FIFA Ranking: ಅರ್ಜೆಂಟೀನಾ ಚಾಂಪಿಯನ್ ಪಟ್ಟ ಅಲಂಕರಿಸಿದರೂ ಬ್ರೆಜಿಲ್‌ ನಂ.1 ಸ್ಥಾನ ಭದ್ರ..!

By Naveena K VFirst Published Dec 20, 2022, 5:35 PM IST
Highlights

ಫಿಫಾ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಫಿಫಾ ರ‍್ಯಾಂಕಿಂಗ್‌ ಪ್ರಕಟ
ಸೆಮೀಸ್‌ಗೇರಲು ವಿಫಲವಾದರೂ ನಂ.1 ಸ್ಥಾನ ಕಾಯ್ದುಕೊಂಡ ಬ್ರೆಜಿಲ್
ಚಾಂಪಿಯನ್ ಪಟ್ಟ ಅಲಂಕರಿಸಿದ ಅರ್ಜೆಂಟೀನಾಗೆ ಎರಡನೇ ಸ್ಥಾನ

ನವದೆಹಲಿ(ಡಿ.20): ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಹೊರತಾಗಿಯೂ, ಬ್ರೆಜಿಲ್‌ ತಂಡವು ಫಿಫಾ ರ‍್ಯಾಂಕಿಂಗ್‌‌ನಲ್ಲಿ ನಂ.1 ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಡಿಸೆಂಬರ್ 18ರಂದ ನಡೆದ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು 4-2 ಅಂತರದ ಪೆನಾಲ್ಟಿ ಶೂಟೌಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂರನೇ ಬಾರಿಗೆ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 1986ರಲ್ಲಿ ಕೊನೆಯ ಬಾರಿಗೆ ಫಿಫಾ ವಿಶ್ವಕಪ್ ಜಯಿಸಿದ್ದ ಅರ್ಜೆಂಟೀನಾ ತಂಡವು ಇದೀಗ ಕತಾರ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಮೂರನೇ ಬಾರಿಗೆ ಫಿಫಾ ವಿಶ್ವಕಪ್ ಜಯಿಸುವಲ್ಲಿ ಅರ್ಜೆಂಟೀನಾ ತಂಡವು ಯಶಸ್ವಿಯಾಗಿತ್ತು.

ಇನ್ನು ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಜಯಿಸಿದರೂ ಸಹಾ ಫಿಫಾ ರ‍್ಯಾಂಕಿಂಗ್‌‌ನಲ್ಲಿ ಬ್ರೆಜಿಲ್ ತಂಡವೇ ಅಗ್ರಸ್ಥಾನದಲ್ಲಿ ಮುಂದುವರೆದಿದೆ. 2022ರ ಫೆಬ್ರವರಿಯಲ್ಲಿ ಬೆಲ್ಜಿಯಂ ತಂಡವನ್ನು ಹಿಂದಿಕ್ಕಿ ಬ್ರೆಜಿಲ್ ತಂಡವು ಫಿಫಾ ರ‍್ಯಾಂಕಿಂಗ್‌‌ನಲ್ಲಿ ಅಗ್ರಸ್ಥಾನಕ್ಕೇರಿತ್ತು. ಇದೀಗ ಬ್ರೆಜಿಲ್ ತಂಡವು ಕ್ವಾರ್ಟರ್‌ ಫೈನಲ್‌ನಲ್ಲೇ ಆಘಾತಕಾರಿ ಸೋಲುಂಡು ಟೂರ್ನಿಯಿಂದ ಹೊರಬಿದ್ದಿತ್ತು. ಇನ್ನು ಅರ್ಜೆಂಟೀನಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದ್ದರೂ ಸಹಾ ಬ್ರೆಜಿಲ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಲು ವಿಫಲವಾಗಿದೆ.

FIFA World Cup ಸಂಭ್ರಮದಲ್ಲಿ ಮಿಂದೆದ್ದ ಚಾಂಪಿಯನ್‌ ಅರ್ಜೆಂಟೀನಾ!

ಬ್ರೆಜಿಲ್ ತಂಡವು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೂರು ಗೆಲುವುಗಳನ್ನು ದಾಖಲಿಸಿತ್ತು. ಆದರೆ ಗ್ರೂಪ್‌ ಹಂತದಲ್ಲಿ ಕ್ಯಾಮರೋನ್ ಎದುರು ಮುಗ್ಗರಿಸಿದ್ದ ಬ್ರೆಜಿಲ್ ತಂಡವು, ಇದಾದ ಬಳಿಕ ಕ್ವಾರ್ಟರ್ ಫೈನಲ್‌ನಲ್ಲಿ ಕ್ರೊವೇಷಿಯಾ ಎದುರು ರೋಚಕ ಸೋಲು ಕಾಣುವ ಮೂಲಕ ಬ್ರೆಜಿಲ್ ತನ್ನ ಅಭಿಯಾನವನ್ನು ಮುಗಿಸಿತ್ತು.

ಅರ್ಜೆಂಟೀನಾ ತಂಡವು 2021ರಲ್ಲಿ ನಡೆದ ಕೋಪಾ ಅಮೆರಿಕ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಇದೀಗ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಿಗದಿತ ಸಮಯದೊಳಗೆ ಪಂದ್ಯ ಗೆಲುವು ದಾಖಲಿಸಿದಾಗ ಸಿಗುವುದಕ್ಕಿಂತ ಶೂಟೌಟ್‌ನಲ್ಲಿ ಸಿಗುವ ಅಂಕವು ಕಡಿಮೆ ಮೌಲ್ಯವನ್ನು ಹೊಂದಿರುತ್ತದೆ. ಫ್ರಾನ್ಸ್ ಅಥವಾ ಅರ್ಜೆಂಟೀನಾ ತಂಡವು ಹೆಚ್ಚುವರಿ 30 ನಿಮಿಷ ಸೇರಿದಂತೆ 120 ನಿಮಿಷದೊಳಗೆ ಪಂದ್ಯವನ್ನು ಜಯಿಸಿದ್ದರೇ ನಂ.1 ಸ್ಥಾನಕ್ಕೆ ಲಗ್ಗೆಯಿಡುತ್ತಿತ್ತು. ಆದರೆ ಹೆಚ್ಚುವರಿ ಸಮಯದ ಬಳಿಕವೂ ಉಭಯ ತಂಡಗಳು 3-3ರ ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆಹೋಗಬೇಕಾಯಿತು.

ESPN ವರದಿಯ ಪ್ರಕಾರ ಹಾಲಿ ಚಾಂಪಿಯನ್ ಅರ್ಜೆಂಟೀನಾ ಹಾಗೂ ಫ್ರಾನ್ಸ್‌ ತಂಡಗಳು ತಲಾ ಒಂದೊಂದು ಸ್ಥಾನ ಏರಿಕೆ ಕಂಡು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ತಲುಪಿವೆ. ಇನ್ನು ಫಿಫಾ ವಿಶ್ವಕಪ್ ಗ್ರೂಪ್ ಹಂತದಲ್ಲೇ ಹೊರಬಿದ್ದ ಬೆಲ್ಜಿಯಂ ತಂಡವು 2 ಸ್ಥಾನ ಕುಸಿತ ಕಂಡು 4ನೇ ಸ್ಥಾನಕ್ಕೆ ಜಾರಿದೆ. ಇನ್ನು ಇಂಗ್ಲೆಂಡ್ ತಂಡವು 5ನೇ ಸ್ಥಾನದಲ್ಲೇ ಉಳಿದರೆ, ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ ನೆದರ್‌ಲೆಂಡ್ಸ್ ತಂಡವು 6ನೇ ಸ್ಥಾನಕ್ಕೆ ಜಾರಿದೆ.

ಇನ್ನು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟ ಕ್ರೊವೇಷಿಯಾ ತಂಡವು 7ನೇ ಸ್ಥಾನದಲ್ಲಿದ್ದರೇ, ಇಟಲಿ ಎಂಟನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಪೋರ್ಚುಗಲ್‌ 9ನೇ ಸ್ಥಾನದಲ್ಲೇ ಭದ್ರವಾಗಿದ್ದರೇ, ಸ್ಪೇನ್ ತಂಡವು ಮೂರು ಸ್ಥಾನ ಕುಸಿತ ಕಂಡು 10ನೇ ಸ್ಥಾನ ಪಡೆದುಕೊಂಡಿದೆ.

click me!