್ಟಿಂಗ್‌ನಲ್ಲಿ ಪಾಸ್ ಆಗಿದೆ. ಇದರಿಂದಾಗಿ ತಿಂಗಳೊಳಗೆ ಎಲ್ಲ ಬಗೆಯ ವಾಹನಗಳು ವಾರದ 7 ದಿನವೂ ಯಾವುದೇ ತಡೆ ಇಲ್ಲದಂತೆ ಮೇಲ್ಸೇತುವೆ ಮೇಲೆ ಸಂಚರಿಸಲು ಕಾಲ ಕೂಡಿಬರಲಿದೆ.
ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯದ ರಾಷ್ಟ್ರೀಯ ಹೆದ್ದಾರಿ- 4 ರಲ್ಲಿ ಬರುವ ಫ್ಲೈಓವರ್(ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಇದಾಗಿದ್ದು ಭಾರೀ ವಾಹನಗಳು ಅಧಿಕ ತೂಕದೊಂದಿಗೆ ಸಂಚರಿಸಿದ್ದರಿಂದ 8ನೇ ಮೈಲಿ ಜಂಕ್ಷನ್ ಸಮೀಪ 102 ಮತ್ತು 103 ನೇ ಪಿಲ್ಲರ್ ನಡುವೆ ಎರಡು ಕೇಬಲ್‌ಗಳು 2021 ಡಿಸೆಂಬರ್ ಕೊನೆಯ ವಾರದಲ್ಲಿ ಬಾಗಿದ್ದರಿಂದ ಸಮಸ್ಯೆ ಉಂಟಾಗಿತ್ತು.
25
ಮುಂಬೈನ್ ಪ್ರೆಸಿನೇಟ್ ಕಂಪನಿ
ಮುಂಬೈನ್ ಪ್ರೆಸಿನೇಟ್ ಕಂಪನಿಯು ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು ಮೊದಲಿಗೆ 120 ಪಿಲ್ಲರ್ ನಡುವೆ ತಲಾ ಎರಡರಂತೆ ಹೊಸದಾಗಿ 240 ಕೇಬಲ್‌ಗಳನ್ನು ಅಳವಡಿಸಲಾಗಿತ್ತು. ಬಳಿಕ ಪ್ರತಿ ಪಿಲ್ಲರ್‌ನ ತಲಾ 10 ಕೇಬಲ್‌ನಂತೆ 1200 ಕೇಬಲ್‌ಗಳನ್ನೂ ಬದಲಾಯಿಸಿ ಮೇಲ್ಸೇತುವೆಯನ್ನು ಸದೃಢಗೊಳಿಲಾಗಿತ್ತು. ಇದೀಗ ಮೇಲ್ಸೇತುವೆಯು ಭಾರ ತಡೆಯುವ ಸಾಮರ್ಥ್ಯ ಹೊಂದಿದೆಯೇ ಎಂದು ಮೇ 5 ರಿಂದ ಲೋಡ್ ಟೆಸ್ಟಿಂಗ್ ನಡೆಸಿದ್ದು ಇದರಲ್ಲಿ ಮೇಲ್ಸೇತುವೆ ಪಾಸ್ ಆಗಿದೆ.
35
ಹೇಗಿತ್ತು ಲೋಡ್ ಟೆಸ್ಟಿಂಗ್?
ತಲಾ 30 ಟನ್ ತೂಕದ 6 ಟ್ರಕ್‌ಗಳನ್ನು ಸಿದ್ಧಪಡಿಸಿಕೊಂಡು ಮೇಲ್ಸೇತುವೆಯ ಮೇಲೆ ಒಂದು ಟ್ರಕ್ ನಿಲ್ಲಿಸಿ ಪಿಲ್ಲರ್ ಮೇಲ್ಭಾಗದ ಡಯಲ್ ಗೇಜ್ ಎಷ್ಟು ಕೆಳಕ್ಕೆ ಬರುತ್ತದೆ ಎಂದು ಅಳತೆ ತೆಗೆದುಕೊಳ್ಳಲಾಗಿದೆ. 1 ಗಂಟೆಯ ಬಳಿಕ ಮತ್ತೊಂದು ಟ್ರಕ್ ಅನ್ನು ಮೇಲ್ಸೇತುವೆ ಮೇಲೆ ಕಳುಹಿಸಿ ಪುನಃ ಡಯಲ್ ಗೇಜ್ ಎಷ್ಟು ಕೆಳಕ್ಕೆ ಹೋಗಿದೆ ಎಂದು ಲೆಕ್ಕ ಹಾಕಲಾಗಿದೆ. ಹೀಗೆ ಒಂದೊಂದು ಗಂಟೆಗೆ ಒಂದೊಂದು ಟ್ರಕ್ ನಿಲ್ಲಿಸಿ ಅಳತೆ ತೆಗೆದುಕೊಳ್ಳಲಾಗಿದೆ.
ಮೇಲ್ಸೇತುವೆ ಮೇಲೆ ಎಲ್ಲಾ 6 ಟ್ರಕ್‌ಗಳು ನಿಂತ ಬಳಿಕ 24 ಗಂಟೆ ಎಲ್ಲಾ ಟ್ರಕ್‌ಗಳನ್ನು ಹಾಗೆಯೇ ಬಿಡಲಾಗಿದೆ. ಬಳಿಕ ಒಂದೊಂದು ಗಂಟೆಯ ನಂತರ ಒಂದೊಂದು ಟ್ರಕ್‌ಗಳನ್ನು ಕೆಳಗಿಳಿಸಲಾಗಿದೆ. ಪ್ರತಿ ಹಂತದಲ್ಲೂ ಪಿಲ್ಲರ್ ಮೇಲ್ಭಾಗದ ಡಯಲ್ ಗೇಜ್ ಎಷ್ಟು ಆಳಕ್ಕೆ ಹೋಗಿದೆ ಎಂಬುದನ್ನು ಲೆಕ್ಕಾಚಾರ ಮಾಡಲಾಗಿದೆ. ಇದರ ಆಧಾರದಲ್ಲಿ ಮೇಲ್ಸೇತುವೆಯ ಧಾರಣಾ ಸಾಮರ್ಥ್ಯವನ್ನು ಅಳೆಯಲಾಗಿದೆ. ಹೀಗಾಗಿ ಫ್ಲೈಓವರ್ ಸದೃಢವಾಗಿದೆ ಎಂದು ಮೂಲಗಳು ವಿವರಿಸಿವೆ.
55
ಐಐಎಸ್‌ಸಿಯ ಪರಿಣತರ ತಂಡ
ರಾಜ್ಯದ 20 ಕ್ಕೂ ಅಧಿಕ ಜಿಲ್ಲೆಗಳು, ಗೋವಾ, ಮಹಾರಾಷ್ಟ್ರಕ್ಕೂ ಸಂಪರ್ಕ ಕಲ್ಪಿಸುವ 4.2 ಕಿ.ಮೀ. ಉದ್ದದ ಈ ಮೇಲ್ಸೇತುವೆಯು 2021 ರಲ್ಲಿ ಎರಡು ಕೇಬಲ್ ಭಾಗಿದ್ದರಿಂದ ಭಾರೀ ಸುದ್ದಿಯಾಗಿತ್ತು. ಸೇತುವೆ ಸದೃಢತೆಯ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ವು ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯನ್ನು ಕೋರಿತ್ತು. ಐಐಎಸ್‌ಸಿಯ ಪರಿಣತರ ತಂಡವು ಪರಿಶೀಲನೆ ನಡೆಸಿ ಭಾರೀ ವಾಹನಗಳ ಸಂಚಾರದಿಂದ ಕೇಬಲ್ ಬಾಗಿವೆ ಎಂದು ವರದಿ ನೀಡಿತ್ತು.