ಕಾರಿನ ಬಣ್ಣ ಏನೇ ಇರಲಿ, ಅದರ ಟೈರ್‌ಗಳು ಮಾತ್ರ ಕಪ್ಪಾಗಿರುವುದೇಕೆ? ಒಂದು ಕಾಲದಲ್ಲಿ ಟೈರ್‌ಗಳು ಬಿಳಿಯಾಗಿದ್ದವು ಎಂಬುದು ನಿಮಗೆ ಗೊತ್ತೇ? ಹಾಗಿದ್ರೆ ಈವಾಗ ಯಾಕೆ ಕಾರಿನ ಟೈರ್ ಬಣ್ಣ ಕಪ್ಪಾಗಿದೆ. ಇದರ ಹಿಂದಿನ ವಿಜ್ಞಾನ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.
ನೀವು ಗಮನಿಸಿರಬಹುದು, ಮಾರುಕಟ್ಟೆಗೆ ಬಿಡುಗಡೆಯಾಗುವ ಹೊಸ ಕಾರುಗಳ ಬಣ್ಣ ಮತ್ತು ವಿನ್ಯಾಸ ವಿಭಿನ್ನವಾಗಿರುತ್ತದೆ. ಆದರೆ ಒಂದು ವಿಷಯ ಮಾತ್ರ ಬದಲಾಗುವುದಿಲ್ಲ. ಅದೇ ಕಾರಿನ ಕಪ್ಪು ಟೈರ್‌ಗಳು. ಕಾರಿನ ಬಣ್ಣಕ್ಕೆ ಅನುಗುಣವಾಗಿ ಟೈರ್‌ಗಳ ಬಣ್ಣವೂ ಏಕೆ ಬದಲಾಗುವುದಿಲ್ಲ ಎಂದು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆ ಆಸಕ್ತಿದಾಯಕ ವಿಜ್ಞಾನವಿದೆ.
26
ಮೊದಲು ಟೈರ್‌ಗಳ ಬಣ್ಣ ಬಿಳಿಯಾಗಿತ್ತು!
1917ಕ್ಕೂ ಮೊದಲು ಕಾರುಗಳ ಟೈರ್‌ಗಳು ಕಪ್ಪಾಗಿರದೆ ಬಿಳಿ ಅಥವಾ ಹಾಲಿನ ಬಣ್ಣದಲ್ಲಿರುತ್ತಿದ್ದವು ಎಂದು ಹೇಳಲಾಗುತ್ತದೆ. ಟೈರ್ ತಯಾರಿಸಲು ಬಳಸುವ ರಬ್ಬರ್‌ನ ನೈಸರ್ಗಿಕ ಬಣ್ಣ ಬಿಳಿ ಅಥವಾ ಹಾಲಿನಂತಿರುತ್ತದೆ. ಹಾಗಾಗಿ ಟೈರ್ ಬಣ್ಣವು ಬಿಳಿಯಾಗಿತ್ತು. ಆದರೆ ಈ ಟೈರ್‌ಗಳ ಬಾಳಿಕೆ ಹೆಚ್ಚು ಇರಲಿಲ್ಲ. ರಬ್ಬರ್ ಟೈರ್‌ಗಳ ಬಲವನ್ನು ಹೆಚ್ಚಿಸಲು ಅವುಗಳಲ್ಲಿ ಜಿಂಕ್ ಆಕ್ಸೈಡ್ ಸೇರಿಸಲಾಗುತ್ತಿತ್ತು. ಆದರೂ ಟೈರ್‌ಗಳು ಹೆಚ್ಚು ಬಾಳಿಕೆ ಬರುವಂತಿರಲಿಲ್ಲ ಮತ್ತು ಕಡಿಮೆ ಅವಧಿಯಲ್ಲೇ ಸವೆದು ಹೋಗುತ್ತಿದ್ದವು.
36
20ನೇ ಶತಮಾನದಲ್ಲಿ ಟೈರ್‌ಗಳ ಬಣ್ಣ ಕಪ್ಪಾಯಿತು
ಟೈರ್‌ಗಳನ್ನು ಇನ್ನಷ್ಟು ಬಲಿಷ್ಠ ಮತ್ತು ಬಾಳಿಕೆ ಬರುವಂತೆ ಮಾಡಲು ಉತ್ತಮ ಮಾರ್ಗವನ್ನು ಕಂಡುಹಿಡಿಯಬೇಕು ಎಂಬುದು ಕಂಪನಿಗಳಿಗೆ ಮೊದಲಿನಿಂದಲೂ ತಿಳಿದಿತ್ತು. ಆದರೆ 20ನೇ ಶತಮಾನದಲ್ಲಿ ಇದಕ್ಕೆ ಪರಿಣಾಮಕಾರಿ ಪರಿಹಾರ ದೊರೆಯಿತು. 1910ರಲ್ಲಿ ಜಾರ್ಜ್ ಓಯನ್ಸ್‌ಲಾಗರ್ (George Oenslager) ಎಂಬ ರಸಾಯನಶಾಸ್ತ್ರಜ್ಞರು ಟೈರ್‌ನ ರಬ್ಬರ್‌ಗೆ ಕಾರ್ಬನ್ ಬ್ಲ್ಯಾಕ್ ಸೇರಿಸಿದರೆ ಅದರ ಬಲ ಮತ್ತು ಬಾಳಿಕೆ ಗಣನೀಯವಾಗಿ ಹೆಚ್ಚುತ್ತದೆ ಎಂಬುದನ್ನು ಕಂಡುಹಿಡಿದರು.
ಕಾರ್ಬನ್ ಬ್ಲ್ಯಾಕ್ ಅನ್ನು ಇಂಗ್ಲಿಷ್‌ನಲ್ಲಿ ಸೂಟ್ ಎಂದೂ ಕರೆಯಲಾಗುತ್ತದೆ. ಇದು ಅತ್ಯಂತ ಸೂಕ್ಷ್ಮವಾದ ಕಪ್ಪು ಕಣಗಳಾಗಿದ್ದು, ಟೈರ್‌ಗಳು ಬೇಗನೆ ಸವೆಯುವುದನ್ನು ತಡೆಯುವುದರ ಜೊತೆಗೆ ಅವುಗಳನ್ನು ಹೆಚ್ಚು ಹೊಂದಿಕೊಳ್ಳುವಂತೆ ಮತ್ತು ಬಲಿಷ್ಠವಾಗುವಂತೆ ಮಾಡುತ್ತದೆ.
56
ಕಾರ್ಬನ್ ಬ್ಲ್ಯಾಕ್ ಟೈರ್‌ಗಳ ಬಾಳಿಕೆ ಹೆಚ್ಚಿಸಿತು
ಕಾರು ಟೈರ್‌ಗಳ ಕಪ್ಪು ಬಣ್ಣಕ್ಕೆ ಪ್ರಮುಖ ಕಾರಣವಾಗಿರುವ ಕಾರ್ಬನ್ ಬ್ಲ್ಯಾಕ್, ಟೈರ್‌ಗಳಿಗೆ ವರದಾನವಾಗಿ ಪರಿಣಮಿಸಿತು. ಹಿಂದೆ ಟೈರ್‌ಗಳ ಬಾಳಿಕೆ ಸುಮಾರು 2,000ರಿಂದ 5,000 ಕಿಲೋಮೀಟರ್‌ಗಳಷ್ಟು ಮಾತ್ರ ಇತ್ತು ಎಂದು ಹೇಳಲಾಗುತ್ತಿತ್ತು. ಆದರೆ ಕಾರ್ಬನ್ ಬ್ಲ್ಯಾಕ್ ಬಳಕೆಯಿಂದ ಟೈರ್‌ಗಳ ಬಾಳಿಕೆ 50,000 ಕಿಲೋಮೀಟರ್‌ಗಳಿಗೂ ಹೆಚ್ಚು ಆಗಿದೆ. ಅಂದರೆ ಟೈರ್‌ನ ಕಪ್ಪು ಬಣ್ಣ ಕೇವಲ ಅದರ ಲುಕ್‌ಗಾಗಿ ಅಲ್ಲ; ಅದರ ಬಾಳಿಕೆಯನ್ನು ಹಲವು ಪಟ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
66
ಉತ್ತಮ ಗ್ರಿಪ್ ಮತ್ತು ಸಾಮರ್ಥ್ಯ
ಇದರ ಜೊತೆಗೆ ಕಾರ್ಬನ್ ಬ್ಲ್ಯಾಕ್ ಟೈರ್‌ಗಳಿಗೆ ಉತ್ತಮ ಗ್ರಿಪ್, ಹೆಚ್ಚು ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ನೀಡಲು ಸಹಾಯ ಮಾಡುತ್ತದೆ. ಅಲ್ಲದೆ, ಟೈರ್‌ಗಳನ್ನು ಸೂರ್ಯನ ಅಲ್ಟ್ರಾವಯಲೆಟ್ (UV) ಕಿರಣಗಳಿಂದ ರಕ್ಷಿಸುವಲ್ಲಿಯೂ ಇದು ಸಹಾಯಕವಾಗುತ್ತದೆ. ಇದರಿಂದ ಟೈರ್‌ಗಳಲ್ಲಿ ಬಿರುಕುಗಳು ಉಂಟಾಗುವ ಅಪಾಯ ಕಡಿಮೆಯಾಗುತ್ತದೆ.