ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ, ಇದೀಗ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದಾರೆ.
ಬೆಂಗಳೂರು: ಭಾರತದ ಫುಟ್ಬಾಲ್ ದಂತಕಥೆ ಸುನಿಲ್ ಚೆಟ್ರಿ ಗುರುವಾರವಾದ ಇಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಫುಟ್ಬಾಲ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. ಜೂನ್ 06ರಂದು ಕುವೈತ್ ವಿರುದ್ದ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವು ಚೆಟ್ರಿ ಭಾರತ ಪರ ಆಡಲಿರುವ ಕೊನೆಯ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯ ಎನಿಸಲಿದೆ.
ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ, ಇದೀಗ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದಾರೆ. ಕೋಲ್ಕತಾದ ಸಾಲ್ಟ್ ಲೇಕ್ ಮೈದಾನದಲ್ಲಿ ನಡೆಯಲಿರುವ ಕುವೈತ್ ಎದುರಿನ ಪಂದ್ಯವು ಸುನಿಲ್ ಚೆಟ್ರಿ ಭಾರತ ಫುಟ್ಬಾಲ್ ತಂಡದ ಜೆರ್ಸಿ ತೊಟ್ಟು ಆಡಲಿರುವ ಕೊನೆಯ ಪಂದ್ಯ ಎನಿಸಲಿದೆ.
ನಾನು ಮೊದಲ ಬಾರಿ ಭಾರತ ಪರ ಆಡಿದ ಪಂದ್ಯವನ್ನು ಎಂದೆಂದಿಗೂ ಮರೆಯುವುದಿಲ್ಲ ಹಾಗೂ ನೆನಪಿಸಿಕೊಳ್ಳುತ್ತಲೇ ಇರುತ್ತೇನೆ. ಅದೊಂದು ಅವಿಸ್ಮರಣೀಯ ಕ್ಷಣ. ಆ ಪಂದ್ಯಕ್ಕೂ ಒಂದು ದಿನ ಮುಂಚೆ, ನಮ್ಮ ರಾಷ್ಟ್ರೀಯ ತಂಡದ ಕೋಚ್ ಆಗಿದ್ದ ಸುಖಿ ಸರ್ ಬಂದು ಆಡೋಕೆ ರೆಡಿಯಿದ್ದೀಯಾ ಅಲ್ವಾ ಎಂದರು. ಆಗ ಅದೆಷ್ಟು ಖುಷಿಯಾಯ್ತು ಅಂತ ಹೇಳಲೂ ಸಾಧ್ಯವಿಲ್ಲ. ನಾನು ಜೆರ್ಸಿಯನ್ನು ತೆಗೆದುಕೊಂಡೆ. ಅದಕ್ಕೆ ಸ್ವಲ್ಪ ಫರ್ಪ್ಯೂಮ್ ಸ್ಪ್ರೇ ಮಾಡಿದೆ. ಯಾಕೆ ಹಾಗೆ ಮಾಡಿದೆ ನಂಗಂತೂ ಗೊತ್ತಿಲ್ಲ. ಆ ದಿನ ಎಲ್ಲವೂ ಸಂಭವಿಸಿತು. ನಾನು ನನ್ನ ಪಾದಾರ್ಪಣೆ ಪಂದ್ಯದಲ್ಲೇ 80ನೇ ನಿಮಿಷದ ಸುಮಾರಿಗೆ ಮೊದಲ ಗೋಲು ಬಾರಿಸಿದೆ. ಆ ದಿನವನ್ನು ನಾನು ಯಾವತ್ತೂ ಮರೆಯುವುದಿಲ್ಲ. ಅದು ನನ್ನ ಪಾಲಿಗೆ ಭಾರತ ತಂಡದ ಪರ ಆಡಿದ ಅತ್ಯುತ್ತಮ ದಿನ ಎಂದು ಆ ದಿನಗಳನ್ನು ಚೆಟ್ರಿ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
I'd like to say something... pic.twitter.com/xwXbDi95WV
— Sunil Chhetri (@chetrisunil11)39 ವರ್ಷದ ಸುನಿಲ್ ಚೆಟ್ರಿ ಭಾರತ ಫುಟ್ಬಾಲ್ ತಂಡವು ಕಂಡಂತಹ ಅದ್ಭುತ ಆಟಗಾರ ಎನಿಸಿಕೊಂಡಿದ್ದರು. ಭಾರತ ಪರ ಒಟ್ಟು 150 ಫುಟ್ಬಾಲ್ ಪಂದ್ಯಗಳನ್ನಾಡಿರುವ ಸುನಿಲ್ ಚೆಟ್ರಿ 94 ಗೋಲು ಬಾರಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ ಇತಿಹಾಸದಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಸಾರ್ವಕಾಲಿಕ ಪುಟ್ಬಾಲಿಗರ ಪಟ್ಟಿಯಲ್ಲಿ ಚೆಟ್ರಿ 4ನೇ ಸ್ಥಾನದಲ್ಲಿದ್ದಾರೆ.