
ಅನೇಕರಿಗೆ ಬೆಳಿಗ್ಗೆ ಒತ್ತಡ, ಕೆಲಸದಿಂದ ಪೂಜೆ ಮಾಡಲು ಸಮಯ ಸಿಗೋದಿಲ್ಲ. ಹಾಗಾಗಿ ಮಧ್ಯಾಹ್ನ ಸ್ನಾನ ಮಾಡಿ ದೇವರ ಪೂಜೆ ಮಾಡುತ್ತಾರೆ. ಆದರೆ, ಮಧ್ಯಾಹ್ನ ಹೊಸದಾಗಿ ಪೂಜೆ ಆರಂಭಿಸುವುದು ತಪ್ಪು ಎನ್ನುವ ನಂಬಿಕೆ ಅನೇಕರಲ್ಲಿದೆ. ಪೂಜೆ ಮಾಡುವುದು ತಪ್ಪಾ? ಪೂಜೆ ಮಾಡೋದಾದ್ರೆ ಹೇಗೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಶಾಸ್ತ್ರಗಳ ಪ್ರಕಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗಿನ ಸಮಯ ಪೂಜೆಗೆ ಸೂಕ್ತ ಸಮಯ ಅಲ್ಲ ಎನ್ನಲಾಗುತ್ತದೆ. ಈ ಸಮಯವನ್ನು ದೇವತೆಗಳ ವಿಶ್ರಾಂತಿಯ ಸಮಯ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಅನೇಕ ದೇವಾಲಯಗಳಲ್ಲಿ ಈ ಸಮಯದಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತೆ. ಹೀಗಾಗಿ ಈ ಅವಧಿಯಲ್ಲಿ ಹೊಸದಾಗಿ ಪೂಜೆ ಆರಂಭಿಸುವುದನ್ನು ಸಾಮಾನ್ಯವಾಗಿ ತಪ್ಪಿಸುವುದು ಉತ್ತಮ ಎಂದು ಹೇಳಲಾಗಿದೆ.
• ಬೆಳಿಗ್ಗೆಯೇ ಆರಂಭವಾದ ಹೋಮ, ಹವನ ಅಥವಾ ಧಾರ್ಮಿಕ ಅನ್ನದಾನ ಮಧ್ಯಾಹ್ನದವರೆಗೂ ಮುಂದುವರಿದರೆ ಅದರಲ್ಲಿ ಯಾವುದೇ ದೋಷವಿಲ್ಲ.
• ನವರಾತ್ರಿಯಂತಹ ವಿಶೇಷ ಸಂದರ್ಭಗಳಲ್ಲಿ ಬೆಳಗಿನ ಶುಭ ಮುಹೂರ್ತ ತಪ್ಪಿದರೆ, ಅಭಿಜಿತ್ ಮುಹೂರ್ತದಲ್ಲಿ ಕಲಶ ಸ್ಥಾಪನೆ ಸೇರಿದಂತೆ ಕೆಲವು ಪೂಜೆಗಳನ್ನು ಮಾಡಬಹುದು.
• ಕಾಲಸರ್ಪ ದೋಷ ನಿವಾರಣೆ ಮೊದಲಾದ ಕೆಲವು ವಿಶೇಷ ಪೂಜೆಗಳನ್ನು ರಾಹುಕಾಲದಲ್ಲೇ ಮಾಡುವ ಸಂಪ್ರದಾಯವಿದೆ. ಆ ದಿನ ರಾಹುಕಾಲ ಮಧ್ಯಾಹ್ನ ಬಂದರೆ, ಮಧ್ಯಾಹ್ನ ಪೂಜೆ ನಡೆಸಬಹುದು.
• ಮಧ್ಯಾಹ್ನ ಪೂಜೆ ಮಾಡೋದಾದ್ರೆ ಮೂರ್ತಿಯನ್ನು ಸ್ಪರ್ಶಿಸದೇ ಮನಸ್ಸಿನಲ್ಲಿ ನಿಮ್ಮ ಇಷ್ಟದೇವರ ನಾಮಸ್ಮರಣೆ ಮಾಡಿ. ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಬಹುದು. ದೂರದಿಂದಲೇ ನಮಸ್ಕರಿಸುವುದೂ ಶುಭಕರ ಎಂದು ಹೇಳಲಾಗಿದೆ.
ಪೂಜೆಗೆ ಅತ್ಯುತ್ತಮ ಸಮಯ ಯಾವುದು?
ಬ್ರಹ್ಮ ಮುಹೂರ್ತ ಅಂದ್ರೆ ಬೆಳಗಿನ ಜಾವ. ನಂತ್ರ ಸೂರ್ಯೋದಯದಿಂದ ಬೆಳಗ್ಗೆ 8 ಗಂಟೆಯವರೆಗೆ ಇರುವ ಪ್ರಾತಃಕಾಲ. ಹಾಗೆಯೇ ಸೂರ್ಯಾಸ್ತದ ಸಮಯವಾದ ಪ್ರದೋಷ ಕಾಲವೂ ಶಿವ ಹಾಗೂ ಲಕ್ಷ್ಮೀ ದೇವಿಯ ಆರಾಧನೆಗೆ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.