ಸುಮಾರು 55 ವರ್ಷಗಳ ಇತಿಹಾಸ ಹೊಂದಿದ್ದ, ಡಾ. ರಾಜ್‌ಕುಮಾರ್ ಅವರಿಂದ ಉದ್ಘಾಟನೆಗೊಂಡಿದ್ದ ಬೆಂಗಳೂರಿನ ಐತಿಹಾಸಿಕ ಊರ್ವಶಿ ಚಿತ್ರಮಂದಿರವು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನೆಲಸಮಗೊಳ್ಳುತ್ತಿದೆ. ಗುತ್ತಿಗೆ ವಿವಾದದ ಹಿನ್ನೆಲೆಯಲ್ಲಿ ಈ ಐಕಾನಿಕ್ ಏಕಪರದೆ ಚಿತ್ರಮಂದಿರ ಇತಿಹಾಸದ ಪುಟ ಸೇರುತ್ತಿದೆ.
ಬೆಂಗಳೂರು (ಆ.24): ಬೆಂಗಳೂರಿನ ಸಿನಿಪ್ರಿಯರ ಪಾಲಿನ ಹೆಮ್ಮೆಯ ತಾಣ, ಅದೆಷ್ಟೋ ಸುವರ್ಣ ಕ್ಷಣಗಳಿಗೆ ಮೂಕಸಾಕ್ಷಿಯಾಗಿದ್ದ ಐತಿಹಾಸಿಕ 'ಊರ್ವಶಿ' ಚಿತ್ರಮಂದಿರ (Urvashi Theatre) ಇತಿಹಾಸದ ಪುಟ ಸೇರುತ್ತಿದೆ. ಸುಮಾರು 55 ವರ್ಷಗಳ ಭವ್ಯ ಸಿನೆಮಾ ಇತಿಹಾಸವನ್ನು ತನ್ನೊಡಲಲ್ಲಿ ಹೊತ್ತಿದ್ದ, ವರನಟ ಡಾ. ರಾಜ್‌ಕುಮಾರ್ ಅವರಿಂದಲೇ ಲೋಕಾರ್ಪಣೆಗೊಂಡಿದ್ದ ಈ ಐಕಾನಿಕ್ ಚಿತ್ರಮಂದಿರವನ್ನು ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶದ ಬೆನ್ನಲ್ಲೇ ನೆಲಸಮಗೊಳಿಸುವ ಕಾರ್ಯ ಭರದಿಂದ ಸಾಗಿದೆ.
25
ಡಾ. ರಾಜ್‌ಕುಮಾರ್ ಅವರಿಂದಲೇ ಉದ್ಘಾಟನೆಗೊಂಡಿದ್ದ ರಂಗು
ಬೆಂಗಳೂರಿನ ಲಾಲ್‌ಬಾಗ್ ಮುಖ್ಯ ರಸ್ತೆಯಲ್ಲಿರುವ ಊರ್ವಶಿ ಚಿತ್ರಮಂದಿರವು 1970ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರ ಅಮೃತ ಹಸ್ತದಿಂದ ಅದ್ಧೂರಿಯಾಗಿ ಉದ್ಘಾಟನೆಗೊಂಡಿತ್ತು. ಸುಮಾರು 1,100 ಆಸನಗಳ ಬೃಹತ್ ಸಾಮರ್ಥ್ಯ ಹೊಂದಿದ್ದ ಈ ಏಕಪರದೆ ಚಿತ್ರಮಂದಿರವು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳ 5,000ಕ್ಕೂ ಹೆಚ್ಚು ಚಲನಚಿತ್ರಗಳ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಸಾರ್ವಕಾಲಿಕ ಹಿಟ್ ಸಿನಿಮಾ 'ಎಕೆ 47' (AK 47) ಇಲ್ಲಿ ಬರೋಬ್ಬರಿ 100 ದಿನಗಳ ಕಾಲ ಹೌಸ್‌ಫುಲ್ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿತ್ತು.
35
ಅತ್ಯಾಧುನಿಕ ಸೌಂಡ್ ಸಿಸ್ಟಂ & ಸ್ಟಾರ್ ಸಿನಿಮಾಗಳ ತವರು:
ಭಾರತದಲ್ಲೇ ಅತ್ಯಾಧುನಿಕ ಹಾಗೂ ವಿಶ್ವದರ್ಜೆಯ ಸೌಂಡ್ ಟೆಕ್ನಾಲಜಿ ಹೊಂದಿದ್ದ ಕೇವಲ ಎರಡು ಚಿತ್ರಮಂದಿರಗಳ ಪೈಕಿ ಊರ್ವಶಿ ಕೂಡ ಒಂದಾಗಿತ್ತು. ಅತ್ಯುತ್ತಮ 3D ದೃಶ್ಯ ವೈಭವ ಮತ್ತು ಸೌಂಡ್ ಕ್ವಾಲಿಟಿಗೆ ಹೆಸರುವಾಸಿಯಾಗಿದ್ದ ಈ ಥಿಯೇಟರ್‌ನಲ್ಲಿ ಸಿನಿಮಾ ನೋಡುವುದೇ ಪ್ರೇಕ್ಷಕರಿಗೆ ಒಂದು ಹಬ್ಬವಾಗಿತ್ತು.
ರಾಕಿಂಗ್ ಸ್ಟಾರ್ ಯಶ್ ಅವರ 'ಕೆಜಿಎಫ್-2', ರಿಷಬ್ ಶೆಟ್ಟಿಯವರ 'ಕಾಂತಾರ', ರಾಜ್ ಬಿ ಶೆಟ್ಟಿಯವರ 'ಗರುಡ ಗಮನ ವೃಷಭ ವಾಹನ', ದುನಿಯಾ ವಿಜಯ್ ಅವರ 'ಭೀಮ', ರಜನಿಕಾಂತ್ ಅಭಿನಯದ 'ಕಬಾಲಿ', 'ಜೈಲರ್' ಹಾಗೂ 'ಬಾಹುಬಲಿ 2' ಸೇರಿದಂತೆ ನೂರಾರು ಬ್ಲಾಕ್‌ಬಸ್ಟರ್ ಸಿನಿಮಾಗಳು ಇಲ್ಲಿ ಸತತ ಹೌಸ್‌ಫುಲ್ ಪ್ರದರ್ಶನ ಕಂಡಿದ್ದವು. ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಚಿತ್ರವನ್ನು ಇದೇ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಈ ನೆಲಸಮದ ಸುದ್ದಿ ತೀವ್ರ ನಿರಾಸೆ ಮೂಡಿಸಿದೆ.
1970ರಲ್ಲಿ ಜಮೀನಿನ ಮೂಲ ಮಾಲೀಕರಾದ 'ಬಾಸೆಟ್ಟಿ ಟ್ರಸ್ಟ್' ಅವರಿಂದ ಶ್ರೀನಿವಾಸ ಎಂಟರ್‌ಪ್ರೈಸಸ್ ಸಂಸ್ಥೆಯು ಜಾಗವನ್ನು ಗುತ್ತಿಗೆಗೆ (ಲೀಸ್) ಪಡೆದು ಚಿತ್ರಮಂದಿರವನ್ನು ನಿರ್ಮಿಸಿತ್ತು. ಈ ಗುತ್ತಿಗೆಯ ಅವಧಿಯು 2018ರ ಏಪ್ರಿಲ್ 23ರಂದೇ ಮುಕ್ತಾಯಗೊಂಡಿತ್ತು. ಲೀಸ್ ಮುಕ್ತಾಯದ ನಂತರವೂ ಮಾಲೀಕರು ಒಪ್ಪಂದ ನವೀಕರಿಸಲು ನಿರಾಕರಿಸಿ, ಜಾಗವನ್ನು ತೆರವುಗೊಳಿಸಿಕೊಡುವಂತೆ ನ್ಯಾಯಾಲಯದ ಮೊರೆ ಹೋದರು. ಸುದೀರ್ಘ ಕಾನೂನು ಹೋರಾಟದ ಬಳಿಕ ಕೆಳ ನ್ಯಾಯಾಲಯ ಹಾಗೂ ಕರ್ನಾಟಕ ಹೈಕೋರ್ಟ್ ಜಾಗವನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸುವಂತೆ ಆದೇಶ ನೀಡಿದ್ದವು. ಇದನ್ನು ಪ್ರಶ್ನಿಸಿ ಚಿತ್ರಮಂದಿರದ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತಾದರೂ, ಸುಪ್ರೀಂ ಕೋರ್ಟ್ ಕೂಡ ಮಾಲೀಕರ ಪರವಾಗಿಯೇ ತೀರ್ಪು ನೀಡಿತು.
55
ತೆರವು ಕಾರ್ಯ ಆರಂಭ: ಸಿನಿ ರಸಿಕರಲ್ಲಿ ಕಣ್ಣೀರು
ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ಮೇರೆಗೆ ಪೊಲೀಸ್ ಭದ್ರತೆಯೊಂದಿಗೆ ಚಿತ್ರಮಂದಿರದ ಆಂತರಿಕ ವಸ್ತುಗಳಾದ ಆಸನಗಳು, ವಿಶ್ವದರ್ಜೆಯ ಪ್ರೊಜೆಕ್ಟರ್, ಸೌಂಡ್ ಸ್ಪೀಕರ್‌ಗಳನ್ನು ಈಗಾಗಲೇ ತೆರವುಗೊಳಿಸಲಾಗಿದ್ದು, ಕಟ್ಟಡ ನೆಲಸಮ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರಿನ ಸಿನಿಮಾ ಇತಿಹಾಸದ ಗತವೈಭವವನ್ನು ಸಾರುತ್ತಿದ್ದ ಮತ್ತೊಂದು ಹೆಮ್ಮೆಯ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಹೀಗೆ ಮಣ್ಣುಪಾಲಾಗುತ್ತಿರುವುದು ಕನ್ನಡ ಚಿತ್ರರಂಗ ಹಾಗೂ ಸಿನಿಮಾ ಪ್ರೇಮಿಗಳಲ್ಲಿ ತೀವ್ರ ಬೇಸರವನ್ನುಂಟುಮಾಡಿದೆ.