ನಿಮ್ಮ ಭಕ್ತಿಯಿಂದ ಹೆಚ್ಚಿನದನ್ನು ಪಡೆಯಲು ನೀವು ಈ ನವರಾತ್ರಿಯನ್ನು ಅನುಸರಿಸಬೇಕಾದ ಕೆಲವು ವಾಸ್ತು ಸಲಹೆಗಳು ಇಲ್ಲಿವೆ..
ನೀವು ಹೊಸ ಮನೆಯನ್ನು ನಿರ್ಮಿಸುತ್ತಿರಲಿ ಅಥವಾ ಪ್ರವೇಶ ದ್ವಾರ, ಅಡುಗೆ ಮನೆ, ಸ್ನಾನಗೃಹ ಇತ್ಯಾದಿ ಎಲ್ಲಿರಬೇಕು ಎಂದು ನಿರ್ಧರಿಸುವಾಗ, ವಾಸ್ತು ಸಲಹೆಗಳು ನಿಮಗೆ ಸರಿಯಾದ ದಿಕ್ಕುಗಳಲ್ಲಿ ನಿರ್ಮಾಣ ಮಾಡಲು ಸಹಾಯ ಮಾಡುತ್ತವೆ. ವಾಸ್ತುವು ಯಾವಾಗಲೂ ನಿಮ್ಮ ಜೀವನಕ್ಕೆ ಧನಾತ್ಮಕತೆಯನ್ನು ತರಲು ಬೇಕಾದ ಸಲಹೆ ನೀಡುತ್ತದೆ.
ಹಿಂದೂ ಧರ್ಮದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾದ ನವರಾತ್ರಿ ಸೆಪ್ಟೆಂಬರ್ 26ರಿಂದ ಶುರುವಾಗುತ್ತಿದೆ. ಹಬ್ಬವು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸೂಚಿಸುತ್ತದೆ. ಇದು ಒಂಬತ್ತು ದಿನಗಳ ಹಬ್ಬವಾಗಿದ್ದು, ಇದು ಪಿತೃ ಪಕ್ಷದ ಅಂತ್ಯದಿಂದ ಆರಂಭಗೊಳ್ಳುತ್ತದೆ. ಈ ಒಂಬತ್ತು ದಿನಗಳ ಉತ್ಸವದಲ್ಲಿ ದುರ್ಗಾ ದೇವಿಯನ್ನು ಪೂಜಿಸುವುದು ನಿಮಗೆ ಮೋಕ್ಷ ಮತ್ತು ಭವಿಷ್ಯಕ್ಕಾಗಿ ಆಶೀರ್ವಾದವನ್ನು ತರುತ್ತದೆ. ನವರಾತ್ರಿಯಲ್ಲಿ ದುರ್ಗಾ ದೇವಿಯೇ ಮನೆಗೆ ಆಗಮಿಸುತ್ತಾಳೆ ಎಂಬ ನಂಬಿಕೆ ಇರುವುದರಿಂದ, ನೀವು ಮಾಡುವ ಯಾವುದೇ ಕೆಲಸಕ್ಕೂ ವಿಶೇಷ ಗಮನ ನೀಡಬೇಕು. ಈ ಸಮಯದಲ್ಲಿ ನಿಮ್ಮ ಭಕ್ತಿಯಿಂದ ಹೆಚ್ಚಿನದನ್ನು ಪಡೆಯಲು ನೀವು ಈ ನವರಾತ್ರಿಯನ್ನು ಅನುಸರಿಸಬೇಕಾದ ಕೆಲವು ವಾಸ್ತು ಸಲಹೆಗಳು ಇಲ್ಲಿವೆ.
ಮುಖ್ಯ ಬಾಗಿಲಿಗೆ ಸ್ವಸ್ತಿಕ್
ಮನೆಯ ಮುಖ್ಯ ದ್ವಾರದಲ್ಲಿರುವ ಸ್ವಸ್ತಿಕ್ ಮಂಗಳಕರ ಎಂದು ನಂಬಲಾಗಿದೆ. ಇದು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ. ಇದಲ್ಲದೆ, ಇದು ಶೋಕ ಮತ್ತು ರೋಗವನ್ನು ಕಡಿಮೆ ಮಾಡುತ್ತದೆ ಮತ್ತು ಮನೆಯೊಳಗೆ ಸಂತೋಷವನ್ನು ತುಂಬುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಸ್ವಸ್ತಿಕನ್ನು ತಯಾರಿಸಲು ನೀವು ಅರಿಶಿನ ಮತ್ತು ಅಕ್ಕಿಯನ್ನು ಬಳಸಬಹುದು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ, ಸಂಪತ್ತು, ಧಾನ್ಯ ವೃದ್ಧಿಯಾಗುತ್ತದೆ.
ದ್ವಾರದ ಮೇಲೆ ಮಾವಿನ ತೋರಣ
ಕೆಲವು ವಾಸ್ತು ತಜ್ಞರ ಪ್ರಕಾರ, ಮಾವಿನ ಎಲೆಗಳ ತೋರಣವನ್ನು ಮುಖ್ಯ ಬಾಗಿಲಿಗೆ ನೇತು ಹಾಕುವುದರಿಂದ ಅದು ಮನೆಯೊಳಗೆ ಪ್ರವೇಶಿಸುವ ನಕಾರಾತ್ಮಕ ಶಕ್ತಿಯನ್ನು ನಿರ್ಬಂಧಿಸುತ್ತದೆ. ಆದ್ದರಿಂದ, ನವರಾತ್ರಿಯ ಸಮಯದಲ್ಲಿ, ನೀವು ಕೆಲವು ಮಾವಿನ ಎಲೆಗಳನ್ನು ತಂದು ತೋರಣ ಮಾಡಿ ನೇತು ಹಾಕಲು ಮರೆಯದಿರಿ.
ಮಂದಿರದ ದಿಕ್ಕು
ನೀವು ವಿಗ್ರಹವನ್ನು ಇಡುವ ಮೊದಲು ಪರಿಗಣಿಸಬೇಕಾದ ಪ್ರಮುಖ ವಿಷಯಗಳಲ್ಲಿ ಇದು ಒಂದಾಗಿದೆ. ವಾಸ್ತು ಪ್ರಕಾರ ಪೂಜಾ ಕೊಠಡಿಯು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಬೇಕು. ವಾಸ್ತು ಪ್ರಕಾರ, ಮಂದಿರವನ್ನು ತಪ್ಪು ದಿಕ್ಕಿನಲ್ಲಿ ಇಡುವುದರಿಂದ ಪ್ರಮುಖ ಮತ್ತು ಅಪಾಯಕಾರಿ ಪರಿಣಾಮಗಳು ಉಂಟಾಗಬಹುದು. ನಕಾರಾತ್ಮಕ ಶಕ್ತಿಯ ಪ್ರವೇಶವು ವಿವಿಧ ಕಾಯಿಲೆಗಳು ಮತ್ತು ದುಃಖವನ್ನು ಉಂಟು ಮಾಡಬಹುದು.
ಸರ್ವರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು
ಅಖಂಡ ಜ್ಯೋತಿ ಬೆಳಗಿಸಿ
ಹೆಸರೇ ಸೂಚಿಸುವಂತೆ ಅಖಂಡ ಜ್ಯೋತಿ ಎಂದರೆ ಅನಂತ ಬೆಳಕು. ಆದುದರಿಂದ ಹಬ್ಬದ ಸಮಯದಲ್ಲಿ ಮನೆಯಲ್ಲಿ ಅಖಂಡ ಜ್ಯೋತಿಯನ್ನು ಬೆಳಗಿಸಿದಾಗ, ನಿಮ್ಮ ಅದೃಷ್ಟ ಮತ್ತು ಸಂತೋಷದಲ್ಲಿ ವೃದ್ಧಿಯಾಗುವ ಸಾಧ್ಯತೆ ಹೆಚ್ಚು. ಆದರೆ ಅಖಂಡ ಜ್ಯೋತಿಯನ್ನು ನೇರವಾಗಿ ನೆಲದ ಮೇಲೆ ಇಡದಂತೆ ನೋಡಿಕೊಳ್ಳಿ.
ತುಳಸಿ ಗಿಡ ನೆಡಿ
ಮನೆಯಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ, ನೀವು ಹೊಂದಿಲ್ಲದಿದ್ದರೆ, ನವರಾತ್ರಿಯು ಮನೆಯಲ್ಲಿ ತುಳಸಿಯನ್ನು ನೆಡಲು ಸರಿಯಾದ ಸಮಯವಾಗಿದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡ ನೆಡಬೇಕು. ರೋಗಗಳು ಮತ್ತು ದೋಷಗಳ ವಿರುದ್ಧ ಹೋರಾಡಲು ಮತ್ತು ಅವುಗಳನ್ನು ಮನೆಯಿಂದ ದೂರವಿಡಲು ತುಳಸಿ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇದು ಕುಟುಂಬಕ್ಕೆ ಸಂತೋಷವನ್ನು ತರುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.