​ಲಕ್ಕುಂಡಿ ಉತ್ಖನನಕ್ಕೆ ಬರುವ ಕಾರ್ಮಿಕರ ಕೂಲಿ ಹೆಚ್ಚಳಕ್ಕೆ ಆಗ್ರಹ : ದಿನಕ್ಕೆ ಸಿಗೋದೆಷ್ಟು?

Kannadaprabha News   | Kannada Prabha
Published : Jan 20, 2026, 11:46 AM IST
Lakkundi

ಸಾರಾಂಶ

ಲಕ್ಕುಂಡಿಯಲ್ಲಿ ​ಸೋಮವಾರ ಬೆಳಗ್ಗೆ ಉತ್ಖನನ ಕಾರ್ಯ ಆರಂಭವಾದ ಕೆಲವೇ ಸಮಯದಲ್ಲಿ ಆಯುಧ ಮಾದರಿಯ ವಿಶಿಷ್ಟ ಕಲ್ಲೊಂದು ಪತ್ತೆಯಾಗಿದೆ. ಅಂಡಾಕಾರದಲ್ಲಿದ್ದು, ಒಂದು ಭಾಗ ಮೊನಚಾಗಿರುವ ಈ ಕಲ್ಲು ಶಿಲಾಯುಗದಲ್ಲಿ ಮಾನವರು ಬಳಸುತ್ತಿದ್ದ ಆಯುಧದಂತಿದೆ.

ಗದಗ: ಜಿಲ್ಲೆಯ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ‌ ಸೋಮವಾರ 4ನೇ ದಿನದ ಉತ್ಖನನ ಕಾರ್ಯವು ಮಹತ್ವದ ತಿರುವು ಪಡೆದುಕೊಂಡಿದೆ. ಒಂದೆಡೆ ಶಿಲಾಯುಗದ ಆಯುಧ ಮಾದರಿಯ ಕಲ್ಲು ಪತ್ತೆಯಾಗಿ ಸಂಶೋಧಕರಲ್ಲಿ ಕುತೂಹಲ ಮೂಡಿಸಿದ್ದರೆ, ಮತ್ತೊಂದೆಡೆ ಕೂಲಿ ಹೆಚ್ಚಳಕ್ಕೆ ಕಾರ್ಮಿಕರು ಆಗ್ರಹಿಸುವ ಮೂಲಕ ಗಮನ ಸೆಳೆದರು.

​ಸೋಮವಾರ ಬೆಳಗ್ಗೆ ಉತ್ಖನನ ಕಾರ್ಯ ಆರಂಭವಾದ ಕೆಲವೇ ಸಮಯದಲ್ಲಿ ಆಯುಧ ಮಾದರಿಯ ವಿಶಿಷ್ಟ ಕಲ್ಲೊಂದು ಪತ್ತೆಯಾಗಿದೆ. ಅಂಡಾಕಾರದಲ್ಲಿದ್ದು, ಒಂದು ಭಾಗ ಮೊನಚಾಗಿರುವ ಈ ಕಲ್ಲು ಶಿಲಾಯುಗದಲ್ಲಿ ಮಾನವರು ಬಳಸುತ್ತಿದ್ದ ಆಯುಧದಂತಿದೆ. ಇದರೊಂದಿಗೆ ಭಾನುವಾರ ಸಂಜೆ ಉತ್ಖನನ ಮುಗಿಸುವ ವೇಳೆ ಒಂದೂವರೆ ಅಡಿ ಆಳದಲ್ಲಿ ಪುರಾತನ ಕಾಲದ ಲೋಹದ ಗಂಟೆಯೂ ಲಭ್ಯವಾಗಿದೆ. ಪತ್ತೆಯಾದ ವಸ್ತುಗಳನ್ನು ಉತ್ಖನನ ಮೇಲ್ವಿಚಾರಕರು ಪ್ಲಾಸ್ಟಿಕ್ ಚೀಲದಲ್ಲಿ ಟ್ಯಾಗ್ ಮಾಡಿ ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದು, ಭೂಮಿಯನ್ನು ಬಗೆದಷ್ಟು ವಿವಿಧ ಆಕೃತಿಯ ಕಲ್ಲುಗಳು ಸಿಗುತ್ತಿದ್ದು, ಸಂಶೋಧನೆಗೆ ಹೊಸ ಆಯಾಮ ನೀಡುತ್ತಿವೆ.

ಕೂಲಿ ಹೆಚ್ಚಳಕ್ಕೆ ಆಗ್ರಹ:

​ಉತ್ಖನನಕ್ಕೆ ಬರುವ ಕಾರ್ಮಿಕರು ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಬೇಡಿಕೆ ಮಂಡಿಸಿದರು. ಸದ್ಯ ನೀಡಲಾಗುತ್ತಿರುವ ₹374 ಕೂಲಿ ಸಾಲದು, ಇದನ್ನು ₹600ಕ್ಕೆ ಹೆಚ್ಚಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದರು. ದಿನಕ್ಕೆ 8 ಗಂಟೆ ಕಠಿಣ ಕೆಲಸ ಮಾಡುತ್ತಿದ್ದು, ಈಗಿನ ದರ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ಕಾರ್ಮಿಕರು ಮೇಲ್ವಿಚಾರಕರ ಬಳಿ ಅಳಲು ತೋಡಿಕೊಂಡರು. ಇದರಿಂದಾಗಿ ಕೆಲಸ ಪ್ರಾರಂಭಿಸುವುದು ತಡವಾಯಿತು.

ಹೈಡ್ರಾಮಾ: ​​

ಉತ್ಖನನ ಸ್ಥಳದಲ್ಲಿ ಹೈಡ್ರಾಮಾ ಸೃಷ್ಟಿಸಿದ್ದ ಕಾವಿಧಾರಿ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಓಡಿಸಿದ ಘಟನೆಯೂ ನಡೆದಿದೆ. ತಾನು ಕಿತ್ತೂರು ಚೆನ್ನಮ್ಮನ ಮಗನೆಂದು ಹೇಳಿಕೊಂಡ ಆ ವ್ಯಕ್ತಿ, ಇಲ್ಲಿ 100 ಕೆಜಿ ಚಿನ್ನದ ಮೂರ್ತಿಯಿದೆ, ಅದನ್ನು ಹೊರತೆಗೆದರೆ ಜಗತ್ತಿಗೆ ಮಳೆಯಾಗುವುದಿಲ್ಲ ಎಂದು ಹೇಳುತ್ತಾ ಒಂದೇ ಕಾಲಿನಲ್ಲಿ ನಿಂತು ವಿಚಿತ್ರ ವರ್ತನೆ ತೋರಿದ್ದಾನೆ. ಆತನ ಚಿತ್ರ, ವಿಚಿತ್ರವಾದ ಮಾತುಗಳಿಂದ ರೊಚ್ಚಿಗೆದ್ದ ಸ್ಥಳೀಯರು ಸರಿಯಾದ ಎಚ್ಚರಿಕೆ ನೀಡುತ್ತಿದ್ದಂತೆ ಆ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದರಿಂದಲೂ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು.

ಗೊಂದಲಗಳಿಲ್ಲ:

ಉತ್ಖನನ ಕಾರ್ಯದಲ್ಲಿ ಯಾವುದೇ ಗೊಂದಲಗಳಿಲ್ಲ. ಉತ್ಖನನ ಕಾರ್ಯ ಸಹಜವಾಗಿಯೇ ನಡೆಯುತ್ತಿದೆ. ಸಿಕ್ಕಿರುವ ಎಲ್ಲ ವಸ್ತುಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಸಂರಕ್ಷಿಸಿ, ಪರಿಶೀಲಿಸುತ್ತಿದ್ದಾರೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ತಿಳಿಸಿದರು.

PREV
Read more Articles on
click me!

Recommended Stories

ಲಕ್ಕುಂಡಿ ನಿಧಿ: ನೆಲದಲ್ಲಿ '1 ಸಾವಿರ ಕೆಜಿ ಬಂಗಾರದ ಶಿವಲಿಂಗವಿದೆ' ಎಂದ ಸ್ವಾಮೀಜಿಯನ್ನ ಅಟ್ಟಾಡಿಸಿಕೊಂಡು ಹೋದ ಜನ!
ಲಕ್ಕುಂಡಿ ಉತ್ಖನನ: ಕಲ್ಯಾಣಿ ಚಾಲುಕ್ಯರ ಕಾಲದ ಮಹತ್ವದ ಕುರುಹುಗಳು ಪತ್ತೆ, ಭಾನುವಾರ ಪದೇ ಪದೇ ಕಾಣಿಸಿಕೊಂಡ ಹಾವು!