ಬೆಂಗಳೂರಿಗೆ ವಂಡರ್ ಈ ಎಲೆಕ್ಟ್ರಾನಿಕ್ ಸಿಟಿ ರಿವರ್; ಇದೇ ನೋಡಿ ಫ್ಲೈಓವರ್ ಮೇಲೆ ಹರಿಯುವ ಏಕೈಕ ನದಿ!

Published : Sep 16, 2026, 01:11 PM IST

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಜಲಾವೃತಗೊಂಡು ಕೃತಕ ನದಿಯಂತೆ ಮಾರ್ಪಟ್ಟಿತು. ಇದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸವಾರರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಿದರು. ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಅಲರ್ಟ್ ಘೋಷಿಸಿದೆ.

PREV
15
ಭಾರೀ ಮಳೆಗೆ ನದಿಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್

ಬೆಂಗಳೂರಿನಲ್ಲಿ ಸುಮಾರು ಒಂದೂವರೆ ತಿಂಗಳ ಸುದೀರ್ಘ ಬಿಡುವಿನ ಬಳಿಕ ಸೆ.15ರ ಸಂಜೆ ವಿಪರೀತ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಜಲಾವೃತಗೊಂಡು, ಬುಧವಾರ ಬೆಳಗ್ಗೆ ಕಿಲೋಮೀಟರ್‌ಗಟ್ಟಲೆ ವಾಹನ ದಟ್ಟಣೆಯಿಂದ ಸವಾರರು ತೀವ್ರ ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಯ್ತು.

25
ಫ್ಲೈಓವರ್ ಮೇಲೆಯೇ ಸೃಷ್ಟಿಯಾದ ಕೃತಕ ನದಿ

ಸಾಮಾನ್ಯವಾಗಿ ತಗ್ಗು ಪ್ರದೇಶ ಅಥವಾ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವುದು ಸಹಜ, ಆದರೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆಯೇ ಅಪಾರ ಪ್ರಮಾಣದ ಮಳೆನೀರು ನಿಂತು ರಸ್ತೆಯು ನದಿಯಂತಾಗಿತ್ತು. ಮಳೆ ನಿಂತು ಹಲವು ಗಂಟೆಗಳು ಕಳೆದರೂ ನೀರು ಹರಿದು ಹೋಗದೆ ರಸ್ತೆಯಲ್ಲೇ ಸಂಗ್ರಹಗೊಂಡಿದ್ದರಿಂದ, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮಳೆನೀರಿನಲ್ಲಿ ಸಂಚರಿಸಲಾಗದೆ ಹಲವು ವಾಹನಗಳು ಫ್ಲೈಓವರ್ ಮೇಲೆಯೇ ಕೆಟ್ಟು ನಿಂತವು. ಇದರಿಂದ ಮುಂಜಾನೆಯ ವೇಳೆಗೆ ಆಫೀಸ್‌ಗೆ ಹೊರಟಿದ್ದ ಸಾವಿರಾರು ಸವಾರರು ಗಂಟೆಗಟ್ಟಲೆ ದಟ್ಟಣೆಯಲ್ಲಿ ಸಿಲುಕಿ ಹೈರಾಣಾದರು.

35
ಗಂಟೆಗಟ್ಟಲೆ ಬ್ಲಾಕ್, ನೀರು ಹೊರಹಾಕಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ

ಕೊನೆಗೆ ಪರಿಸ್ಥಿತಿ ಬಿಗಡಾಯಿಸಿದಾಗ ಫ್ಲೈಓವರ್ ಮೇಲಿನ ನೀರು ತೆರವುಗೊಳಿಸಲು ಎರಡು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿದವು. ಸತತವಾಗಿ ನೀರನ್ನು ಪಂಪ್ ಮಾಡಿ ಹೊರಹಾಕಿದ ನಂತರ ವಾಹನ ಸಂಚಾರ ಕ್ರಮೇಣ ಸುಗಮಗೊಂಡು ಸವಾರರು ನಿಟ್ಟುಸಿರು ಬಿಟ್ಟರು. ಬೆಳಗ್ಗೆ ಆಫೀಸ್‌ ಗ ಹೊರಟ್ಟಿದ್ದವರು ವಾಚ್‌ ನೋಡಿಕೊಂಡು ಹಿಡಿಶಾಪ ಹಾಕುತ್ತಾ ಅಲ್ಲೇ ಬಾಕಿ ಆದ್ರು. ಕೆಲವರು ತಡವಾಗಿ ಆಫೀಸ್ ಗೆ ಹೋದ್ರೆ ಮತ್ತೆ ಕೆಲವರು ರಜೆ ಹಾಕಿದರು.

45
ನಗರದಲ್ಲಿ ದಾಖಲಾದ ಮಳೆ ಪ್ರಮಾಣ

ನಗರದಾದ್ಯಂತ ಸರಾಸರಿ 50 ಮಿ.ಮೀ ನಷ್ಟು ಮಳೆಯಾಗಿದ್ದು, ಕೋರಮಂಗಲ ಹಾಗೂ ಬೊಮ್ಮನಹಳ್ಳಿಯಲ್ಲಿ ಗರಿಷ್ಠ 60 ಮಿ.ಮೀ.ಗೂ ಹೆಚ್ಚು ಮಳೆ ದಾಖಲಾಗಿದೆ. ಮಾರಪ್ಪನಪಾಳ್ಯ: 58 ಮಿ.ಮೀ, ನಾಗಪುರ: 54.5 ಮಿ.ಮೀ, ಕೂಡ್ಲು: 52 ಮಿ.ಮೀ, ನ್ಯೂ ಬಿ.ಎಲ್.ಆರ್ ರಸ್ತೆ: 47 ಮಿ.ಮೀ, ಆರ್.ಟಿ ನಗರ: 46.8 ಮಿ.ಮೀ, ಸಂಪಂಗಿರಾಮನಗರ: 45.5 ಮಿ.ಮೀ, ಜಯನಗರ: 35.4 ಮಿ.ಮೀ, ಹೆಚ್.ಎಸ್.ಆರ್ ಲೇಔಟ್: 31.6 ಮಿ.ಮೀ, ಎಂ.ಜಿ ರಸ್ತೆ: 29 ಮಿ.ಮೀ.

55
ಹವಾಮಾನ ಇಲಾಖೆ ಮುನ್ಸೂಚನೆ, 8 ಜಿಲ್ಲೆಗಳಿಗೆ ಅಲರ್ಟ್

ಕೇಂದ್ರ ಹವಾಮಾನ ಇಲಾಖೆಯ ಮಾಹಿತಿಯಂತೆ, ಸೆಪ್ಟೆಂಬರ್ 18ರವರೆಗೆ ಬೆಂಗಳೂರಿನಲ್ಲಿ ಮೋಡಮುಸುಕಿದ ವಾತಾವರಣ ಮುಂದುವರಿಯಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು. 8 ಜಿಲ್ಲೆಗಳಿಗೆ ಮುಂದಿನ 3 ಗಂಟೆ ಗುಡುಗು ಸಹಿತ ಮಳೆ ಅಲರ್ಟ್ ಘೋಷಣೆ ಮಾಡಲಾಗಿದೆ. 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಸಾಧಾರಣ ಮಳೆ ಜೊತೆ ಗುಡುಗು, ಬಿರುಗಾಳಿ ಎಚ್ಚರಿಕೆ ನೀಡಲಾಗಿದೆ.ಸಾರ್ವಜನಿಕರು ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಇಲಾಖೆ ಮುನ್ಸೂಚನೆ ನೀಡಿದೆ.

Read more Photos on
click me!

Recommended Stories