ಮೆಸ್ಸಿ-ಎಂಬಾಪೆ ಜತೆ ಗೋಲ್ಡನ್ ಬೂಟ್ ರೇಸ್‌ಗಿಳಿದ ಹಾಲ್ಯಾಂಡ್! ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್ ಹೋರಾಟ ಅಂತ್ಯ

Kannadaprabha News   | Kannada Prabha
Published : Jul 07, 2026, 10:10 AM IST
Brazil vs Norway

ಸಾರಾಂಶ

ಯುವ ತಾರೆ ಎರ್ಲಿಂಗ್‌ ಹಾಲ್ಯಾಂಡ್‌ ಅವರ ಎರಡು ಗೋಲುಗಳ ನೆರವಿನಿಂದ ನಾರ್ವೆ ತಂಡವು ಫಿಫಾ ವಿಶ್ವಕಪ್‌ನಲ್ಲಿ ಐತಿಹಾಸಿಕವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಈ ಸೋಲಿನೊಂದಿಗೆ, 5 ಬಾರಿಯ ಚಾಂಪಿಯನ್‌ ಬ್ರೆಜಿಲ್‌ ಟೂರ್ನಿಯಿಂದ ಹೊರಬಿದ್ದಿದ್ದು, ತಂಡದ ತಾರೆ ನೇಯ್ಮರ್‌ ನಿವೃತ್ತಿಯ ಸುಳಿವು ನೀಡಿದ್ದಾರೆ.

ಈಸ್ಟ್‌ ರುಥರ್‌ಫೊರ್ಡ್‌: ಯುವ ಸೂಪರ್‌ಸ್ಟಾರ್‌ ಎರ್ಲಿಂಗ್‌ ಹಾಲ್ಯಾಂಡ್‌ ಅವರ ಮಿಂಚಿನ ಆಟ ನಾರ್ವೆಯನ್ನು ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೇರಿಸಿದರೆ, 5 ಬಾರಿ ಚಾಂಪಿಯನ್‌ ಬ್ರೆಜಿಲ್‌ ತಂಡವನ್ನು ಟೂರ್ನಿಯಿಂದ ಹೊರಗಟ್ಟಿದೆ. ಸಿಕ್ಕ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲಿದ ಬ್ರೆಜಿಲ್ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲೇ ಅಭಿಯಾನ ಕೊನೆಗೊಳಿಸಿತು.

ಪಂದ್ಯದ ಆರಂಭದಲ್ಲೇ ನಾರ್ವೆ ಆಕ್ರಮಣಕಾರಿ ಆಟಕ್ಕಿಳಿಯಿತು. ಆದರೆ ಮೊದಲ ಗೋಲು ಗಳಿಸುವ ಅವಕಾಶ ಸಿಕ್ಕಿದ್ದು ಬ್ರೆಜಿಲ್‌ಗೆ. ತಂಡಕ್ಕೆ 14ನೇ ನಿಮಿಷದಲ್ಲೇ ಪೆನಾಲ್ಟಿ ಲಭಿಸಿತು. ಆದರೆ ಅದನ್ನು ಗೋಲಾಗಿ ಪರಿವರ್ತಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಬ್ರುನೋ ಗ್ಯುಮರೇಸ್‌ ಬಾರಿಸಿದ ಚೆಂಡನ್ನು ನಾರ್ವೆ ಗೋಲ್‌ಕೀಪರ್‌ ಓರ್ಜಾನ್ ನೈಲ್ಯಾಂಡ್ ಯಶಸ್ವಿಯಾಗಿ ತಡೆದರು. ಬಳಿಕ ನಿಗದಿತ ಅವಧಿ ಕೊನೆಗೊಳ್ಳಲು 11 ನಿಮಿಷ ಇರುವವರೆಗೂ ಉಭಯ ತಂಡಗಳಿಗೆ ಗೋಲು ಗಳಿಸಲಾಗಲಿಲ್ಲ. 79ನೇ ನಿಮಿಷದಲ್ಲಿ ಆಕರ್ಷಕ ಹೆಡರ್‌ ಗೋಲು ದಾಖಲಿಸಿದ ಹಾಲ್ಯಾಂಡ್‌ ನಾರ್ವೆ ಖಾತೆ ತೆರೆದರು. 90ನೇ ನಿಮಿಷದಲ್ಲಿ ಮತ್ತೊಂದು ಸುಲಭ ಗೋಲು ಗಳಿಸಿದ ಅವರು, ನಾರ್ವೆ ಮುನ್ನಡೆಯನ್ನು ಹೆಚ್ಚಿಸಿದರು. ಹೆಚ್ಚುವರಿ ಅವಧಿಯಲ್ಲಿ(90+10ನೇ ನಿಮಿಷ) ಪೆನಾಲ್ಟಿ ಅವಕಾಶವನ್ನು ನೇಯ್ಮರ್‌ ಗೋಲಾಗಿ ಪರಿವರ್ತಿಸಿದರೂ ತಂಡದ ಗೆಲುವಿಗೆ ಅದು ಸಾಕಾಗಲಿಲ್ಲ.

1990ರ ಬಳಿಕ ಮೊದಲ ಸಲ ಬ್ರೆಜಿಲ್‌ ಕ್ವಾರ್ಟರ್ ಫೈನಲ್‌ಗೇರಲು ವಿಫಲ

1958, 1962, 1970, 1994 ಹಾಗೂ 2002ರಲ್ಲಿ ಚಾಂಪಿಯನ್‌ ಆಗಿರುವ ಬ್ರೆಜಿಲ್‌ ತಂಡ, 2 ಬಾರಿ ರನ್ನರ್‌-ಅಪ್‌, 2 ಬಾರಿ 3ನೇ ಸ್ಥಾನ, 2 ಬಾರಿ 4ನೇ ಸ್ಥಾನ ಕೂಡಾ ಪಡೆದಿವೆ. ವಿಶ್ವಕಪ್‌ನ ಅತ್ಯಂತ ಯಶಸ್ವಿ ತಂಡವಾಗಿರುವ ಬ್ರೆಜಿಲ್‌ 1990ರ ಬಳಿಕ ಇದೇ ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ಗೇರಲು ವಿಫಲವಾಗಿದೆ. 1994ರಿಂದ 2022ರ ವರೆಗೆ ತಂಡ ಸತತವಾಗಿ 8 ವಿಶ್ವಕಪ್‌ನಲ್ಲೂ ಕ್ವಾರ್ಟರ್‌ ಫೈನಲ್‌ ತಲುಪಿತ್ತು. ಇನ್ನು, ನಾರ್ವೆ ತಂಡ ಇದೇ ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ಗೇರಿದೆ. ತಂಡಕ್ಕೆ ಅಂತಿಮ 8ರ ಸುತ್ತಿನಲ್ಲಿ ಇಂಗ್ಲೆಂಡ್‌ ಸವಾಲು ಎದುರಾಗಲಿದೆ.

ತಲಾ ಏಳು ಗೋಲು: ಮೆಸ್ಸಿ, ಎಂಬಾಪೆ ಜತೆರೇಸ್‌ನಲ್ಲಿ ಹಾಲ್ಯಾಂಡ್‌

ಈ ಬಾರಿ ವಿಶ್ವಕಪ್‌ನಲ್ಲಿ ಲಿಯೋನಲ್‌ ಮೆಸ್ಸಿ ಹಾಗೂ ಕೀಲಿಯನ್‌ ಎಂಬಾಪೆ ನಡುವೆ ಇದ್ದ ಗೋಲ್ಡನ್‌ ಬೂಟ್‌ ರೇಸ್‌ಗೆ ಈಗ ಎರ್ಲಿಂಗ್‌ ಹಾಲ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಈ ಮೂವರು ಆಟಗಾರರೂ ತಲಾ 7 ಗೋಲು ದಾಖಲಿಸಿದ್ದಾರೆ. ಇಂಗ್ಲೆಂಡ್‌ನ ಹ್ಯಾರಿ ಕೇನ್‌ ಕೂಡಾ ಈ ಮೂವರಿಗೆ ಪೈಪೋಟಿ ಕೊಡುವ ಸಾಧ್ಯತೆಯಿದೆ. ಅವರು 6 ಗೋಲು ಗಳಿಸಿದ್ದಾರೆ.

ಬ್ರೆಜಿಲ್‌ ಎದುರಿಸಿದ 91 ದೇಶಗಳ ಪೈಕಿ ನಾರ್ವೆ ವಿರುದ್ಧ ಮಾತ್ರ ಗೆದ್ದಿಲ್ಲ!

ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಬ್ರೆಜಿಲ್‌ ತಂಡ ಈವರೆಗೂ 91 ದೇಶಗಳ ವಿರುದ್ಧ ಆಡಿದೆ. ಈ ಪೈಕಿ ತನ್ನಿಂದ ಸೋಲಿಸಲು ಸಾಧ್ಯವಾಗದ ಏಕೈಕ ತಂಡವೆಂದರೆ ಅದು ನಾರ್ವೆ. ಬ್ರೆಜಿಲ್‌ ಈವರೆಗೂ ನಾರ್ವೆ ವಿರುದ್ಧ 5 ಪಂದ್ಯಗಳನ್ನಾಡಿದೆ. ಈ ಪೈಕಿ 2 ಪಂದ್ಯ ಡ್ರಾಗೊಂಡಿದ್ದು, 3 ಪಂದ್ಯಗಳಲ್ಲಿ ಸೋಲನುಭವಿಸಿದೆ.

ಬ್ರೆಜಿಲ್‌ ತಂಡದ ಪರ ಕೊನೆ ಪಂದ್ಯವನ್ನಾಡಿದ ನೇಯ್ಮರ್‌

ನಾರ್ವೆ ವಿರುದ್ಧ ಪಂದ್ಯದ ಸೋಲಿನ ಬಳಿಕ ಬ್ರೆಜಿಲ್‌ ತಾರೆ ನೇಯ್ಮರ್‌ ತಮ್ಮ ಅಂತಾರಾಷ್ಟ್ರೀಯ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಅವರು, ‘ನಾನು ದಣಿದಿದ್ದೇನೆ. ಮೆಟ್‌ಲೈಫ್‌ ಕ್ರೀಡಾಂಗಣದಲ್ಲಿ ನಾನು ವೃತ್ತಿಬದುಕು ಆರಂಭಿಸಿದ್ದೆ. ಈಗ ಅಲ್ಲೇ ಕೊನೆಗೊಳಿಸಿದ್ದೇನೆ. ಈಗ ಎಲ್ಲವೂ ಮುಗಿದಿದೆ’ ಎಂದಿದ್ದು, ಈ ಮೂಲಕ ರಾಷ್ಟ್ರೀಯ ತಂಡದ ಪರ ಇನ್ನು ಮುಂದೆ ಆಡುವುದಿಲ್ಲ ಎಂದಿದ್ದಾರೆ.2010ರಲ್ಲಿ ಬ್ರೆಜಿಲ್‌ ಪರ ನೇಯ್ಮರ್‌ ಮೊದಲ ಬಾರಿ ಆಡಿದ್ದರು. ಅವರಿಗೆ ಈಗ 34 ವರ್ಷವಾಗಿದ್ದರೂ, ಗಾಯದ ಸಮಸ್ಯೆಯಿಂ ಬಳಲುತ್ತಿದ್ದಾರೆ. ಹೀಗಾಗಿ 2023ರ ಬಳಿಕ ಈ ವಿಶ್ವಕಪ್‌ನ 3ನೇ ಪಂದ್ಯದವರೆಗೂ ಅವರು ಬ್ರೆಜಿಲ್‌ ಪರ ಆಡುವ ಅವಕಾಶ ಕಳೆದುಕೊಂಡಿದ್ದರು. ಈ ಬಾರಿ ವಿಶ್ವಕಪ್‌ನಲ್ಲಿ ಅವರು ಏಕೈಕ ಗೋಲು ದಾಖಲಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

FIFA World Cup 2026: ಡೊನಾಲ್ಡ್ ಟ್ರಂಪ್‌ ಒಂದು ಕರೆಗೆ ಅಮೆರಿಕ ಆಟಗಾರನ ಸಸ್ಪೆಂಡ್ ರದ್ದು,!
FIFA World Cup 2026 ಫ್ರಾನ್ಸ್‌ಗೆ ಕ್ವಾರ್ಟರ್‌ ಫೈನಲ್ ಟಿಕೆಟ್; ಪರಗ್ವೆ ವಿರುದ್ಧ ಎಂಬಾಪೆ ಮಿಂಚಿನ ಗೋಲು