
ಶಿವಮೊಗ್ಗ (ಅ.20): ನಾಡಹಬ್ಬ ದಸರಾದ ಸಂಭ್ರಮದಲ್ಲಿ ಆಯುಧ ಪೂಜೆ ದಿನದಂದು ಹೊಸ ಕಾರು ಖರೀದಿಸಲು ಶೋರೂಂಗೆ ಬಂದಿದ್ದ ಗ್ರಾಹಕರಿಗೆ ದುರಂತವೊಂದು ಎದುರಾಗಿದೆ. ಹೊಸ ಕಾರು ಡೆಲಿವರಿ ಪಡೆಯುವ ಸಂದರ್ಭದಲ್ಲಿ ವಾಹನ ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆಗೆ ನುಗ್ಗಿ ಬೈಕ್‌ಗೆ ಡಿಕ್ಕಿ ಹೊಡೆದ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ನಡೆದಿದೆ.
ಕಾರು ಶೋರೂಂನ ಬ್ಯಾರಿಕೇಡ್ ಮುರಿದು ನಡುರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಈ ಆತಂಕಕಾರಿ ದೃಶ್ಯ ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ಲೆನಿಸುವಂತಿದೆ.
ದಸರಾ ಮತ್ತು ಆಯುಧ ಪೂಜೆ ಪ್ರಯುಕ್ತ ಸಾಗರ ನಗರದಲ್ಲಿರುವ ಮಾರುತಿ ಕಾರು ಶೋರೂಂನಲ್ಲಿ ಗ್ರಾಹಕರೊಬ್ಬರು ಹೊಸ ಕಾರು ಖರೀದಿಸಿದ್ದರು. ಪೂಜೆ ಮುಗಿಸಿ ಕಾರಿನ ಡೆಲಿವರಿ ಪಡೆದು ಶೋರೂಂನಿಂದ ಹೊರಗೆ ತರುವ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ. ಅತಿಯಾದ ಎಕ್ಸಿಲೇಟರ್ ನೀಡಿದ್ದರಿಂದಲೋ ಅಥವಾ ಗೇರ್ ಬದಲಾವಣೆಯ ಯಡವಟ್ಟಿನಿಂದಲೋ ಕಾರು ರಾಕೆಟ್ ವೇಗದಲ್ಲಿ ಮುನ್ನುಗ್ಗಿದೆ. ಶೋರೂಂ ಮುಂಭಾಗದಲ್ಲಿದ್ದ ಬ್ಯಾರಿಕೇಡ್‌ಗಳನ್ನು ಕ್ಷಣಾರ್ಧದಲ್ಲಿ ಧ್ವಂಸಗೊಳಿಸಿ, ರಸ್ತೆಗೆ ನುಗ್ಗಿದ ಕಾರು, ಅದೇ ಮಾರ್ಗವಾಗಿ ಸಾಗುತ್ತಿದ್ದ ಬೈಕ್‌ಗೆ ನೇರವಾಗಿ ಗುದ್ದಿದೆ.
ಅಪಘಾತದ ಭೀಕರತೆಗೆ ಬೈಕ್ ನಜ್ಜುಗುಜ್ಜಾಗಿದ್ದು, ಬೈಕ್ ಸವಾರ ಹಾಗೂ ಹಿಂಬದಿ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಕೂಡಲೇ ಸ್ಥಳೀಯರು ಹಾಗೂ ಶೋರೂಂ ಸಿಬ್ಬಂದಿ ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಣ್ಣುಮುಚ್ಚಿ ತೆರೆಯುವುದರೊಳಗೆ ನಡೆದ ಈ ಭೀಕರ ಅವಘಡದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಬ್ಬದ ದಿನವೇ ಸಂಭವಿಸಿದ ಈ ದುರ್ಘಟನೆ ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ.
ಘಟನೆ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಹೊಸ ವಾಹನಗಳನ್ನು ಚಾಲನೆ ಮಾಡುವಾಗ ಎಚ್ಚರಿಕೆ ವಹಿಸುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಎಚ್ಚರಿಕೆಯ ಗಂಟೆಯಾಗಿದೆ.