ರಾಯರ ಆರಾಧನಾ ಮಹೋತ್ಸವಕ್ಕೆ ಸಕಲ ರೀತಿಯಿಂದಲೂ ಸಜ್ಜಾದ ಮಂತ್ರಾಲಯ ಮಠ
ರಾಯಚೂರು(ಆ.10): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವವು ಇಂದು(ಬುಧವಾರ) ಆರಂಭಗೊಳ್ಳುತ್ತಿದ್ದು, ಆ.16 ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಠದಲ್ಲಿ ನಡೆಯಲಿವೆ. ರಾಯರ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯ ಮಠವು ಸಕಲ ರೀತಿಯಿಂದಲೂ ಸಜ್ಜಾಗಿದೆ. ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಶ್ರೀಮಠದಲ್ಲಿ ಸಪ್ತರಾತ್ರೋತ್ಸವಗಳನ್ನು ಆಯೋಜಿಸಲಾಗಿದ್ದು, ಆ.10ರಂದು ಸಂಜೆ ಧ್ವಜಾರೋಹಣ, ಲಕ್ಷ್ಮೇ, ಅಶ್ವ ಪೂಜೆ ಮುಖಾಂತರ ಮಹೋತ್ಸವಕ್ಕೆ ಶ್ರೀಗಳು ಚಾಲನೆ ನೀಡಲಿದ್ದಾರೆ.
ಆ.12 ರಂದು ರಾಯರ ಪೂರ್ವಾರಾಧನೆ ನಿಮಿತ್ತ ಪ್ರತಿವರ್ಷದಂತೆ ತಿರುಮಲ, ತಿರುಪತಿ ದೇವಸ್ಥಾನದಿಂದ ಬರುವ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಶ್ರೀರಾಘವೇಂದ್ರ ಸ್ವಾಮಿಗಳ ಅನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಆ.13 ರಂದು ರಾಯರ ಮಧ್ಯಾರಾಧನೆ ಹಿನ್ನೆಲೆಯಲ್ಲಿ ಚಿನ್ನದ ರೋಥ್ಸವ ಆ.14 ರಂದು ಉತ್ತರಾರಾಧನೆಯ ಭಾಗವಾಗಿ ಮಹಾರಥೋತ್ಸವ ನಡೆಯಲಿದೆ.
ಶ್ರೀರಾಘವೇಂದ್ರ ಸ್ವಾಮೀಜಿ ಆರಾಧನಾ ಮಹೋತ್ಸವ, ರಾಯರ ಮಧ್ಯಾರಾಧನೆ ವಿಶೇಷತೆಗಳೇನು?
ಮಂತ್ರಾಲಯಕ್ಕೆ ಬರುವ ಭಕ್ತರಿಗೂ ತಟ್ಟಿದ ಪ್ರವಾಹದ ಎಫೆಕ್ಟ್
ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆಯಾಗಿದೆ. ತುಂಗಭದ್ರಾ ನದಿಗೆ 1 ಲಕ್ಷ 82 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ನದಿ ತೀರಕ್ಕೆ ಯಾರೂ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ
ರಾಯರ ಆರಾಧನಾ ಮಹೋತ್ಸವ ವೇಳೆ ತುಂಗಭದ್ರಾ ನದಿ ಸ್ನಾನಕ್ಕೆ ನಿರ್ಬಂಧ ಹೇರಲಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿರುವುದರಿಂದ ಸ್ನಾನಕ್ಕೆ ನಿರ್ಬಂಧಿಸಲಾಗಿದೆ. ನದಿಗೆ ಭಕ್ತರು ಇಳಿಯದಂತೆ ಬ್ಯಾರಿಕೇಡ್ ಹಾಕಿ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.
ಆದ್ರೆ, ತುಂಗಭದ್ರಾ ನೀರಿನ ಪುಣ್ಯಸ್ನಾನಕ್ಕಾಗಿ ಶ್ರೀಮಠದಿಂದ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ತುಂಗಭದ್ರಾ ನದಿ ಪಕ್ಕದಲ್ಲೇ ಭಕ್ತರಿಗಾಗಿ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಲ್ಲಿ ಸ್ನಾನ ಮಾಡಿ ಡ್ರೆಸ್ ಬದಲಾಯಿಸಿಕೊಳ್ಳಲು ಶೆಡ್ ನಿರ್ಮಾಣ ಮಾಡಲಾಗಿದ್ದು, ನಿರ್ಭಯವಾಗಿ ಭಕ್ತರು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಶ್ರೀಮಠದಿಂದ ಮನವಿ ಮಾಡಲಾಗಿದೆ. ಇಂದಿನಿಂದ ಆ.16ರ ವರೆಗೆ ನಡೆಯಲಿದೆ ರಾಯರ 351ನೇ ಆರಾಧನಾ ಮಹೋತ್ಸವ ನಡೆದಯಲಿದೆ.