Zodiac Sign: ಈ ರಾಶಿಗಳ ಪುರುಷರು ಜೀವನದಲ್ಲಿ ಬಹುಬೇಗ ಯಶಸ್ಸು ಗಳಿಸ್ತಾರೆ

By Suvarna NewsFirst Published Aug 23, 2022, 11:37 AM IST
Highlights

ಯಶಸ್ಸು ಗಳಿಸಲು ವಯಸ್ಸಿನ ಮಿತಿಯಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ಕೆಲವರು ಸಾಕಷ್ಟು ಯಶಸ್ಸು ಗಳಿಸಿ ಮಿಂಚುತ್ತಾರೆ. ಆದರೆ, ಎಲ್ಲರಿಗೂ ಅದು ಕಷ್ಟಸಾಧ್ಯ. ಕೆಲವು ರಾಶಿಗಳ ಪುರುಷರಿಗೆ ಯಶಸ್ಸು ಚಿಕ್ಕ ವಯಸ್ಸಿನಲ್ಲೇ ಒಲಿಯುತ್ತದೆ.

ಯಶಸ್ಸು ಎಲ್ಲರಿಗೂ ಒಲಿಯುವುದಿಲ್ಲ. ಸುಲಭವಾಗಂತೂ ಒಲಿಯುವುದೇ ಇಲ್ಲ. ಅಷ್ಟಕ್ಕೂ ಯಶಸ್ಸು ಎಂದರೆ ಯಾವುದು ಎನ್ನುವ ಮೂಲಭೂತ ಪ್ರಶ್ನೆಯೂ ಇದೆ, ಅದು ಬೇರೆ ವಿಚಾರ. ಜೀವನದಲ್ಲಿ ಯಶಸ್ವಿಯಾಗಲು ಎಲ್ಲರೂ ಬಯಸುತ್ತೇವೆ. ಎಲ್ಲರಿಗೂ ತಾವು ಕೆಲಸ ಮಾಡುವ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು, ತಮ್ಮದೇ ಆದೊಂದು ಮಾದರಿ ನಿರ್ಮಾಣ ಮಾಡಬೇಕು, ಉತ್ತಮ ಹೆಸರು ಗಳಿಸಬೇಕು, ಜೀವನಕ್ಕೆ ಸಾಕಾಗುವಷ್ಟು ಹಣ ಮಾಡಬೇಕು, ಸ್ವಂತದ್ದೊಂದು ಸೂರು ಮಾಡಿಕೊಳ್ಳಬೇಕು, ಶಿಕ್ಷಣ, ಆರೋಗ್ಯಕ್ಕೆ ಸಾಕಾಗುವಷ್ಟು ಹಣ ಹೊಂದಬೇಕು ಇತ್ಯಾದಿ ಇತ್ಯಾದಿ ಕನಸುಗಳನ್ನು ಕಾಣುವುದು ಸಹಜ. ಆದರೆ, ಎಲ್ಲ ಪುರುಷರಿಗೂ ಸಾಧಿಸಲು ಆಗುವುದಿಲ್ಲ. ಕೆಲವು ಪುರುಷರಿಗಂತೂ ಜೀವನವಿಡೀ ದುಡಿದರೂ ಬಯಸಿದ್ದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಯಶಸ್ಸು ಕಷ್ಟದ ದುಡಿಮೆಯಿಂದ ಬರುತ್ತದೆ ಎನ್ನುವುದು ಹಲವರ ನಂಬಿಕೆಯಾಗಿದ್ದರೆ, ಅದಕ್ಕೆ ಅದೃಷ್ಟವೂ ಬೇಕು ಎಂದು ಇನ್ನಷ್ಟು ಮಂದಿ ಹೇಳುತ್ತಾರೆ. ಒಟ್ಟಿನಲ್ಲಿ ಅದೊಂದು ಮಾಯೆಯೇ ಸರಿ. ಆದರೆ, ಕೆಲವು ರಾಶಿಗಳ ಪುರುಷರು ನಿಜಕ್ಕೂ ಅದೃಷ್ಟವಂತರಾಗಿರುತ್ತಾರೆ. ಅವರಿಗೆ ಕಷ್ಟಪಟ್ಟು ಯಶಸ್ಸನ್ನು ಬೆಂಬತ್ತುವ ಕಲೆ ಒಲಿದಿರುತ್ತದೆ ಹಾಗೆಯೇ ಚಿಕ್ಕ ವಯಸ್ಸಿನಲ್ಲೇ ಯಶಸ್ಸೂ ಒಲಿಯುತ್ತದೆ. ಅಂದುಕೊಂಡಿದ್ದನ್ನು ಸಾಧಿಸುವ ಗುಣದ ಜತೆಗೆ, ಅದೃಷ್ಟವೂ ಇವರಿಗೆ ಇರುವುದರಿಂದ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ. ಅಂತಹ ರಾಶಿಗಳು ಯಾವುವು ನೋಡಿಕೊಳ್ಳಿ.

·        ಸಿಂಹ (Leo)

ಸಿಂಹ ರಾಶಿಗಳ ಗಂಡಸರು (Men) ಉತ್ತಮ ಉದ್ಯಮಿಗಳಾಗಬಲ್ಲರು. ಉದ್ಯಮ (Entrepreneurship) ವಲಯದಲ್ಲಿ ಯಶಸ್ಸು (Succeed) ಗಳಿಸಿದವರ ಮಾಹಿತಿ ಪರಿಶೀಲನೆ ಮಾಡಿದರೆ ಸಿಂಹ ರಾಶಿಗಳ ಮಂದಿಯೇ ಮುಂಚೂಣಿಯಲ್ಲಿರಬಹುದು, ಅಷ್ಟರಮಟ್ಟಿಗೆ ಇವರಿಗೆ ಉದ್ಯಮದ ಕಲೆ ಸಿದ್ಧಿಯಾಗಿರುತ್ತದೆ. ಅತಿ ಚಿಕ್ಕ ವಯಸ್ಸಿನಿಂದಲೇ ಇವರ ಮನಸ್ಸು ಕೆಲಸ, ಉದ್ಯಮದ ಕಡೆಗೆ ತುಡಿಯಬಹುದು. ಸಣ್ಣ ವಹಿವಾಟು (Business) ಆರಂಭಿಸಿ ಒಬ್ಬರೇ ಕೆಲವು ಜವಾಬ್ದಾರಿ (Responsibility) ನಿಭಾಯಿಸುತ್ತ ಅವರು ಸಾಧನೆಯ ಕಡೆಗೆ ಹೆಜ್ಜೆ ಇಡಬಲ್ಲರು. ಚಿಕ್ಕ ಮಗುವಿದ್ದಾಗಿನಿಂದಲೂ ಸಿಂಹ ರಾಶಿಯ ಜನರಲ್ಲಿ ಕೆಲವು ಗುಣ ಗುರುತಿಸಲು ಸಾಧ್ಯ. ಅದೆಂದರೆ, ಇವರು ಕೈಗಳನ್ನು ಕೆಸರು ಮಾಡಿಕೊಳ್ಳಲು ಹಿಂದೇಟು ಹಾಕುವುದಿಲ್ಲ. ಅದು ಮುಂದೂ ಸಾಬೀತಾಗುತ್ತದೆ. ಕೈ ಕೆಸರು ಮಾಡಿಕೊಳ್ಳದ ಹೊರತು ಬಾಯಿ ಮೊಸರಾಗುವುದಿಲ್ಲ ಎನ್ನುವ ಗುಟ್ಟು ಇವರಿಗೆ ತಿಳಿದಿರುತ್ತದೆ.

·        ಕುಂಭ (Aquarius)

ಕುಂಭ ರಾಶಿಗಳ ಪುರುಷರು ಶೈಕ್ಷಣಿಕವಾಗಿ (Academics) ಅದ್ಭುತ ಸಾಧನೆ ಮಾಡುತ್ತಾರೆ. ಅತ್ಯಂತ ಸಮಯಪಾಲಕರಾಗಿರುತ್ತಾರೆ. ಪ್ರಾಮಾಣಿಕವಾಗಿ (Prompt) ಅಧ್ಯಯನ (Study) ಮಾಡುತ್ತಾರೆ. ಶಾಲಾ ಶಿಕ್ಷಣದಲ್ಲಿ ಉತ್ತಮವಾಗಿ ಆಸಕ್ತಿ ವಹಿಸುತ್ತಾರೆ. ಹಾಗೆಯೇ ಏನಾದರೂ ಪ್ರಶಸ್ತಿಗಳನ್ನು (Awards) ಗಳಿಸುವಲ್ಲೂ ಮುಂಚೂಣಿಯಲ್ಲಿ ಇರುತ್ತಾರೆ. ಚರ್ಚೆ ಸ್ಪರ್ಧೆಗಳಿಂದ ಹಿಡಿದು ನಾಟಕದ ತಂಡದಲ್ಲಿ ಭಾಗಿಯಾಗುವವರೆಗೆ ವಿಭಿನ್ನ ವಿಷಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಶಿಕ್ಷಣದ ಬಳಿಕವೂ ಇದೇ ರೀತಿಯ ಅತ್ಯುತ್ತಮ ವೃತ್ತಿಜೀವನ (Profession) ಹೊಂದುತ್ತಾರೆ. ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಉತ್ಸಾಹದಿಂದ ಭಾಗಿಯಾಗುತ್ತಾರೆ. ಸಮಯ ಹೂಡಿಕೆ ಮಾಡುತ್ತಾರೆ. ಇಂತಹ ವೈವಿಧ್ಯಮಯ ಚಿಂತನೆಯಿಂದಲೇ ಅವರು ಉದ್ಯೋಗದಲ್ಲೂ ವಿಭಿನ್ನವಾಗಿ ಗುರುತಿಸಿಕೊಂಡು ಚಿಕ್ಕ ವಯಸ್ಸಿನಲ್ಲೇ ಯಶಸ್ವಿ ಎನಿಸಿಕೊಳ್ಳುತ್ತಾರೆ.   

·        ಕನ್ಯಾ (Vigro)

ಕನ್ಯಾ ರಾಶಿಯ ಪುರುಷರು ಗಂಭೀರವಾದ ಸಂಶೋಧನೆಗಳಲ್ಲಿ ತೊಡಗುವ ಮನಸ್ಥಿತಿ ಹೊಂದಿರುತ್ತಾರೆ. ಶೈಕ್ಷಣಿಕವಾಗಿ ಭಾರೀ ಸಾಧನೆ ಮಾಡಬಲ್ಲರು. ಸಂಶೋಧನೆ (Research), ಅನ್ವೇಷಣೆಗಳಲ್ಲಿ ತಲ್ಲೀನರಾಗುವ ಧ್ಯಾನಸ್ಥ ಮನೋಭಾವದಿಂದ ಗುರುತಿಸಿಕೊಳ್ಳುತ್ತಾರೆ. ಯಶಸ್ಸಿನ ಗುರಿ (Aim) ಮತ್ತು ಸ್ಪರ್ಧಾತ್ಮಕ (Competitive) ಮನೋಭಾವದಿಂದ ಉತ್ತಮ ಸ್ಕಾಲರ್ ಷಿಪ್ ಪಡೆದುಕೊಳ್ಳುತ್ತಾರೆ. ತಮ್ಮ ವಯೋಮಾನದ ಬೇರೆ ಎಲ್ಲ ರಾಶಿಗಳ ಯುವಮಂದಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಅನ್ವೇಷಣೆಗಳ ಕುರಿತು ಅತೀವ ಆಸಕ್ತಿ ಹೊಂದಿದ್ದು, ತಮ್ಮ ವೃತ್ತಿಜೀವನ ಉತ್ತಮವಾಗಿ ರೂಪುಗೊಳ್ಳಲು ತಳಮಟ್ಟದಿಂದ ಶ್ರಮಿಸುತ್ತಾರೆ. ಶ್ರಮ ವಹಿಸುತ್ತಾರೆ. ಕಾಲೇಜು ದಿನಗಳಿಂದಲೇ ಸಣ್ಣಪುಟ್ಟ ಪ್ರಮಾಣದ ಉದ್ಯಮಗಳಲ್ಲೂ ತೊಡಗಿರುವ ಉತ್ಸಾಹ ಇರುತ್ತದೆ.

click me!