ಗದಗ: ಲೋಕೋಪಯೋಗಿ ಸಚಿವ ಸಿಸಿ ಪಾಟೀಲರ ವಿರುದ್ಧ ವೈಯಕ್ತಿಕ ತೇಜೋವಧೆ ಆರೋಪ ಮಾಡಿದ್ದ ದಿಂಗಾಲೇಶ್ವರ ಶ್ರೀಗಳು ನರಗುಂದ ಪಟ್ಟಣದ ಸಚಿವರ ನಿವಾಸದ ಎದ್ರು ಧರಣಿ ನಡೆಸೋದಕ್ಕೆ ಮುಂದಾಗಿದ್ರು. ಪೂರ್ವ ನಿಯೋಜಿತ ಧರಣೆ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶ್ರೀಗಳ ವಾಹನವನ್ನ ನರಗುಂದ ಹೊರವಲಯದಲ್ಲೇ ನಿಲ್ಲಿಸಲಾಗಿತ್ತು.ಹೈಡ್ರಾಮಾದ ಬಳಿಕ ದಿಂಗಾಲೇಶ್ವರ ಶ್ರೀ ಧರಣಿ ಕೈ ಬಿಟ್ಟರು. ಆದ್ರೆ, ಸಚಿವ ಸಿಸಿ ಪಾಟೀಲರು ಮಾತ್ರ ಕ್ಷಮೆ ಕೇಳೋಲ್ಲ ಅಂತಾ ಮತ್ತೊಮ್ಮೆ ದಿಂಗಾಲೇಶ್ವರ ಶ್ರೀಗಳ (Dingaleshwara Swamiji) ವಿರುದ್ಧ ವಾಗ್ದಾಳಿ ನಡೆಸಿದರು.
ಹೌದು ಗದಗ (Gadag)ಜಿಲ್ಲೆಯ ನರಗುಂದ (Naragunda) ಪಟ್ಟಣ ಇವತ್ತು ಅಕ್ಷರಶಃ ನಿಗಿನಿಗಿ ಕೆಂಡವಾಗಿತ್ತು. ಕಾರಣ ದಿಂಗಾಲೇಶ್ವರ ಶ್ರೀಗಳ ಹೋರಾಟ. ಪೂರ್ವಾಶ್ರಮದ ಜಾಡು ಹಿಡಿದು ಕೆದಕಿದ್ದ ಸಚಿವರ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸಮರ ಸಾರಿದಂತೆ ಕಂಡು ಬಂತು. ಈ ಹಿಂದೆ ಬಾಲೆಹೊಸೂರು ಮಠದಲ್ಲಿ ಮಾಧ್ಯಮ ಗೋಷ್ಠಿ ಮಾಡಿದ್ದ ಶ್ರೀಗಳು ದಿನಾಂಕ 27 ಕ್ಕೆ ಸಚಿವರ ಮನೆ ಎದುರು ಧರಣಿ ಮಾಡೋದಾಗಿ ಘೋಷಣೆ ಮಾಡಿದ್ರು. ಪೂರ್ವ ನಿಗದಿಯಂತೆ ದಿಂಗಾಲೇಶ್ವರ ಶ್ರೀಗಳು ನೂರಾರು ಭಕ್ತರೊಂದಿಗೆ ನರಗುಂದ ಪಟ್ಟಣಕ್ಕೆ ಎಂಟ್ರಿ ಕೊಡೋದಕ್ಕೆ ಮುಂದಾಗಿದ್ರು. ಹುಬ್ಬಳ್ಳಿ (Hubli) ಮೂಲಕ ಕೆಲ ಸ್ವಾಮಿಜೀಗಳೊಂದಿಗೆ ನಗರಕ್ಕೆ ಎಂಟ್ರಿ ಕೊಡ್ತಿದ್ದಂತೆ ಕಲಕೇರಿ (Kalakeri) ಬಳಿ ಶ್ರೀಗಳನ್ನ ತಡೆಯಲಾಯ್ತು. ಡಿವೈಎಸ್ ಪಿ ವೈಎಸ್ ಏಗನಗೌಡರ್ ನೇತೃತ್ವದ ಪೊಲೀಸ್ ತಂಡ ನಾಕಾಬಂದಿ ಮಾಡಿದ್ರು. ಶ್ರೀಗಳನ್ನ ನೋಡ್ತಿದ್ದಂತೆ ಅಲರ್ಟ್ ಆಗಿದ್ದ ಪೊಲೀಸರು ಪಟ್ಟಣ ಪ್ರವೇಶಕ್ಕೆ ನಿರ್ಭಂದ ಹೇರಿದ್ರು. ಇದ್ರಿಂದ ರೊಚ್ಚಿಗೆದ್ದಿದ್ದ ಭಕ್ತರು ರಸ್ತೆ ಮೇಲೆ ಧರಣಿ ಮಾಡೋದಾಗಿ ಹೇಳಿಕೆ ನೀಡಿದ್ರು.
ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀ ಮತ್ತೊಂದು ಬಾಂಬ್, ಸಚಿವಗೆ ಖಡಕ್ ಎಚ್ಚರಿಕೆ
ಬರೋಬ್ಬರಿ ಅರ್ಧ ಗಂಟೆಗಳ ವಾಗ್ವಾದದ ನಂತ್ರ ಶ್ರೀಗಳು ಕಲಕೇರಿ ವ್ಯಾಪ್ತಿಯ ರಸ್ತೆ ಬದಿಯ ಜಮೀನಲ್ಲಿ ಸಾಂಕೇತಿಕ ಧರಣಿ ನಡೆಸಿದ್ರು. ನಂತ್ರ, ಪ್ರತಿಭಟನೆಗೆ ಪೊಲೀಸರು ಅಡ್ಡಿ ಪಡಿಸಿದ್ದು ಧರಣಿ ಮೊಟಕುಗೊಳಿಸೋ ನಿರ್ಧಾರ ಪ್ರಕಟಿಸಿದ್ರು. ಇತ್ತ, ತಮ್ಮ ನಿವಾಸದಲ್ಲೇ ಕಾರ್ಯಕರ್ತರ ಸಭೆ ನಡೆಸಿದ್ದ ಸಚಿವ ಸಿಸಿ ಪಾಟೀಲರು (cc patil) ತಮ್ಮ ಹೇಳಿಕೆ ಬಗ್ಗೆ ಸಮರ್ಥನೆ ಮಾಡಿಕೊಂಡ್ರು. ಶ್ರೀಗಳ ಪೂರ್ವಾಶ್ರಮ ಅಂದ್ರೆ ಶಿರಹಟ್ಟಿ ಮಠದ ಪೀಠಾಧಿಪತಿಯಾಗುವುದಕ್ಕಿಂದ ಮುಂಚಿನ ಕೇಸ್ ಬಗ್ಗೆ ಮಾತಾಡಿದ್ದೀನಿ. ಕೆಲ ಕೇಸ್ ಗಳಲ್ಲಿ ಶ್ರೀಗಳು ಬೇಲ್ ಮೇಲಿದ್ದಾರೆ. ಶ್ರೀಗಳ ವಿರುದ್ಧ ಇರೋ ಕೇಸ್ ಬಗ್ಗೆಯೇ ನಾನು ಮಾತಾಡಿದ್ದು, ಕ್ಷಮೆ ಕೇಳುವ ಪ್ರಶ್ನೆ ಇಲ್ಲ ಅಂತಾ ಶ್ರೀಗಳ ವಿರುದ್ಧ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ರು.
ಪೂರ್ವಾಶ್ರಮ ಕೆದಕಿದ್ದ ಸಚಿವ ಸಿಸಿ ಪಾಟೀಲರಿಗೆ ದಿಂಗಾಲೇಶ್ವರ ಶ್ರೀ ಕೌಂಟರ್
ಧರಣಿ ಮೊಟಕುಗೊಳಿಸೋ ನಿರ್ಧರವನ್ನ ದಿಂಗಾಲೇಶ್ವರ ಶ್ರೀಗಳು ಪ್ರಕಟಿಸಿದ್ದಾರೆ. ಆದರೆ, ಭಕ್ತರೊಂದಿಗೆ ಚರ್ಚಿಸಿ ಮುಂದಿನ ಹೋರಾಟ ಮಾಡ್ತೀವಿ ಅನ್ನೋ ಮೂಲಕ ಮುಂದಿನ ಹೋರಾಟದ ಬಗ್ಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಶ್ರೀಗಳ ಹೋರಾಟದ ನಡೆ ಬೂದಿ ಮುಚ್ಚಿದ ಕೆಂಡದಂತಿದೆ. ಸಚಿವರು ಶ್ರೀಮಠಕ್ಕೆ ಭೇಟಿ ನೀಡ್ತೀನಿ ಅನ್ನೋ ಮೂಲಕ ಸಣ್ಣಗೆ ತೇಪೆ ಎಳೆಯುವ ಕೆಲಸಕ್ಕೂ ಮುಂದಾಗಿದಾರೆ. ಒಟ್ನಲ್ಲಿ ಸದ್ಯದ ಪರಿಸ್ಥಿತಿ ತಿಳಿಯಾಗಿದ್ದು, ಮುಂದೆ ಯಾವ ಹಂತ ತಲಪುತ್ತೆ ಅನ್ನೋದನ್ನ ಕಾದು ನೋಡ್ಬೇಕು.
ಗದಗ ದಿಂದ ಗಿರೀಶ್ ಕಮ್ಮಾರ ಏಷ್ಯಾನೆಟ್ ಸುವರ್ಣ ನ್ಯೂಸ್