FIFA World Cup 2026: 1934ರ ಬಳಿಕ ಸೋಲಿಲ್ಲ, ಆದರೆ ಗೆಲುವೂ ಇಲ್ಲ; ಬ್ರೆಜಿಲ್‌ಗೆ ವಿಶ್ವಕಪ್‌ ಆರಂಭದಲ್ಲಿ ನಿರಾಸೆ

Kannadaprabha News   | Kannada Prabha
Published : Jun 15, 2026, 09:10 AM IST
Brazil vs Morocco

ಸಾರಾಂಶ

ಫಿಫಾ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ, 5 ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವು ಮೊರಾಕ್ಕೊ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿದೆ. ನೇಯ್ಮರ್ ಅನುಪಸ್ಥಿತಿಯಲ್ಲಿ ನಡೆದ ಈ ಪಂದ್ಯದಲ್ಲಿ, ವಿನಿಶಿಯಸ್‌ ಜೂನಿಯರ್‌ ಬ್ರೆಜಿಲ್‌ ಪರ ಗೋಲು ಗಳಿಸಿ ಸೋಲಿನಿಂದ ಪಾರುಮಾಡಿದರು.

ಈಸ್ಟ್‌ ರುಥರ್‌ಫೋರ್ಡ್‌(ನ್ಯೂಜೆರ್ಸಿ): 5 ಬಾರಿ ಚಾಂಪಿಯನ್‌ ಬ್ರೆಜಿಲ್‌ ತಂಡ ಈ ಬಾರಿ ಫಿಫಾ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. ಶನಿವಾರ ಮಧ್ಯರಾತ್ರಿ ವಿಶ್ವ ನಂ.7 ಮೊರಾಕ್ಕೊ ವಿರುದ್ಧ ನಡೆದ ಪಂದ್ಯದಲ್ಲಿ ವಿಶ್ವ ನಂ.6 ಬ್ರೆಜಿಲ್‌ ತಂಡ 1-1 ಗೋಲಿನಿಂದ ಡ್ರಾಗೆ ತೃಪ್ತಿಪಟ್ಟುಕೊಂಡಿತು.

ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕಿಳಿದ 2022ರ ವಿಶ್ವಕಪ್‌ನ ಸೆಮಿಫೈನಲಿಸ್ಟ್ ಮೊರಾಕ್ಕೊ ತಂಡ, ಮೊದಲ 30 ನಿಮಿಷಗಳಲ್ಲೇ 12 ಶಾಟ್‌ಗಳ ಮೂಲಕ ಗೋಲು ಗಳಿಸಲು ಪ್ರಯತ್ನಿಸಿತು. ಈ ಪೈಕಿ 21ನೇ ನಿಮಿಷದಲ್ಲಿ ತಂಡಕ್ಕೆ ಯಶಸ್ಸು ಲಭಿಸಿತು. ಇಸ್ಮಾಯಿಲ್‌ ಸೈಬಾರಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ಮೊರಾಕ್ಕೊಗೆ ಮುನ್ನಡೆ ಒದಗಿಸಿದರು. ಮುಂದಿನ 11 ನಿಮಿಷಗಳಲ್ಲೇ ಬ್ರೆಜಿಲ್‌ ಗೋಲು ಬಾರಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ವಿನಿಶಿಯಸ್‌ ಜೂನಿಯರ್‌ ಗೋಲು ದಾಖಲಿಸಿದರು. ಆ ಬಳಿಕ ಉಭಯ ತಂಡಗಳಿಂದಲೂ ಗೋಲು ದಾಖಲಾಗಲಿಲ್ಲ. ಬ್ರೆಜಿಲ್‌ಗೆ ಹೋಲಿಸಿದರೆ ಮೊರಾಕ್ಕೊ ಆಟಗಾರರು ಚೆಂಡನ್ನು ಪಾಸ್‌ ಮಾಡುವುದರಲ್ಲಿ ಹೆಚ್ಚಿನ ಯಶಸ್ಸು ಪಡೆದರು. ಹೀಗಾಗಿ ಹಲವು ತಾರಾ ಆಟಗಾರರ ಉಪಸ್ಥಿತಿಯಲ್ಲೂ ಬ್ರೆಜಿಲ್‌ಗೆ ಗೆಲ್ಲಲು ಸಾಧ್ಯವಾಗಲಿಲ್ಲ.

ನೇಯ್ಮರ್‌ ಅನುಪಸ್ಥಿತಿ:

ಗಾಯದಿಂದ ಬಳಲುತ್ತಿರುವ ನೇಯ್ಮರ್‌ ಈ ಪಂದ್ಯದಲ್ಲಿ ಆಡಲಿಲ್ಲ. ಅವರು ಡಗೌಟ್‌ನಲ್ಲಿ ಕಾಣಿಸಿಕೊಂಡು, ಪಂದ್ಯದ ವೇಳೆ ಆಟಗಾರರಿಗೆ ಕೋಚಿಂಗ್‌ ನೀಡುತ್ತಿದ್ದರು. ಅವರು ಮುಂದಿನ ಪಂದ್ಯದಲ್ಲೂ ಆಡುವ ಬಗ್ಗೆ ಖಚಿತ ಮಾಹಿತಿಯಿಲ್ಲ.

ಅಜೇಯ ಓಟ:

ಬ್ರೆಜಿಲ್‌ ತಂಡ 1934ರಿಂದಲೂ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಸೋತಿಲ್ಲ. ತಂಡ 21 ಪಂದ್ಯಗಳಲ್ಲಿ 17ರಲ್ಲಿ ಗೆದ್ದಿದ್ದರೆ, 4 ಪಂದ್ಯ ಡ್ರಾಗೊಂಡಿದೆ. 1934ರಲ್ಲಿ ಕೊನೆ ಬಾರಿ ಸ್ಪೇನ್‌ ವಿರುದ್ಧ ಆರಂಭಿಕ ಪಂದ್ಯದಲ್ಲಿ ಪರಾಭವಗೊಂಡಿತ್ತು.

ಜರ್ಮನಿಯ ಆರ್ಭಟ, ಕ್ಯುರಾಕಾವೊ ವಿರುದ್ಧ 7-1 ಗೋಲಿನ ಭರ್ಜರಿ ಜಯ

ಟೆಕ್ಸಾಸ್‌(ಅಮೆರಿಕ): 4 ಬಾರಿ ಚಾಂಪಿಯನ್‌ ಜರ್ಮನಿ ಈ ಬಾರಿ ಫಿಫಾ ವಿಶ್ವಕಪ್‌ಗೆ ಭರ್ಜರಿಯಾಗಿಯೇ ಕಾಲಿಟ್ಟಿದೆ. ಭಾನುವಾರ ರಾತ್ರಿ ಕ್ಯುರಾಕಾವೊ ವಿರುದ್ಧ ಪಂದ್ಯದಲ್ಲಿ 7-1 ಗೋಲುಗಳಿಂದ ಅಬ್ಬರದ ಗೆಲುವು ಸಾಧಿಸಿದೆ.

ಸುಲಭ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಜರ್ಮನಿ 6ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಫೆಲಿಕ್ಸ್‌ ಮೆಚಾ ಜರ್ಮನಿ ಪರ ಮೊದಲ ಗೋಲು ದಾಖಲಿಸಿದರು. 21ನೇ ನಿಮಿಷದಲ್ಲಿ ಲಿವಾನೊ ಬಾರಿಸಿದ ಗೋಲಿನಿಂದಾಗಿ ಕ್ಯುರಾಕಾವೊ ಪಂದ್ಯವನ್ನು 1-1ರಲ್ಲಿ ಸಮಬಲ ಸಾಧಿಸಿತು. ಆ ಬಳಿಕ ನಡೆದಿದ್ದು ಜರ್ಮನಿಯ ಅಬ್ಬರ. 38ನೇ ನಿಮಿಷದಲ್ಲಿ ನಿಕೊ ಸ್ಕ್ಲೋಟರ್‌ಬೆಕರ್‌, ಮೊದಲಾರ್ಧದ ಹೆಚ್ಚುವರಿ ನಿಮಿಷದಲ್ಲಿ ಕೇ ಹಾವರ್ಟ್ಜ್‌(ಪೆನಾಲ್ಟಿ) ಗೋಲು ಬಾರಿಸಿದರು. 47ನೇ ನಿಮಿಷದಲ್ಲಿ ಜಮಲ್‌ ಮುಸಿಯಾಲ, 68ನೇ ನಿಮಿಷದಲ್ಲಿ ನಥಾನೀಲ್‌ ಬ್ರೌನ್‌, 88ನೇ ನಿಮಿಷದಲ್ಲಿ ಡೆನಿಜ್‌ ಉಂಡಾವ್‌ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಆ ಬಳಿಕ 88ನೇ ನಿಮಿಷದಲ್ಲಿ ಹಾವರ್ಟ್ಜ್‌ ಮತ್ತೊಂದು ಗೋಲು ಹೊಡೆದ ಗೆಲುವಿನ ಅಂತರ ಹೆಚ್ಚಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

FIFA World Cup 2026: ವಲಸಿಗ ಕ್ಯಾಂಪ್‌ನಲ್ಲಿ ಜನಿಸಿದ್ದ ನೆಸ್ಸೂರಿ ಈಗ ಆಸ್ಟ್ರೇಲಿಯಾ ಗೆಲುವಿನ ರೂವಾರಿ!
ಗರ್ಭಿಣಿ ತಾಯಿಗೆ ವಿಮಾನವೇರಲು ನಿರಾಕರಿಸಿದ್ದರಿಂದ ಅಮೆರಿಕದಲ್ಲೇ ಹುಟ್ಟಿದ್ದವ ಈಗ ವಿಶ್ವಕಪ್‌ನ ಸ್ಟಾರ್‌!