ಈ ಊರಿನಲ್ಲಿ ಹೆಂಗಸರು ಹೋಳಿ ಆಡ್ತಾರೆ, ಗಂಡಸರು ಊರು ಬಿಡ್ತಾರೆ!

Published : Mar 12, 2025, 10:16 PM ISTUpdated : Mar 13, 2025, 10:16 AM IST
ಈ ಊರಿನಲ್ಲಿ ಹೆಂಗಸರು ಹೋಳಿ ಆಡ್ತಾರೆ, ಗಂಡಸರು ಊರು ಬಿಡ್ತಾರೆ!

ಸಾರಾಂಶ

ರಾಜಸ್ಥಾನದ ಟೋಂಕ್‌ನಲ್ಲಿ ಹೋಳಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಲ್ಲಿ ಪುರುಷರಿಗೆ ಹೋಳಿ ಆಟದಲ್ಲಿ ಭಾಗವಹಿಸುವಂತಿಲ್ಲ. ಮಹಿಳೆಯರು ಮಾತ್ರ ಬಣ್ಣಗಳನ್ನು ಎರಚಾಡಿ ಸಂಭ್ರಮಿಸುತ್ತಾರೆ. ಇದೇನು ಈ ವಿಶಿಷ್ಟ ಆಚರಣೆ, ಯಾಕೆ? 

ಬಣ್ಣಗಳ ರೋಮಾಂಚಕ ಹಬ್ಬವಾದ ಹೋಳಿಯನ್ನು ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಮಾರುಕಟ್ಟೆಗಳು ವರ್ಣರಂಜಿತ ಗುಲಾಲ್‌ನಿಂದ ತುಂಬಿ ತುಳುಕುತ್ತವೆ. ಹಬ್ಬದ ಸಂಭ್ರಮ ವಾತಾವರಣವನ್ನು ತುಂಬುತ್ತದೆ. ದೇಶದ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿಶಿಷ್ಟ ಹೋಳಿ ಸಂಪ್ರದಾಯಗಳನ್ನು ಹೊಂದಿದೆ. ಆದರೆ ರಾಜಸ್ಥಾನದ ಟೋಂಕ್‌ನಲ್ಲಿರುವ ಒಂದು ಸಣ್ಣ ಹಳ್ಳಿ ಈ ಹಬ್ಬವನ್ನು ಒಂದು ಕುತೂಹಲಕಾರಿ ಪದ್ಧತಿಯೊಂದಿಗೆ ಆಚರಿಸುತ್ತದೆ.

ಟೋಂಕ್ ಜಿಲ್ಲೆಯ ನಗರ ಗ್ರಾಮದಲ್ಲೇ ಈ ಅಸಾಮಾನ್ಯ ಸಂಪ್ರದಾಯ ಇರೋದು. ಅಲ್ಲಿ ಪುರುಷರು ಹೋಳಿಯಂದು ಬಣ್ಣದ ಆಟದಲ್ಲಿ ಭಾಗವಹಿಸುವುದಿಲ್ಲ. ಬದಲಿಗೆ ವರ್ಣರಂಜಿತ ಮೋಜು ಮಸ್ತಿಯಲ್ಲಿ ಮಹಿಳೆಯರು ತೊಡಗುತ್ತಾರೆ. ಗಂಡಸರಿಗೆ ಅಂದು ಗ್ರಾಮದಿಂದ ಗಡೀಪಾರ್.‌ ಹೋಳಿ ಆಟವನ್ನು ನೋಡುವುದನ್ನು ಸಹ ಅವರಿಗೆ ನಿಷೇಧಿಸಲಾಗಿದೆ. ಗಡಿಯಾರ ಬೆಳಿಗ್ಗೆ 10 ಗಂಟೆಗೆ ಬಡಿಯುತ್ತಿದ್ದಂತೆ, ನಗರದ ಪುರುಷರು ಗ್ರಾಮವನ್ನು ತೊರೆದು ಹೊರವಲಯದಲ್ಲಿರುವ ಚಾಮುಂಡಾ ಮಾತಾ ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ಅವರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಭಜನೆ, ಭಕ್ತಿಗೀತೆಗಳಲ್ಲಿ ಮುಳುಗುತ್ತಾ ದಿನವನ್ನು ಕಳೆಯುತ್ತಾರೆ.

ಪುರುಷರು ದೂರದಲ್ಲಿರುವಾಗ ನಗರದ ಮಹಿಳೆಯರು ಊರಿನ ನಡುವೆಗೆ ಬರುತ್ತಾರೆ. ಗ್ರಾಮವನ್ನು ವರ್ಣಮಯ ಆಗಿಸುತ್ತಾರೆ. ಸಾಮಾಜಿಕ ನಿರ್ಬಂಧಗಳಿಂದ ಮುಕ್ತರಾಗಿ, ಅವರು ಹಬ್ಬವನ್ನು ಆನಂದಿಸುತ್ತಾರೆ. ಬಣ್ಣಗಳಲ್ಲಿ ಮುಳುಗುತ್ತಾರೆ, ಪರಸ್ಪರ ಸಂತೋಷ ಮತ್ತು ನಗುವಿನಲ್ಲಿ ತೇಲುತ್ತಾರೆ. ಈ ವಿಶಿಷ್ಟ ಪದ್ಧತಿಯು ಇವರಿಗೆ ಅನಿಯಂತ್ರಿತ ಸ್ವಾತಂತ್ರ್ಯದಿಂದ ಹೋಳಿಯನ್ನು ಆಚರಿಸಲು ಅನುವು ಮಾಡಿಕೊಡುತ್ತದೆ.

ಐದು ಶತಮಾನಗಳಿಗೂ ಹೆಚ್ಚು ಕಾಲದಿಂದ ಆಚರಿಸಲಾಗುತ್ತಿರುವ ಈ ಅಸಾಮಾನ್ಯ ಪದ್ಧತಿಯನ್ನು ಗ್ರಾಮಸ್ಥರು ಕಟ್ಟುನಿಟ್ಟಾಗಿ ಎತ್ತಿಹಿಡಿಯುತ್ತಾರೆ. ಈ ಪ್ರಾಚೀನ ಸಂಪ್ರದಾಯವನ್ನು ಧಿಕ್ಕರಿಸಲು ಪ್ರಯತ್ನಿಸುವ ಯಾವುದೇ ಪುರುಷ ಮಹಿಳೆಯರ ಕೋಪವನ್ನು ಎದುರಿಸುತ್ತಾನೆ. ತಕ್ಷಣ ಅವನನ್ನು ಗ್ರಾಮದಿಂದ ಹೊರಹಾಕುತ್ತಾರೆ. ಈ ಪದ್ಧತಿಯನ್ನು ಗೌರವಿಸುವ ಪುರುಷರು ಮರುದಿನ ಹೋಳಿ ಆಚರಣೆಯಲ್ಲಿ ಭಾಗವಹಿಸುತ್ತಾರೆ.

ಇಂಥದೇ ಇನ್ನೊಂದು ಆಚರಣೆ ವಾರಣಾಸಿಯ ಮಸಾನ್ ಹೋಳಿ. ಇಲ್ಲಿ ರಂಗಭರಿ ಏಕಾದಶಿಯ ನಂತರದ ದಿನದಂದು ಈ ಹೋಳಿ ಆಚರಿಸಲಾಗುತ್ತದೆ. ಇದೊಂದು ವಿಶಿಷ್ಟವಾದ ಧಾರ್ಮಿಕ ಆಚರಣೆ. ಸಾಮಾನ್ಯವಾಗಿ ನಾಗಾ ಸಾಧುಗಳು, ಅಘೋರಿಗಳು ಮತ್ತು ಇತರ ಶಿವನ ಭಕ್ತರು ಇದರಲ್ಲಿ ಪಾಲ್ಗೊಳ್ಳುವವರು. ನಗರದ ಪ್ರಮುಖ ಸ್ಮಶಾನವಾದ ಮಣಿಕರ್ಣಿಕಾ ಘಾಟ್‌ನಲ್ಲಿ ಇವರು ಒಟ್ಟುಗೂಡುತ್ತಾರೆ. ಶವಗಳ ಅಂತ್ಯಕ್ರಿಯೆಯ ಚಿತೆಯ ಬೂದಿಯನ್ನು ಎರಚಾಡಿ, ಮೈಗೆ ಹಚ್ಚಿಕೊಂಡು ಸಂಭ್ರಮ ಪ್ರದರ್ಶಿಸುತ್ತಾರೆ. ಇಲ್ಲಿ ಇತರ ಬಣ್ಣಗಳಿರುವುದಿಲ್ಲ, ಬೂದಿಯ ಬಿಳಿ ಮಾತ್ರ ಇರುತ್ತದೆ.

ಮಥುರಾ ಬಳಿಯ ಬರ್ಸಾನದಲ್ಲಿ ಲಾಠ್‌ಮಾರ್ ಹೋಳಿ ನಡೆಯುತ್ತದೆ. ಇದು ಇನ್ನೊಂದು ವಿಶಿಷ್ಟ ಸಂಪ್ರದಾಯ. ಮಹಿಳೆಯರು ಕೋಲುಗಳನ್ನು ಹಿಡಿದುಕೊಂಡು ಪುರುಷರನ್ನು ತಮಾಷೆಯಾಗಿ ಬೆನ್ನಟ್ಟುತ್ತಾರೆ. ಪುರುಷರು ಗುರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ ಮತ್ತು ಮಹಿಳೆಯರನ್ನು ಬಣ್ಣದ ನೀರಿನಲ್ಲಿ ಮುಳುಗಿಸಲು ಪ್ರಯತ್ನಿಸುತ್ತಾರೆ. ಈ ಸಂಪ್ರದಾಯವು ರಾಧಾ ಮತ್ತು ಕೃಷ್ಣನ ಪ್ರೇಮಕಥೆಯನ್ನು ಸ್ಮರಿಸುತ್ತದೆ.

Holi 2025: ಹೋಳಿ ಹಬ್ಬದ ಬಳಿಕ ಚರ್ಮ, ಕೂದಲ ಆರೈಕೆ ಮರೆಯಬೇಡಿ! ತಜ್ಞರ ಸಲಹೆ ಪಡೆಯಿರಿ..

ವೃಂದಾವನದಲ್ಲಿ ಫೂಲೋನ್ ಕಿ ಹೋಳಿ ಅಥವಾ ಹೂವಿನ ಹೋಳಿ ನಡೆಯುತ್ತದೆ. ಈ ಆಚರಣೆಯು ಬಣ್ಣದ ಪುಡಿಗಳ ಬದಲಿಗೆ ಹೂವುಗಳನ್ನು ಎಸೆಯುವುದನ್ನು ಒಳಗೊಂಡಿರುತ್ತದೆ. ಭಕ್ತರು ರಾಧಾ ಮತ್ತು ಕೃಷ್ಣನ ನಡುವಿನ ದೈವಿಕ ಪ್ರೀತಿಯನ್ನು ಸ್ಮರಿಸಲು ವೃಂದಾವನದ ಬಂಕೆ ಬಿಹಾರಿ ದೇವಾಲಯದಲ್ಲಿ ಸೇರುತ್ತಾರೆ. ಪರಸ್ಪರ ಪರಿಮಳಯುಕ್ತ ಹೂವಿನ ದಳಗಳನ್ನು ಸುರಿಯುತ್ತಾರೆ.

ರವೀಂದ್ರನಾಥ ಟ್ಯಾಗೋರ್ ಅವರು ಸ್ಥಾಪಿಸಿದ ಕೋಲ್ಕೊತ್ತಾದ ಶಾಂತಿನಿಕೇತನದಲ್ಲಿ ನಡೆಯುವ ಹೋಳಿ ಆಚರಣೆಯು ವಿಶಿಷ್ಟ. ವಸಂತಕಾಲದ ಆಗಮನವನ್ನು ಸ್ವಾಗತಿಸಲು ಹಾಡುಗಳು, ನೃತ್ಯ ಮತ್ತು ಕಾವ್ಯದ ಸುತ್ತ ಇದು ಸುತ್ತುತ್ತದೆ. ವಿದ್ಯಾರ್ಥಿಗಳು ಹಳದಿ ಉಡುಪನ್ನು ಧರಿಸಿ ಸಾಂಪ್ರದಾಯಿಕ ಜಾನಪದ ನೃತ್ಯಗಳನ್ನು ಪ್ರದರ್ಶಿಸುತ್ತಾರೆ, ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತಾರೆ.

ಹೋಳಿಯಂದು ಅಪರೂಪ ಗ್ರಹ ಸಂಯೋಗ, ಈ ರಾಶಿಗೆ ಸಂಪತ್ತು, ಯಶಸ್ಸು, ಸಂತೋಷ
 

PREV
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ