
-ಪ್ರೊ.ಮಂಜುನಾಥ ಉಲವತ್ತಿ ಶೆಟ್ಟರ್.
ಹಗರಿಬೊಮ್ಮನಹಳ್ಳಿ, ವಿಜಯನಗರ.
ಶಿಶಿರ ಋತುವಿನಲ್ಲಿ ಮೃತಪ್ರಾಯವಾಗಿದ್ದ ನಿಸರ್ಗ ಶೋಭೆ ಒಮ್ಮಿಂದೊಮ್ಮೆ ಚೇತನಗೊಂಡು ಮೆರೆಯತೊಡುಗುವುದು ವಸಂತ ಕಾಲದಲ್ಲಿ. ಗಿಡಮರಗಳು ತಳಿರಭಾರ ಹೊರುತ್ತವೆ. ಕನ್ನಡನಾಡು ಹೊಸ ಶರೀರ ಧರಿಸಿದಂತೆ ಕಾಣಿಸುತ್ತದೆ. ವಸಂತಮಾಸ ಋತುಗಳ ರಾಜ. ಗಿಡ ಬಳ್ಳಿಗಳೂ ಹೂಹಣ್ಣು ಬಿಟ್ಟು ಕಣ್ಣು ಸೆಳೆಯುವ ಕಾಲ. ಸಸ್ಯ ಸಮೃದ್ಧಿ, ಪುಷ್ಪ ವೈಭವ ಮಂದಮಾರುತ ಪಕ್ಷಿ ಸಂಕುಲದ ಕೂಜನ ಇವೆಲ್ಲ ವಸಂತ ಋತುವಿನಲ್ಲಿ ಸಿಗುವ ಸಿರಿಸಂಪದಗಳು. ಅನ್ಯ ಋತುಗಳಲ್ಲಿ ದುರ್ಲಭವಾದ ಮನನೀಯತೆ, ಕಮನೀಯತೆಗಳೆಲ್ಲವೂ ವಸಂತ ಋತುವಿನದ್ದಾಗಿದೆ. ಬದಲಾಗುವ ಈ ಪರಿಸರದಲ್ಲಿ ತನ್ನ ಹೃದಯದೊಳಗೂ ಏನೋ ಒಂದು ಉತ್ಕಟತೆ ತಳಮಳ ಏಳುವುದನ್ನು ಮನುಷ್ಯ ತನ್ನ ಬುದ್ಧಿಶಕ್ತಿಯ ಮೂಲಕ ಗುರುತಿಸುತ್ತಾನೆ. ನಿಸರ್ಗದ ಈ ಬದಲಾವಣೆ ಮತ್ತು ಮನುಷ್ಯ ಅದರಿಂದ ಉತ್ತೇಜಿತನಾಗುವ ಬಗೆ-ಇವುಗಳಿಗೆ ಕವಿ ಮರುಳಾಗಿದ್ದು ಸಹಜವೇ. ಭಾರತೀಯ ಕಾವ್ಯಗಳಲ್ಲಿ ಪ್ರತಿಯೊಂದು ಪ್ರೇಮ ಪ್ರಕರಣವೂ ಉಲ್ಬಣಕ್ಕೆ ಬರುವುದು ವಸಂತ ಕಾಲದಲ್ಲಿಯೇ. ಕನ್ನಡ ಕವಿಗಳಿಗಂತೂ ವಸಂತ ಋತು ಎಂದರೆ ಎಲ್ಲಿಲ್ಲದ ಸಡಗರ. ವಸಂತನ ವರ್ಣನೆಯ ವೈಖರಿಯಿಂದ ಅವರು ಸ್ವರ್ಗದ ಚೆಲುವನ್ನು ಭುವಿಗಿಳಿಸುತ್ತಾರೆ. ಕಾಳಿದಾಸ ತನ್ನ ಋತು ಸಂಹಾರ ದಲ್ಲಿ ವಸಂತ ವಾಸ್ತವದ ಚೆಲುವನ್ನು ಬರಮಾಡಿಕೊಂಡಿದ್ದಾನೆ.
ಅನಾದಿ ಕಾಲದಿಂದಲೂ ಭಾರತೀಯರ ವರ್ಷದುದ್ದದ ಪರ್ವಾಚರಣೆಗಳೆಲ್ಲವನ್ನು ವೈಜ್ಞಾನಿಕವಾಗಿಯೇ ನಿರೂಪಿಸಲಾಗಿದೆ. ಪ್ರತಿಯೊಂದು ಪರ್ವಾಚರಣೆಯೂ ಜೀವನದ ಯಥಾರ್ಥವನ್ನು ತಿಳಿಸಿ, ವಿವಿಧ ಸನ್ನಿವೇಶಗಳಲ್ಲಿ ನಾವು ಹೇಗೆ ವರ್ತಿಸಬೇಕೆಂದು ತಿಳಿಸಿಕೊಡುವುದರೊಂದಿಗೆ ಭಾವಿ ಬದುಕನ್ನು ಹಸನಗೊಳಿಸುತ್ತದೆ. ಹಾಗೆಯೇ ಒಂದು ಗಿಡದಲ್ಲಿ ಹೂವು ಮುಳ್ಳು ಕಾಯಿ ಹಾಗೇ ಒಂದು ದಿನದಲ್ಲಿ ಹಗಲುರಾತ್ರಿ ಇರುವಂತೆ, ಜೀವನದಲ್ಲಿ ಸುಖ ದುಃಖ ನೋವು-ನಲಿವು, ಸಿಹಿ-ಕಹಿ ಎರಡೂ ಬರುತ್ತಿದ್ದು, ಸುಖ ಬಂದಾಗ ಉಬ್ಬದೇ, ದುಃಖ ಬಂದಾಗ ಕುಗ್ಗದೇ, ನೋವು-ನಲಿವು ಎರಡನ್ನೂ ಸಮಭಾವದಿಂದ ಸ್ವೀಕರಿಸಿ ಬದುಕನ್ನು ಸಹ್ಯವಾಗಿಯೂ, ಸುಂದರವಾಗಿಯೂ ವರ್ಷಾರಂಭ ಮಾಡುವ ಮೂಲಕ ಯುಗಾದಿಯಿಂದ ಹಿಡಿದು ನಮ್ಮ ತನುಮನದ ಕೊಳೆ ಕಳೆದು ಶುದ್ಧಾತ್ಮದಿಂದ ದೇವರನ್ನು ಪ್ರಾರ್ಥಿಸಿದಾಗ ಮಾತ್ರ ಆ ದೇವರು ಒಲಿದು ಬರುವ ಎಂದು ಸಾರುವ ವರ್ಷಾಂತ್ಯದ ಹೋಳಿ ಹುಣ್ಣಿಮೆವರೆಗೂ ಎಲ್ಲಾ ಪರ್ವಾಚರಣೆಗಳು ವೈಜ್ಞಾನಿಕವಾಗಿವೆ. ಇಂಥ ಯುಗಾದಿ ಪರ್ವ ಮರಳಿ ಮರಳಿ ಬರುತ್ತದೆಯಾದರೂ, ಪ್ರತಿ ಯುಗಾದಿಯೂ ಹೊಸತು ಹೊಸತನ್ನೇ ತರುತ್ತದೆ. ಇಲ್ಲಿಯವರೆಗೆ ಹೆಚ್ಚು ಚಳಿಯಿಂದ ಥರಥರಿಸುತ್ತಿದ್ದ ನಿಸರ್ಗದಲ್ಲಿ ಎಲೆ ಕಾಯಿ ಚಿಗುರು ಪುಷ್ಪಗಳನ್ನು ಕಳೆದುಕೊಂಡು ಬೋಳು ಬೋಳಾಗಿ ನಲುಗುತ್ತಿದ್ದ ಗಿಡ-ಮರಗಳು ಈಗಿನ ಬೆಚ್ಚಗಿನ ವಾತಾವರಣದಲ್ಲಿ ಹೂವು ಚಿಗುರು ಎಲೆ ಕಾಯಿಗಳಿಂದ ತುಂಬಿಕೊಂಡು ಇಡಿಯ ಇಳೆಯೇ ಹಸಿರುಡುಗೆಯನ್ನು ಉಟ್ಟಂತಾಗಿ ಇಳೆಯನ್ನು ಅಮರಾವತಿಯನ್ನಾಗಿಸಿದೆ.
ನಿಸರ್ಗದ ವೈಶಿಷ್ಟ್ಯತೆಯ ದೂರದ ಪಕ್ಷಿನೋಟಕ್ಕೆ ರಾಚುವ, ಬಯಲಲ್ಲಿರುವ ಹಸಿರೆಲ್ಲ ಒಂದೇ ಬಣ್ಣವೆಂಬಂತೆ ತೋರುತ್ತದೆ. ಆದರೆ ಅದರ ಹತ್ತಿರ ಹೋದಾಗ, ಅದರ ಸೂಕ್ಷ್ಮತೆಯಲ್ಲಿ ಪ್ರತಿ ಸಸ್ಯಸಂಕುಲವು ತನ್ನ ಭಿನ್ನತೆಯನ್ನು ಕಾಯ್ದಕೊಂಡಿರುವುದು ಕಂಡುಬರುತ್ತದೆ. ಕಣ್ಣಿಗೆ ಕಾಣುವ ಎಲ್ಲಾ ಜಾತಿಯ ಸಸ್ಯಸಂಪತ್ತಿನ ಸಂಕುಲವು ತನ್ನ ಭಿನ್ನತೆಯನ್ನು ಕಾಯ್ದುಕೊಂಡಿರುವುದು ನಿಸರ್ಗಧ ಇರುವಿಕೆಯಷ್ಟೇ ಸತ್ಯ ಸಂಗತಿಯಾಗಿದೆ.
ಯುಗಾದಿಯಲ್ಲಿ ನಾವು ಆಚರಿಸುವ ಪ್ರತಿಯೊಂದು ಕಾರ್ಯವು ವೈಜ್ಞಾನಿಕತೆಯ ಮೇಲೆಯೇ ನಿಂತಿದೆ. ಯುಗಾದಿಯ ವರ್ಷಾರಂಭದ ದಿನದಿಂದ ಶುಭಾರಂಭಗೊಂಡ ಎಲ್ಲಾ ಸತ್ಕಾರ್ಯಗಳೂ ಯಶಸ್ಸುನ್ನು ಸಾಧಿಸುತ್ತವೆ ಎಂಬುದು ಬರೀ ವಿಶ್ವಾಸದ ಮಾತಲ್ಲ. ಆ ಹೊಸತು ವ್ಯಾವಹಾರಿಕ ಸತ್ಯವೂ ಹೌದು. ಇಂಗ್ಲಿಷ್‌ರಲ್ಲಿ ಒಂದು ಮಾತಿದೆ ‘well begin is ready half completed’ ಅದಕ್ಕಾಗಿಯೇ ಒಳ್ಳೆಯ ಕಾರ್ಯಗಳೆನ್ನೆಲ್ಲ ಯುಗಾದಿಯಿಂದ ಆರಂಭಿಸುವ ಕ್ರಮವಿದೆ. ಅದು ವಿದ್ಯಾರಂಭವಿರಲಿ, ವಿವಾಹ ಸಮಾರಂಭವಿರಲಿ ಗೃಹ ಪ್ರವೇಶವೇ ಇರಲಿ, ದೂರ ಪ್ರಯಾಣವೇ ಇರಲಿ, ಸಂಧಾನವಿರಲಿ ಮತ್ತು ಸಂಗ್ರಾಮವಿರಲಿ, ಈ ಎಲ್ಲಾ ಕಾರ್ಯಗಳು ಹೊಸತಿನ ಯುಗಾದಿಯಿಂದ ಕಾರ್ಯಗಳನ್ನು ಮೊದಲು ಮಾಡಲಾಗುತ್ತದೆ.
ಈ ಹೊಸ ದಿನದ ವಿಶೇಷತೆಯಲ್ಲಿ ಬೇವು-ಬೆಲ್ಲದ ಸೇವನೆಯು ವೈಜ್ಞಾನಿಕವಾಗಿ ಅಷ್ಟೇ ಸತ್ಯಕ್ಕೆ ಹತ್ತಿರವಾದ ಸಂಗತಿಯಾಗಿದೆ. ಬೇವನ್ನು ಪರ್ಯಾಯ ಕಲ್ಪವೃಕ್ಷವೆಂದು ಕರೆಯಲಾಗಿದೆ. ಬೇವಿನ ಸರ್ವಾಂಗವೂ ಉತ್ಕೃಷ್ಟವೇ, ಔಷಧಿಯೇ. ಇದರ ಎಲೆ ಬೇರು ಕಾಂಡ ಸರ್ವಸ್ವವೂ ವಿವಿಧ ರೀತಿಯ ರೋಗಗಳಿಗೆ ದಿವ್ಯ ಔಷಧಿಯಾಗಿ ನೆರವಾಗುವುದು. ಇದು ಚರ್ಮರೋಗ ನಿವಾರಕ ಕ್ರಿಮಿಹಾರಕ ಜಂತುನಾಶಕ ಶಕ್ತಿದಾಯಕ ದಿವ್ಯ ಔಷಧವಾಗಿದೆ. ಇದು ಕೃಷಿ ಕೈಗಾರಿಕೆ ವ್ಯಾಪಾರ ವಾಣಿಜ್ಯ ತೈಲಗೊಬ್ಬರವಾಗಿ ನೆರವಾಗುತ್ತದೆ. ಇನ್ನೂ ನಾವು ನೂರ‌್ಕಾಲ ವಜ್ರದೇಹಿಯಾಗಿ ಬಾಳಲು, ಎಲ್ಲಾ ರೀತಿಯ ಸಂಪತ್ತುಗಳಿಗಾಗಿ ಮತ್ತು ಸಕಲ ರೋಗ ನಿವಾರಣೆಗಾಗಿ ಬೇವಿನ ಚಿಗುರು ಮತ್ತು ಎಲೆ ತಿನ್ನಬೇಕು.
ಖಾದ್ಯ ತಯಾರಿಕೆಯಲ್ಲಿ ಬಳಸುವ ಬೆಲ್ಲವು ಸಹ ಅಷ್ಟೇ ಉತ್ಕೃಷ್ಟವಾದದ್ದು. ಅದು ಶಕ್ತಿ-ಚೈತನ್ಯದಾಯಕವೂ, ರಕ್ತ-ಹಿಮೋಗ್ಲೋಬಿನ್‌ಕಾರಕವೂ ಮತ್ತು ಆರೋಗ್ಯವರ್ಧಕವೂ ಆಗಿರುತ್ತದೆ. ಇಂತಹ ಅಮೂಲ್ಯ ಬೇವು-ಬೆಲ್ಲ ಸೇವನೆಯು ಆಯುರಾರೋಗ್ಯ ವರ್ಧಕವೂ ಮನೋದೈನಿಕ ಸ್ವಾಸ್ಥ್ಯ ಸಮತೋಲನಕಾರಕವೂ ಕೂಡ ಆಗಿರುತ್ತದೆ. ಈ ಹೊಸ ದಿನದಿಂದ ಭಾರತೀಯರು ಕಾಲಮಾನದ ನಿಖರತೆಯನ್ನು ತಿಳಿಯಲು ದಿನದ ಪಂಚಾಂಗ ಶ್ರವಣವೂ ಸಹ ಅಷ್ಟೇ ವೈಜ್ಞಾನಿಕವಾಗಿದೆ. ಈ ಪಂಚಾಂಗದ ಮೂಲಕ ಆ ವರ್ಷದ ಮಳೆ ಬೆಳೆ ಭವಿಷ್ಯದ ಆಗುಹೋಗುಗಳನ್ನು ಪೂರ್ವಭಾವಿಯಾಗಿ ತಿಳಿದು ಅದಕ್ಕೆ ಅನುಗುಣವಾಗಿ ಜೀವನಕ್ರಮವನ್ನು ಹೊಂದಿಸಿಕೊಂಡು ಒತ್ತಡರಹಿತ, ರೋಗರಹಿತ ಬದುಕಿನಿಂದ ಸಂತೃಪ್ತ ಜೀವನ ನಡೆಸಲು ಸಹಾಯವಾಗುತ್ತದೆ.
ಇದರ(ಯುಗಾದಿಯ) ಹಿನ್ನೆಲೆಯನ್ನು ಸ್ವಲ್ಪ ರಾಮಾಯಣದಲ್ಲಿರುವಂತೆ ಗಮನಿಸುವುದಾದರೆ, ರಾಮನ ಜನನ ಕಾಲದಲ್ಲಿ ಚೈತ್ರಮಾಸವು ದ್ವಾದಶ ಮಾಸವಾಗಿತ್ತು. ಮುಂದೆ ಆರನೆಯ ಶತಮಾನದಲ್ಲಿ ವರಾಹಮಿಹಿರನು ವಸಂತವಿಸುವತ್ ಅಶ್ವಿನಿಯಲ್ಲಿ ಬರುವುದರಿಂದ ಚೈತ್ರಶುದ್ಧ ಪಾಂಡ್ಯದಿಂದ ನವವರ್ಷಾರಂಭವನ್ನು ಮಾಡಿದನು. ಶಾಲಿವಾಹನ ಶಕಾನುಯಾಯಿ ದಕ್ಷಿಣ ಭಾರತದವರು ಚೈತ್ರಶುದ್ಧ ಪ್ರತಿಪದೆಯಿಂದ ನವವರ್ಷಾರಂಭ ಮಾಡಿದರೆ, ವಿಕ್ರಮ ಶಕಾನುಯಾಯಿ ಉತ್ತರ ಭಾರತದವರು ಚೈತ್ರದ ಬದಲು, ಕಾರ್ತಿಕ ಶುದ್ಧ ಪ್ರತಿಪದೆಯಿಂದ ಹೊಸ ವರ್ಷವನ್ನು ಆರಂಭಿಸಿದರು. ಯುಗ ಎಂದರೆ ವರ್ಷ ಎಂದೂ ಆ ಯುಗ ಎನ್ನುವ ರಥಕ್ಕೆ ಉತ್ತರಾಯಣ ಮತ್ತು ದಕ್ಷಿಣಾಯನ ಎಂಬ ಎರಡು ಕಾಲ ಚಕ್ರಗಳಿರುತ್ತವೆ.