ಅದ್ಧೂರಿಯಾಗಿ ನಡೆದ ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ, ವಸಂತೋತ್ಸವ, ಮಹಾರಥೋತ್ಸವ । ಪೀಠಾಧಿಪತಿಗಳಿಂದ ಅನುಗ್ರಹ ಸಂದೇಶ
ರಾಯಚೂರು(ಸೆ.03): ಯತಿಕುಲ ತಿಲಕ, ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಪ್ತರಾತ್ರೋತ್ಸವದ ಐದನೇ ದಿನವಾದ ಶನಿವಾರ ಉತ್ತರಾರಾಧನೆ ನಿಮಿತ್ತ ವಸಂತೋತ್ಸವ, ಶ್ರೀಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ, ಪೀಠಾಧಿಪತಿಗಳ ಅನುಗ್ರಹ ಸಂದೇಶ, ಮಹಾರಥೋತ್ಸವ ಅತ್ಯಂತ ವೈಭವೋಪೂರಿತವಾಗಿ ಜರುಗಿದವು.
ಉತ್ತರಾರಾಧನೆ ಹಿನ್ನೆಲೆ ಶ್ರೀಮಠದಲ್ಲಿ ಬೆಳಗ್ಗೆ ನಿರ್ಮಲ್ಯ ವಿಸರ್ಜನೆ, ಗ್ರಂಥಗಳ ಪಾರಾಯಣ, ಪ್ರವಚನ, ದಾಸವಾಣಿ ತದಿತರ ಕಾರ್ಯಕ್ರಮಗಳು ನಡೆದವು. ಬಳಿಕ ಶ್ರೀಗುರುರಾಯರ ಮೂಲವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಸುವರ್ಣ ಖಚಿತ ಹೊದಿಕೆ, ತರಹೆವಾರಿ ಪುಷ್ಪಾಗಳಿಂದ ವಿಶೇಷ ಅಲಂಕಾರ ಸೇವೆ, ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರಿಂದ ಶ್ರೀರಘುಪತಿ ವೇದವಾಸ್ಯ ದೇವರಿಗೆ ಸಂಸ್ಥಾನ ಪೂಜೆ, ಅಸ್ತೋದಕ ಸಮರ್ಪಣೆ, ಮಹಾ ಮಂಗಳಾರತಿ ಸೇವೆಗಳನ್ನು ಶ್ರೀಮಠದ ಧಾರ್ಮಿಕ ವಿಧಿ-ವಿಧಾನಗಳಂತೆ ನೆರವೇರಿಸಲಾಯಿತು.
undefined
ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡಿದರೆ ನೆಮ್ಮದಿ ಲಭ್ಯ: ಜಗ್ಗೇಶ್
ಉತ್ತರಾರಾಧನೆ ವಿಶೇಷತೆ ಎಂದರೆ ಅದು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ ಹಾಗೂ ವಸಂತೋತ್ಸವ ಸೇವೆ. ಶ್ರೀ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿರಿಸಿ ಶ್ರೀಮಠದ ಆವರಣದಿಂದ ಕಲಾತಂಡಗಳ ಮೆರವಣಿಗೆ ಮುಖಾಂತರ ಶ್ರೀಮಠ ಸಂಚಾಲಿತ ಗುರುಸಾರ್ವಭೌಮ ವಿದ್ಯಾಪೀಠಕ್ಕೆ ಕರೆದೊಯ್ದು ಸಂಸ್ಕೃತ ವಿದ್ಯಾರ್ಥಿಗಳಿಂದ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಠಣೆಯನ್ನು ಮಾಡಿಸಿ, ಪೂಜಾವಿಧಾನಗಳನ್ನು ನೆರವೇರಿಸಿ ಅಲ್ಲಿಂದ ಶ್ರೀಮಧ್ವಮಾರ್ಗದ ಮೂಲಕ ಶ್ರೀಮಠದ ವರೆಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.
ನಂತರ ರಾಯರ ಮೂಲಬೃಂದಾವನ ಪಕ್ಕದಲ್ಲಿರುವ ದಶಾವತಾರ ಮಂಟಪದಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿಗೆ ಸ್ವಾಮಿಗಳು ವಿಶೇಷ ಪೂಜೆ, ಮಹಾಮಂಗಳಾರತಿಯ ಸೇವೆಯನ್ನು ಮಾಡಿ ವಸಂತೋತ್ಸವವನ್ನು ಉದ್ಘಾಟಿಸಿ ಮಠದ ಹಿರಿಯ, ಕಿರಿಯ ಪಂಡಿತರು, ವಿದ್ವಾಂಸರು, ಅಧಿಕಾರಿ, ಸಿಬ್ಬಂದಿ ಪರಸ್ಪರ ಗುಲಾಲು, ಬುಕ್ಕಿಟ್ಟು ಎರಚಿಕೊಂಡು ಓಕುಳಿಯನ್ನಾಡಿ ಸಂಭ್ರಮಿಸಿದರು. ಬಳಿಕ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಶ್ರೀಮಠದ ಮುಂಭಾಗದ ಆವರಣದಲ್ಲಿ ಆಕರ್ಷಕವಾಗಿ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಿದ ಶ್ರೀಗಳು ನೆರೆದಂತಹ ಭಕ್ತ ಸಮೋಹವನ್ನುದ್ದೇಶಿಸಿ ಅನುಗ್ರಹ ಸಂದೇಶದೊಂದಿಗೆ ಆಶೀರ್ವಚನ ನೀಡಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀಮಠದ ಮುಂಭಾಗದಲ್ಲಿರುವ ಶ್ರೀಮಧ್ವಮಾರ್ಗದ ಮುಖಾಂತರ ಸಾಗಿದ ಮಹಾರಥೋತ್ಸವ ತೇರು ಬೀದಿಯಿಂದ ಸುಕ್ಷೇತ್ರದ ಮುಖ್ಯ ವೃತ್ತದವರೆಗೆ ಹೋಗಿ ಮತ್ತೆ ಶ್ರೀಮಠಕ್ಕೆ ವಾಪಸ್ಸಾಯಿತು. ರಥ ಚಲಿಸುತ್ತಿದ್ದ ಸಮಯದಲ್ಲಿ ಹೆಲಿಕಾಫ್ಟರ್ ನಲ್ಲಿ ಬಂದ ಸ್ವಾಮಿಗಳು ರಥದ ಮೇಲೆ ಪುಷ್ಪವೃಷ್ಠಿಯನ್ನು ಗೈದರು.