
ಬೆಂಗಳೂರು: Spain Football Renaissance: 2010ರಲ್ಲಿ ಸ್ಪೇನ್ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಫುಟ್ಬಾಲ್ ಜಗತ್ತಿನ ಹೊಸ ಅಧಿಪತಿಯಾಗಿ ಮೆರೆದು, ಆ ಬಳಿಕ ಪಾತಾಳಕ್ಕೆ ಕುಸಿದಿದ್ದನ್ನು ನೋಡಿದ ಪ್ರತಿಯೊಬ್ಬರಿಗೂ ಖಂಡಿತವಾಗಿಯೂ ಸ್ಪ್ಯಾನಿಶ್ ಫುಟ್ಬಾಲ್‌ಗೆ ಮರುಜನ್ಮ ಸಿಕ್ಕಿದೆ ಎಂದು ಅನಿಸದೆ ಇರಲು ಸಾಧ್ಯವಿಲ್ಲ.
ಆ್ಯಂಡ್ರೆಸ್ ಇನಿಯೆಸ್ಟಾ, ಜೆರಾರ್ಡ್ ಪೀಕೆ, ಡೇವಿಡ್ ವಿಲ್ಲಾ, ಕಾರ್ಲೋಸ್ ಪುಯೋಲ್, ಐಕರ್ ಕ್ಯಾಸಿಯೆಸ್, ಕ್ಸಾವಿ, ಸರ್ಜಿಯೋ ರಾಮೋಸ್ ಹೀಗೆ 2010ರ ಗೆಲುವಿನ ವೇಳೆ ದಿಗ್ಗಜರ ದಂಡನ್ನೇ ಹೊಂದಿದ್ದ ಸ್ಪೇನ್ ಪಡೆ, ಇವರೆಲ್ಲರೂ ನೇಪತ್ಯಕ್ಕೆ ಸರಿದ ಬಳಿಕ ಮಂಕಾಗಿ ಹೋಗಿತ್ತು. ಇದೀಗ ಮತ್ತೆ ಸ್ಪೇನ್ ಫುಟ್ಬಾಲ್ ಲೋಕದಲ್ಲಿ ಎದ್ದು ನಿಂತಿದೆ. 2ನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ, ಕೋಟ್ಯಂತರ ಅಭಿಮಾನಿಗಳಿಗೆ ಸಂಭ್ರಮಿಸುವಂತೆ ಮಾಡಿದೆ. ತನ್ನ ಬತ್ತಳಿಕೆಯಲ್ಲಿದ್ದ ಎಲ್ಲಾ ಫುಟ್ಬಾಲ್ ಕೌಶಲ್ಯಗಳನ್ನು ಜಗತ್ತಿನೆದುರು ತೆರೆದಿಡುವ ಮೂಲಕ, ಸ್ಪೇನ್ ಮತ್ತೆ ತನ್ನ ಗತ್ತು ಪ್ರದರ್ಶಿಸಿದೆ. ಜಾಗತಿಕ ಫುಟ್ಬಾಲ್‌ನಲ್ಲಿ ತಾನೇಕೆ ಪವರ್ ಸೆಂಟರ್ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ.
1950-60ರ ದಶಕದಲ್ಲಿ ಯುರೋಪಿಯನ್ ಫುಟ್ಬಾಲ್‌ನಲ್ಲಿ ಸ್ಪೇನ್ ಪ್ರಾಬಲ್ಯ ಸಾಧಿಸಿತ್ತು. 1950ರ ವಿಶ್ವಕಪ್‌ನಲ್ಲಿ 4ನೇ ಸ್ಥಾನಿಯಾಗಿದ್ದ ತಂಡ, 1964ರಲ್ಲಿ ಯುರೋ ಕಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ಬಳಿಕ ತಂಡ ಪಾತಾಳಕ್ಕೆ ಕುಸಿದಿತ್ತು. ಸ್ಪೇನ್‌ನ ಫುಟ್ಬಾಲ್ ಸಂಸ್ಕೃತಿಯೇ ಹೇಳಹೆಸರಿಲ್ಲದಂತೆ ಕಣ್ಮರೆಯಾಗಿತ್ತು. ಆದರೆ 2008ರ ಹೊತ್ತಿಗೆ ತಂಡ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಪಾರಮ್ಯ ಮೆರೆದಿತ್ತು.
2008-12ರ ಅವಧಿ ಸ್ಪೇನ್ ಫುಟ್ಬಾಲ್‌ನ ಸುವರ್ಣ ಯುಗ. ಇದು ಸ್ಪ್ಯಾನಿಶ್ ಫುಟ್ಬಾಲ್ ಇತಿಹಾಸದ ಉತ್ತುಂಗದ ಕಾಲ ಎಂಬುದು ಪ್ರತಿಯೋರ್ವ ಫುಟ್ಬಾಲ್ ಅಭಿಮಾನಿಗೂ ಗೊತ್ತಿದೆ. 2008ರಲ್ಲಿ ತಂಡ ಯುರೋಪಿಯನ್ ಚಾಂಪಿಯನ್ ಆಗಿತ್ತು. ಅದು 1964ರ ಬಳಿಕ ತಂಡಕ್ಕೆ ಸಿಕ್ಕ ಮೊದಲ ಟ್ರೋಫಿ. ಅದಾಗಿ 2 ವರ್ಷದಲ್ಲೇ 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ‘ವಾಕಾ ವಾಕಾ’ ಎಂದು ಕುಣಿದಿದ್ದು ಸ್ಪೇನ್. ಅರ್ಥಾತ್ ವಿಶ್ವ ಚಾಂಪಿಯನ್ ಆಗಿತ್ತು. 2012ರಲ್ಲಿ ತಂಡ ಮತ್ತೊಮ್ಮೆ ಯುರೋಪಿಯನ್ ಕಪ್ ಮುಡಿಗೇರಿಸಿಕೊಂಡಿತ್ತು. ಆದರೆ 2015-16ರ ಹೊತ್ತಿಗೆ ದಿಗ್ಗಜ ಫುಟ್ಬಾಲಿಗರು ಮರೆಗೆ ಸರಿಯುವುದರೊಂದಿಗೆ ತಂಡದ ಫುಟ್ಬಾಲ್ ಪರಂಪರೆಯೂ ಅವನತಿಯತ್ತ ಸಾಗಿತ್ತು.
ಈಗ ದಶಕದ ಬಳಿಕ ತಂಡ ಮತ್ತೊಮ್ಮೆ ಪುಟಿದೆದ್ದಿದೆ. ತನ್ನ ಸಾಂಪ್ರದಾಯಿಕ ‘ಟಿಕಿ ಟಾಕ’ ಆಟದ ಶೈಲಿಯನ್ನು ಆಧುನೀಕರಣಗೊಳಿಸಿ, ಈ ಕಾಲದ ಬೇಡಿಕೆಯಂತೆ ಆಟವಾಡುವುದನ್ನು ರೂಢಿಸಿಕೊಂಡ ತಂಡ ಮಗದೊಮ್ಮೆ ವಿಶ್ವ ಮಟ್ಟದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿದೆ.
ಸ್ಪೇನ್ ತಂಡವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದ ಕೋಚ್ ಲೂಯಿಸ್ ಡೆ ಲಾ ಫ್ಯುಂಟೆ, ಹಿರಿಯರ ತಂಡದೊಳಕ್ಕೆ ಬಂದಿದ್ದು 2022ರಲ್ಲಿ. ಆದರೆ ಅವರು ಸ್ಪೇನ್‌ನ ಫುಟ್ಬಾಲ್ ವ್ಯವಸ್ಥೆಯೊಳಕ್ಕೆ 2013ರಲ್ಲೇ ಕಾಲಿಟ್ಟಿದ್ದರು.
13 ವರ್ಷಗಳ ಹಿಂದೆ ಫ್ಯುಂಟೆ ನಿರುದ್ಯೋಗಿ. ಸ್ಪೇನ್‌ನ ಕಿರಿಯರ ತಂಡಕ್ಕೆ ಕೋಚ್ ಹುಡುಕಾಟದ ಬಗ್ಗೆ ದಿನಪತ್ರಿಕೆಯಲ್ಲಿ ಜಾಹೀರಾತು ನೋಡಿ, ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಸ್ಪೇನ್ ಫುಟ್ಬಾಲ್ ಸಂಸ್ಥೆ 2013ರಲ್ಲಿ ಅವರನ್ನು ತನ್ನ ರಾಷ್ಟ್ರೀಯ ಅಂಡರ್-19 ತಂಡದ ಕೋಚ್ ಆಗಿ ನೇಮಿಸಿತು. ಅಲ್ಲಿಂದಾಚೆಗೆ ಫ್ಯುಂಟೆ ಮುಟ್ಟಿದ್ದೆಲ್ಲಾ ಚಿನ್ನ!
ಫ್ಯುಂಟೆ ಮಾರ್ಗದರ್ಶನದಲ್ಲಿ ಸ್ಪೇನ್ 2015ರಲ್ಲಿ ಯುರೋಪಿಯನ್ ಅಂಡರ್-19 ಚಾಂಪಿಯನ್‌ಶಿಪ್ ಜಯಿಸಿತು. 2019ರಲ್ಲಿ ಯುರೋಪಿಯನ್ ಅಂಡರ್-21 ಚಾಂಪಿಯನ್‌ಶಿಪ್ ಸ್ಪೇನ್ ಪಾಲಾಯಿತು. 2022ರಲ್ಲಿ ಫ್ಯುಂಟೆ ಹಿರಿಯರ ತಂಡದ ಕೋಚ್ ಆಗಿ ಬಡ್ತಿ ಪಡೆದರು. ಆ ಬಳಿಕ ಸ್ಪೇನ್, 2023ರಲ್ಲಿ ಯುಇಎಫ್‌ಎ ನೇಷನ್ಸ್ ಕಪ್ ಜಯಿಸಿತು. 2024ರಲ್ಲಿ ಯುರೋ ಕಪ್ ಗೆದ್ದಿತು. ಇದೀಗ 2026ರಲ್ಲಿ ವಿಶ್ವ ಚಾಂಪಿಯನ್ ಆಗಿದೆ.
ಈ ವಿಶ್ವಕಪ್‌ನಲ್ಲಿ ಸ್ಪೇನ್ ತಂಡದ ಆಧಾರಸ್ತಂಭವಾಗಿದ್ದ ರೋಡ್ರಿ, ಫ್ಯಾಬಿಯನ್ ರೂಯಿಜ್, ಮಿಕೆಲ್ ಮೆರಿನಿ, ಉನೈ ಸೈಮನ್ ಫ್ಯುಂಟೆ ಗರಡಿಯಲ್ಲೇ ಬೆಳೆದವರು ಎನ್ನುವುದು ವಿಶೇಷ. ಸ್ಪ್ಯಾನಿಶ್ ಫುಟ್ಬಾಲ್‌ನ ಆಳ-ಅಗಲ ತಿಳಿದಿರುವ ಫ್ಯುಂಟೆಗೆ ಕೋಚಿಂಗ್ ಜವಾಬ್ದಾರಿ ನೀಡಿದ್ದು ಸ್ಪೇನ್ ಫುಟ್ಬಾಲ್ ಸಂಸ್ಥೆಯ ಮಾಸ್ಟರ್ ಸ್ಟ್ರೋಕ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.