ಧನದ್ರಯೋದಶಿ ದಿನ ಬರೀ ವಸ್ತು ಖರೀದಿ ಮಾಡಿದ್ರೆ ಆಗ್ಲಿಲ್ಲ, ಅವುಗಳ ಪೂಜೆ, ಬಳಕೆ ವಿಧಾನ ಗೊತ್ತಿರಲಿ

Published : Nov 04, 2026, 01:03 PM IST
Dhanteras

ಸಾರಾಂಶ

ಧನ್ತೇರಸ್‌ ದಿನ ಹೊಸ ವಸ್ತುಗಳನ್ನು ಖರೀದಿ ಮಾಡ್ಬೇಕು ಎಂಬ ವಿಷ್ಯ ಬಹುತೇಕ ಎಲ್ಲರಿಗೂ ಗೊತ್ತು. ಅದ್ರಂತೆ ಅನೇಕರು ಬೆಳ್ಳಿ, ಬಂಗಾರ, ಪಾತ್ರೆ, ಪೊರಕೆ ಖರೀದಿ ಮಾಡ್ತಾರೆ. ಆದ್ರೆ ಮನೆಗೆ ತಂದ್ಮೇಲೆ ಅದನ್ನು ಏನು ಮಾಡ್ಬೇಕು ಅನ್ನೋದೇ ಗೊತ್ತಿರೋದಿಲ್ಲ.

ಧನತ್ರಯೋದಶಿ ಮೂಲಕ ದೀಪಾವಳಿಗೆ ಚಾಲನೆ ಸಿಗುತ್ತದೆ. ಈ ದಿನ ಲಕ್ಷ್ಮೀ ದೇವಿ, ಕುಬೇರ ದೇವರು ಹಾಗೂ ಭಗವಾನ್ ಧನ್ವಂತರಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತೆ. ಅಷ್ಟೇ ಅಲ್ದೆ, ಚಿನ್ನ, ಬೆಳ್ಳಿ, ಹೊಸ ಪಾತ್ರೆಗಳು, ಪೊರಕೆ ಸೇರಿದಂತೆ ಹಲವು ಶುಭ ವಸ್ತುಗಳನ್ನು ಖರೀದಿಸುವ ಸಂಪ್ರದಾಯ ಇದೆ. ಧನತ್ರಯೋದಶಿಯಂದು ಮನೆಗೆ ತಂದ ವಸ್ತುಗಳು ಸುಖ, ಸಮೃದ್ಧಿ ಮತ್ತು ಸೌಭಾಗ್ಯದ ಸಂಕೇತ ಎಂಬ ನಂಬಿಕೆಯಿದೆ. ಆದರೆ ಈ ದಿನ ಖರೀದಿಸಿದ ವಸ್ತುಗಳನ್ನು ಏನು ಮಾಡಬೇಕು, ಮನೆಯಲ್ಲಿ ಎಲ್ಲಿ ಇಡಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಪೊರಕೆಯನ್ನು ಏನು ಮಾಡಬೇಕು?

ಜ್ಯೋತಿಷ್ಯ ಹಾಗೂ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಧನತ್ರಯೋದಶಿಯಂದು ಖರೀದಿಸಿದ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಪೂಜಿಸಿ, ಬಳಿಕ ಬಳಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಧನತ್ರಯೋದಶಿಯಂದು ಪೊರಕೆ ಖರೀದಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಪೊರಕೆ ಮನೆಗೆ ಲಕ್ಷ್ಮೀ ದೇವಿಯ ಆಗಮನ ಮತ್ತು ದಾರಿದ್ರ್ಯ ನಿವಾರಣೆಯ ಸಂಕೇತ ಎಂಬ ನಂಬಿಕೆಯಿದೆ.

ಹೊಸ ಪೊರಕೆಯನ್ನು ಮನೆಗೆ ತಂದ ಬಳಿಕ ಸ್ವಚ್ಛವಾದ ಜಾಗದಲ್ಲಿ ಇರಿಸಿ. ಪೂಜೆಯ ಸಮಯದಲ್ಲಿ ಅದರ ಮೇಲೆ ಅರಿಶಿನ ಅಥವಾ ಕುಂಕುಮದಿಂದ ಸ್ವಸ್ತಿಕ್ ಚಿಹ್ನೆ ಬಿಡಿಸಬಹುದು. ಧನತ್ರಯೋದಶಿಯ ಪೂಜೆ ಮುಗಿದ ಬಳಿಕ ಹೊಸ ಪೊರಕೆಯನ್ನು ಬಳಸಬಹುದು. ಪೊರಕೆಯನ್ನು ಪೂಜಾ ಸ್ಥಳಕ್ಕೆ ನೇರವಗಿ ಇಡಬಾರದು. ಅದನ್ನು ನಿಲ್ಲಿಸಿಡುವ ಬದಲು ನೆಲಕ್ಕೆ ಸಮಾನಾಂತರವಾಗಿ ಇಡುವುದು ಶುಭವೆಂದು ನಂಬಲಾಗಿದೆ. ಜನರು ಪದೇಪದೆ ಓಡಾಡುವ ಅಥವಾ ದಾಟುವ ಸ್ಥಳದಲ್ಲಿ ಇಡಬಾರದು.

ಹಿತ್ತಾಳೆ ಪಾತ್ರೆಗಳನ್ನು ಏನು ಮಾಡಬೇಕು?

ಧನತ್ರಯೋದಶಿಯಂದು ಹಿತ್ತಾಳೆ ಪಾತ್ರೆಗಳನ್ನು ಖರೀದಿಸುವುದು ಮಂಗಳಕರ ಎಂಬ ನಂಬಿಕೆಯಿದೆ. ಹಿತ್ತಾಳೆಯನ್ನು ಸಾಂಪ್ರದಾಯಿಕವಾಗಿ ಶುಭ ಲೋಹವೆಂದು ಪರಿಗಣಿಸಲಾಗುತ್ತದೆ. ಮನೆಗೆ ತಂದ ತಕ್ಷಣ ಹಿತ್ತಾಳೆ ಪಾತ್ರೆಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ಪೂಜೆಯ ಸಮಯದಲ್ಲಿ ಪಾತ್ರೆಗಳ ಮೇಲೆ ಅರಿಶಿನ, ಕುಂಕುಮ ಮತ್ತು ಅಕ್ಷತೆ ಹಾಕಿ. ಹೂವುಗಳನ್ನು ಅರ್ಪಿಸಿ ಭಕ್ತಿಯಿಂದ ಪೂಜಿಸಿ. ಪೂಜೆಯ ಬಳಿಕ ಪಾತ್ರೆಗಳನ್ನು ಅಡುಗೆಮನೆಯ ಸ್ವಚ್ಛವಾದ ಜಾಗದಲ್ಲಿ ಇರಿಸಿ. ಆಹಾರ ಅಥವಾ ನೀರು ಸಂಗ್ರಹಿಸಲು ಬಳಸಬಹುದು. ಚೆನ್ನಾಗಿ ತೊಳೆದು ಮರುದಿನದಿಂದ ಬಳಸುವುದು ಉತ್ತಮ.

ಸ್ಟೀಲ್ ಪಾತ್ರೆಗಳನ್ನು ಹೀಗೆ ಪೂಜಿಸಿ

ಧನತ್ರಯೋದಶಿಯಂದು ಸ್ಟೀಲ್ ಪಾತ್ರೆಗಳನ್ನು ಖರೀದಿಸುವವರೂ ಇದ್ದಾರೆ. ಇವುಗಳನ್ನು ಮನೆಗೆ ತಂದ ಬಳಿಕ ಮೊದಲು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಬೇಕು. ಹೊಸ ಪಾತ್ರೆಗಳ ಮೇಲೆ ಅರಿಶಿನ, ಕುಂಕುಮ ಮತ್ತು ಅಕ್ಷತೆ ಹಾಕಬೇಕು. ಪೂಜೆ ಹಾಗೂ ಆರತಿ ನೆರವೇರಿಸಿ. ಮಾಡಿದ ಬಳಿಕ ಅದನ್ನು ಸ್ವಚ್ಛವಾದ ಜಾಗದಲ್ಲಿ ಇಡಬೇಡಬೇಕು. ಮರುದಿನದಿಂದ ಅಥವಾ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಹುದು.

ಬೆಳ್ಳಿ ನಾಣ್ಯದ ಪೂಜೆ

ಧನತ್ರಯೋದಶಿಯಂದು ಬೆಳ್ಳಿ ನಾಣ್ಯ ಖರೀದಿಸುವುದು ಲಕ್ಷ್ಮೀ ದೇವಿ ಮತ್ತು ಕುಬೇರ ದೇವರ ಆಶೀರ್ವಾದಕ್ಕೆ ಸಂಬಂಧಿಸಿದ ಶುಭ ಸಂಪ್ರದಾಯವೆಂದು ನಂಬಲಾಗಿದೆ. ಮೊದಲು ಬೆಳ್ಳಿ ನಾಣ್ಯವನ್ನು ಸ್ವಚ್ಛಗೊಳಿಸಿ. ಪೂಜಾ ಮಣೆಯ ಮೇಲೆ ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆ ಹಾಸಿ ನಾಣ್ಯವನ್ನಿಡಿ. ಅರಿಶಿನ, ಕುಂಕುಮ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಿ. ದೀಪ ಹಚ್ಚಿ ಲಕ್ಷ್ಮೀ ದೇವಿ ಮತ್ತು ಕುಬೇರ ದೇವರನ್ನು ಸ್ಮರಿಸಿ. ಈ ವೇಳೆ ಓಂ ಶ್ರೀಂ ಮಹಾಲಕ್ಷ್ಮ್ಯೈ ನಮಃ ಎಂಬ ಮಂತ್ರವನ್ನು 11 ಅಥವಾ 108 ಬಾರಿ ಜಪಿಸಬಹುದು. ಪೂಜೆ ಮುಗಿದ ಬಳಿಕ ಬೆಳ್ಳಿ ನಾಣ್ಯವನ್ನು ಹಣ ಇಡುವ ಬೀರು, ತಿಜೋರಿ ಅಥವಾ ಪೂಜಾ ಸ್ಥಳದಲ್ಲಿ ಸುರಕ್ಷಿತವಾಗಿ ಇಡಬಹುದು. ನಾಣ್ಯದ ಮೇಲೆ ಲಕ್ಷ್ಮೀ ಅಥವಾ ಗಣೇಶನ ಚಿತ್ರವಿದ್ದರೆ ಭಕ್ತಿಯಿಂದ ಪೂಜಿಸಬಹುದು.

ಕೊತ್ತಂಬರಿ ಬೀಜ ಏನು ಮಾಡಬೇಕು?

ಧನತ್ರಯೋದಶಿಯಂದು ಇಡೀ ಕೊತ್ತಂಬರಿ ಬೀಜ ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇದು ಧನ-ಧಾನ್ಯ ಮತ್ತು ಸಮೃದ್ಧಿಯ ಸಂಕೇತ ಎಂಬ ನಂಬಿಕೆಯಿದೆ. ಕೊತ್ತಂಬರಿ ಬೀಜಗಳನ್ನು ಸಣ್ಣ ಬಟ್ಟಲಿನಲ್ಲಿ ಹಾಕಿ ಲಕ್ಷ್ಮೀ ದೇವಿಗೆ ಅರ್ಪಿಸಿ. ಅರಿಶಿನ, ಕುಂಕುಮ ಮತ್ತು ಅಕ್ಷತೆ ಹಾಕಿ ಪೂಜಿಸಿ. ದೀಪಾವಳಿಯ ಲಕ್ಷ್ಮೀ ಪೂಜೆಯವರೆಗೂ ಪೂಜಾ ಸ್ಥಳದಲ್ಲಿ ಇಡಬಹುದು. ಬಳಿಕ ಅಡುಗೆಮನೆಯಲ್ಲಿ ಸ್ವಚ್ಛವಾದ ಜಾಗದಲ್ಲಿ ಸಂಗ್ರಹಿಸಿಡಬೇಕು. ಕೆಲವು ಕುಟುಂಬಗಳಲ್ಲಿ ಈ ಕೊತ್ತಂಬರಿ ಬೀಜಗಳನ್ನು ಕುಂಡದಲ್ಲಿ ಅಥವಾ ನೆಲದಲ್ಲಿ ಬಿತ್ತುವ ಸಂಪ್ರದಾಯವೂ ಇದೆ. ಇದನ್ನು ಸಮೃದ್ಧಿ ಮತ್ತು ಹೊಸ ಆರಂಭದ ಸಂಕೇತವೆಂದು ನಂಬಲಾಗುತ್ತದೆ.

ವಸ್ತುಗಳ ಪೂಜೆ ಯಾವಾಗ ಮಾಡಬೇಕು?

ಧನತ್ರಯೋದಶಿಯಂದು ಮನೆ ಸ್ವಚ್ಛಗೊಳಿಸಿದ ಬಳಿಕ ಖರೀದಿಸಿದ ಎಲ್ಲಾ ಶುಭ ವಸ್ತುಗಳನ್ನು ಸುರಕ್ಷಿತವಾದ ಜಾಗದಲ್ಲಿ ಜೋಡಿಸಿಡಿ. ಸಂಜೆ ಪ್ರದೋಷ ಕಾಲದಲ್ಲಿ ಭಗವಾನ್ ಧನ್ವಂತರಿ, ಲಕ್ಷ್ಮೀ ದೇವಿ ಮತ್ತು ಕುಬೇರ ದೇವರನ್ನು ಪೂಜಿಸುವ ಸಂಪ್ರದಾಯವಿದೆ. ಈ ಸಮಯದಲ್ಲಿ ವಸ್ತುಗಳ ಪೂಜೆ ಮಾಡಬೇಕು.

ಪೂಜಾ ಮಣೆಯನ್ನು ಸ್ವಚ್ಛಗೊಳಿಸಿ ಹೊಸ ಬಟ್ಟೆ ಹಾಸಬೇಕು. ಖರೀದಿಸಿದ ಹೊಸ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಬೇಕು. ಅವುಗಳ ಮೇಲೆ ಅರಿಶಿನ, ಕುಂಕುಮ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು. ತುಪ್ಪ ಅಥವಾ ಎಣ್ಣೆಯ ದೀಪವನ್ನು ಹಚ್ಚಬೇಕು. ಲಕ್ಷ್ಮೀ ದೇವಿ, ಕುಬೇರ ದೇವರು ಮತ್ತು ಧನ್ವಂತರಿಯನ್ನು ಸ್ಮರಿಸಿ ಕುಟುಂಬದ ಸುಖ, ಸಮೃದ್ಧಿ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸಿ. ಪೂಜೆ ಮುಗಿದ ಬಳಿಕ ವಸ್ತುಗಳನ್ನು ಅವುಗಳ ಬಳಕೆಗೆ ಅನುಗುಣವಾಗಿ ಸೂಕ್ತ ಸ್ಥಳಗಳಲ್ಲಿ ಇರಿಸಿ.

PREV
Read more Articles on
click me!

Recommended Stories

Diwali Crackers: ದೀಪಾವಳಿ ಹಬ್ಬದಂದು ಮಾತ್ರವಲ್ಲ, ಈ ಹಬ್ಬಗಳಲ್ಲೂ ಪಟಾಕಿ ಸಿಡಿಸಲಾಗುತ್ತೆ!
Diwali Rangoli : ತ್ರಿಜೋರಿಯಲ್ಲಿ ಹಣ ಖಾಲಿಯಾಗ್ಬಾರದು ಅಂದ್ರೆ ದೀಪಾವಳಿ ದಿನ ಈ ರಂಗೋಲಿ ಹಾಕಿ