ಅಕ್ಟೋಬರ್ ತಿಂಗಳಲ್ಲಿ ಫಿಫಾ ಅಧ್ಯಕ್ಷ- ನರೇಂದ್ರ ಮೋದಿ ಭೇಟಿ?

By Kannadaprabha NewsFirst Published Sep 20, 2022, 10:26 AM IST
Highlights

ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೋ ಅಕ್ಟೋಬರ್‌ನಲ್ಲಿ ಭಾರತಕ್ಕೆ ಭೇಟಿ
ಪ್ರಧಾನಿ ನರೇಂದ್ರ ಮೋದಿ ಜೊತೆ ಭಾರತೀಯ ಫುಟ್ಬಾಲ್‌ ಬಗ್ಗೆ ಮಾತುಕತೆ
ಅಕ್ಟೋಬರ್ 11ರಿಂದ ಅಂಡರ್‌-17 ಮಹಿಳಾ ವಿಶ್ವಕಪ್‌ ಭಾರತದಲ್ಲಿ ಅಯೋಜನೆ

ನವದೆಹಲಿ(ಸೆ.20): ಅಂತಾರಾಷ್ಟ್ರೀಯ ಫುಟ್ಬಾಲ್‌ ಆಡಳಿಯ ಸಮಿತಿ(ಫಿಫಾ) ಅಧ್ಯಕ್ಷ ಗಿಯಾನಿ ಇನ್ಫಾಂಟಿನೋ ಅವರು ಅಕ್ಟೋಬರ್‌ನಲ್ಲಿ ಭಾರತಕ್ಕೆ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಜೊತೆ ಭಾರತೀಯ ಫುಟ್ಬಾಲ್‌ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಗಳಲ್ಲಿ ವರದಿಯಾಗಿದೆ. ಗಿಯಾನಿ ಭಾರತ ಭೇಟಿ ಬಗ್ಗೆ ಇನ್ನೂ ಅಧಿಕೃತ ಪ್ರಕಟನೆ ಹೊರಬಿದ್ದಿಲ್ಲ. ಆದರೆ ಅಕ್ಟೋಬರ್‌ ಕೊನೆಯ ವಾರ ಅವರು ಭಾರತಕ್ಕೆ ಆಗಮಿಸುವುದು ಬಹುತೇಕ ಅಂತಿಮವಾಗಿದೆ ಎಂದು ತಿಳಿದು ಬಂದಿದೆ. 

ಸೋಮವಾರ ನಡೆದ ಭಾರತೀಯ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ಮಾಹಿತಿ ಹೊರ ಬಿದ್ದಿದೆ. ಭೇಟಿ ವೇಳೆ ಅವರು ಮೋದಿ ಅವರನ್ನೂ ಸಹ ಭೇಟಿಯಾಗಿ ಭಾರತೀಯ ಫುಟ್‌ಬಾಲ್‌ ಬೆಳವಣಿಗೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಅ.11ರಿಂದ ಅಂಡರ್‌-17 ಮಹಿಳಾ ವಿಶ್ವಕಪ್‌ ಭಾರತದಲ್ಲಿ ಅಯೋಜನೆಗೊಂಡಿದ್ದು, ಹೀಗಾಗಿ ಗಿಯಾನಿ ಇನ್ಫಾಂಟಿನೋ ಭಾರತಕ್ಕೆ ಬರಲಿದ್ದಾರೆ ಎನ್ನಲಾಗಿದೆ.

2023ರ ಏಷ್ಯನ್‌ ಕಪ್‌ ವರೆಗೂ ಭಾರತ ಫುಟ್ಬಾಲ್‌ ತಂಡಕ್ಕೆ ಸ್ಟಿಮಾಕ್‌ ಕೋಚ್‌

ಕೋಲ್ಕತಾ: ಕ್ರೊವೇಷಿಯಾದ ಇಗೊರ್‌ ಸ್ಟಿಮಾಕ್‌ರನ್ನೇ 2023ರ ಎಎಫ್‌ಸಿ ಏಷ್ಯನ್‌ ಕಪ್‌ ವರೆಗೂ ಭಾರತ ಪುರುಷರ ಫುಟ್ಬಾಲ್‌ ತಂಡದ ಕೋಚ್‌ ಆಗಿ ಮುಂದುವರಿಸಲು ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ನಿರ್ಧರಿಸಿದೆ. ದಿಗ್ಗಜ ಫುಟ್ಬಾಲಿಗ ಐಎಂ ವಿಜಯನ್‌ ಅಧ್ಯಕ್ಷರಾಗಿರುವ ತಾಂತ್ರಿಕ ಸಮಿತಿಯು ಸ್ಟಿಮಾಕ್‌ರನ್ನೇ ಮುಂದುವರಿಸಲು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಎಐಎಫ್‌ಎಫ್‌ ಈ ತೀರ್ಮಾನ ಕೈಗೊಂಡಿದೆ. 2019ರ ಮೇ ತಿಂಗಳಲ್ಲಿ ಭಾರತ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದ ಸ್ಟಿಮಾಕ್‌ರ ಗುತ್ತಿಗೆಯನ್ನು 2021ರಲ್ಲಿ ವಿಸ್ತರಿಸಲಾಗಿತ್ತು.

ಅಥ್ಲೀಟ್‌ ಪೂವಮ್ಮಗೆ 2 ವರ್ಷ ನಿಷೇಧ

ನವದೆಹಲಿ: ಇತ್ತೀಚೆಗೆ ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾಗಿದ್ದ ಭಾರತದ ಹಿರಿಯ ಓಟಗಾರ್ತಿ, ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ ಕರ್ನಾಟಕದ ಎಂ.ಆರ್‌.ಪೂವಮ್ಮ ಅವರಿಗೆ ಡೋಪಿಂಗ್‌ ವಿರೋಧಿ ಮೇಲ್ಮನವಿ ಸಮಿತಿ(ಎಡಿಎಪಿ) 2 ವರ್ಷ ನಿಷೇಧ ಹೇರಿದೆ. 

World Wrestling Championships: ಅಥ್ಲೀಟ್‌ಗಳು ಕೂಡಾ ಮನುಷ್ಯರೇ, ರೋಬೋಟ್‌ ಅಲ್ಲ: ವಿನೇಶ್‌ ಫೋಗಾಟ್‌

ಕಳೆದ ವರ್ಷ ಫೆಬ್ರವರಿಯಲ್ಲಿ ಪಟಿಯಾಲದಲ್ಲಿ ನಡೆದ ಭಾರತೀಯ ಗ್ರ್ಯಾನ್‌ಪ್ರಿಯಲ್ಲಿ ಪಾಲ್ಗೊಂಡ ಬಳಿಕ 32 ವರ್ಷದ ಪೂವಮ್ಮ ಅವರ ಉದ್ದೀಪನ ಸ್ಯಾಂಪಲ್‌ ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರ ವರದಿ ಪಾಸಿಟಿವ್‌ ಬಂದಿದ್ದರಿಂದ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ(ನಾಡಾ) ಜೂನ್‌ನಲ್ಲಿ 3 ತಿಂಗಳು ನಿಷೇಧ ಹೇರಿ ಆದೇಶಿಸಿತ್ತು. ಇದರ ವಿರುದ್ಧ ನಾಡಾ ಮೇಲ್ಮನವಿ ಸಲ್ಲಿಸಿದ್ದು, ಎಡಿಎಪಿ 3 ತಿಂಗಳ ನಿಷೇಧವನ್ನು 2 ವರ್ಷಕ್ಕೆ ವಿಸ್ತರಿಸಿದೆ.

ಅ.1-8ರ ವರೆಗೂ ರಾಜ್ಯ ಕಿರಿಯರ ಬಾಸ್ಕೆಟ್‌ಬಾಲ್‌

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ(ಕೆಎಸ್‌ಬಿಎ) ಅ.1ರಿಂದ 8ರ ವರೆಗೂ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕಿರಿಯರ(ಅಂಡರ್‌-18) ಚಾಂಪಿಯನ್‌ಶಿಪ್‌ ಅನ್ನು ಆಯೋಜಿಸಲಿದೆ. 2004ರ ಜನವರಿ 1ರ ಬಳಿಕ ಜನಿಸಿರುವ ಆಟಗಾರರು ಟೂರ್ನಿಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ ಎಂದು ಕೆಎಸ್‌ಬಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ದಿಲೀಪ್‌ ಟಿರ್ಕೆ ಸ್ಪರ್ಧೆ

ನವದೆಹಲಿ: ಭಾರತದ ಮಾಜಿ ನಾಯಕ ಹಾಗೂ ಒಲಿಂಪಿಯನ್‌ ದಿಲೀಪ್‌ ಟಿರ್ಕೆ ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದು, ನಾಮಪತ್ರ ಸಲ್ಲಿಸಿದರು. ಸದ್ಯ ಅವರು ಒಡಿಶಾ ಹಾಕಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ. 

‘ಪೂರ್ತಿ ಈಶಾನ್ಯ ನನ್ನ ಜೊತೆಗಿದೆ. ಕೇರಳ, ತಮಿಳುನಾಡು, ರಾಜಸ್ಥಾನ ಸೇರಿ ಇನ್ನೂ ಕೆಲ ರಾಜ್ಯ ಸಂಸ್ಥೆಗಳೊಂದಿಗೆ ಮಾತನಾಡಿ ನನ್ನನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದೇನೆ. ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ’ ಎಂದು ದಿಲೀಪ್‌ ಹೇಳಿದ್ದಾರೆ. ಅ.1ರಂದು ಹಾಕಿ ಇಂಡಿಯಾ ಚುನಾವಣೆ ನಡೆಯಲಿದೆ.

click me!