ಏನಿದು ವಿಸ್ಮಯ! 57 ವರ್ಷ ಹಿಂದೆಯೇ ನೇಪಾಳದ ಅಂಚೆಚೀಟಿಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆಯ ವರ್ಷ ಪ್ರಕಟ!

By Suvarna News  |  First Published Jan 17, 2024, 10:59 AM IST

ನೇಪಾಳದಲ್ಲಿ 57 ವರ್ಷಗಳ ಹಿಂದೆ ರಾಮನವಮಿ ಪ್ರಯುಕ್ತ ಬಿಡುಗಡೆಯಾದ ಸ್ಟಾಂಪೊಂದು ಅದರ ಮೇಲೆ ರಾಮಸೀತೆಯ ಚಿತ್ರದ ಜೊತೆಗೆ 2024ನೇ ಇಸವಿಯನ್ನು ಹೊಂದಿದೆ. ಈ ಮೂಲಕ, ರಾಮಮಂದಿರ ಉದ್ಘಾಟನೆ ವರ್ಷವನ್ನು ಆಗಲೇ ಊಹಿಸಲಾಗಿತ್ತೇ ಎಂದು ಅಚ್ಚರಿ ಮೂಡಿಸಿದೆ.


ಅಯೋಧ್ಯೆ ರಾಮಮಂದಿರ ಹಿಂದೂಗಳ ಹಲವು ವರ್ಷಗಳ ಕನಸು. ಇದು ಈಗ ಪ್ರಾಣ ಪ್ರತಿಷ್ಠೆಯಾಗುತ್ತಿರುವುದು ಕನಸೋ ನನಸೋ ಎಂಬಷ್ಟು ಅಚ್ಚರಿಯಲ್ಲಿ ಜನರಿರುವಾಗ, 57 ವರ್ಷಗಳ ಹಿಂದೆಯೇ ನೇಪಾಳ ಇದನ್ನು ಊಹಿಸಿತ್ತೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ. 

ವೈರಲ್ ಆಗಿರುವ ನೇಪಾಳದ ಅಂಚೆಚೀಟಿಯೊಂದು ಈ ಪ್ರಶ್ನೆಯೇಳಲು ಕಾರಣವಾಗಿದೆ. ರಾಮ ಮಂದಿರದ ಪ್ರತಿಷ್ಠಾಪನೆಯ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಈ ಸಂದರ್ಭದಲ್ಲಿ ನೇಪಾಳದಿಂದ 57 ವರ್ಷಗಳ ಹಿಂದೆ ಅಚ್ಚಾದ ಅಂಚೆ ಚೀಟಿಯ ಫೋಟೋವೊಂದು ಹೊರಬಿದ್ದಿದೆ. ಈ ಅಂಚೆಚೀಟಿಯನ್ನು ಏಪ್ರಿಲ್ 18, 1967ರಂದು ರಾಮ ನವಮಿಯ ಸಂದರ್ಭದಲ್ಲಿ (ಭಗವಾನ್ ರಾಮನ ಜನ್ಮದಿನ) ಬಿಡುಗಡೆ ಮಾಡಲಾಗಿತ್ತು. ಇದರ ಮೇಲೆ ರಾಮ ಸೀತೆಯ ಚಿತ್ರವಿದ್ದು, ಕೆಳಗೆ, ವಿ.ಎಸ್.(ವಿಕ್ರಮ ಸಂವತ್ಸರ ) 2024 ಎಂದು ಬರೆಯಲಾಗಿದೆ. ಇದು ರಾಮಮಂದಿರ ಉದ್ಘಾಟನೆಯ ವರ್ಷವನ್ನು ಆಗಲೇ ಊಹಿಸಿತ್ತೇ ಎಂಬ ಅಚ್ಚರಿಗೆ ದೂಡಿದೆ.

Tap to resize

Latest Videos

ನೈಜ ಕಾರಣ
ನೇಪಾಳ ಮತ್ತು ಭಾರತದ ಕೆಲವು ಭಾಗಗಳಲ್ಲಿ ಅನುಸರಿಸುವ ಹಿಂದೂ ಕ್ಯಾಲೆಂಡರ್‌ನ ವಿಕ್ರಮ್ ಸಂವತ್‌ನ 2024 ವರ್ಷವನ್ನು ಅಂಚೆ ಚೀಟಿ ಮೇಲೆ ಹಾಕಲಾಗಿದೆ. ಆದರೆ, ಇದರ ನಿಜವಾದ ಕಾರಣ ಬೇರೆ ಇದೆ. ಏನೆಂದರೆ, ವಿಕ್ರಮ ಸಂವತ್ ಗ್ರೆಗೋರಿಯನ್ ಕ್ಯಾಲೆಂಡರ್‌ಗಿಂತ 57 ವರ್ಷಗಳ ಮುಂದಿದೆ. ಆದ್ದರಿಂದ, ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ 1967 ರ ವರ್ಷವು ವಿಕ್ರಮ್ ಸಂವತ್‌ನಲ್ಲಿ 2024 ಆಗಿತ್ತು. ಆದ್ದರಿಂದ, 1967ರಲ್ಲಿ ಬಿಡುಗಡೆಯಾದ ಅಂಚೆಚೀಟಿಯ ಮೇಲೆ 2024 ಎಂದು ಬರೆಯಲಾಗಿದೆ.

108 ಅಡಿ ಉದ್ದದ ಅಗರಬತ್ತಿಗೆ ಅಯೋಧ್ಯೆಯಲ್ಲಿ ಅಗ್ನಿಸ್ಪರ್ಶ : 1.5 ತಿಂಗಳು ನಿರಂತರ ಉರಿಯಲಿದೆ ಈ ಅಗರಬತ್ತಿ

ಜನವರಿ 22ರಂದು ಸಿಂಹ ಗರ್ಜನೆಯ ಡೋಲು
ಈ ಮಧ್ಯೆ ಅಹಮದಾಬಾದ್‌ನಿಂದ 56 ಇಂಚು ಎತ್ತರದ ಡ್ರಮ್ ಅಯೋಧ್ಯೆಗೆ ಆಗಮಿಸಿದೆ. ಇದನ್ನು ನುಡಿಸಿದಾಗ ಸಿಂಹದಂತಹ ಧ್ವನಿ ಹೊರ ಹೊಮ್ಮುತ್ತದೆ. ಡೋಲು ಸಮೇತ ಅಯೋಧ್ಯೆಯಲ್ಲಿ ಮೆರವಣಿಗೆ ನಡೆಸಲಾಗಿದ್ದು, ಈಗ ಅದನ್ನು ದೇವಸ್ಥಾನದಲ್ಲಿ ಇರಿಸಲಾಗುವುದು.

ಎಂಟು ಲೋಹಗಳ ಶಂಖ
ಪ್ರಾಣ ಪ್ರತಿಷ್ಠೆಯ ಸಮಯದಲ್ಲಿ ಎಂಟು ಲೋಹಗಳ ಶಂಖವನ್ನು ರಾಮನ ಪಾದಗಳ ಮೇಲೆ ಇಡಲಾಗುತ್ತದೆ. ಅಲಿಗಢದ ನಿವಾಸಿ ಸತ್ಯ ಪ್ರಕಾಶ್ ಪ್ರಜಾಪತಿ ಅವರು ಮಂದಿರ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಶಂಖವನ್ನು ದಾನ ಮಾಡಿದ್ದಾರೆ. 

ಅಯೋಧ್ಯೆಯಲ್ಲಿ ಇಂದಿನ ಕಾರ್ಯಕ್ರಮ ಏನು: ಶ್ರೀರಾಮನ ಬಗ್ಗೆ ವಿಡಿಯೋ ಮಾಡಿ ಹಂಚಿಕೊಳ್ಳಿ: ಟ್ರಸ್ಟ್‌

ಜನವರಿ 22ರಂದು ಶ್ರೀ ರಾಮ ಜನ್ಮಭೂಮಿ ದೇವಾಲಯದ ಉದ್ಘಾಟನೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯುಪಿ ಗವರ್ನರ್ ಆನಂದಿಬೆನ್ ಪಟೇಲ್ ಮತ್ತು ದೇವಾಲಯದ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮುಂತಾದ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ. 7,000 ಅತಿಥಿಗಳ ಪೈಕಿ ಗಮನಾರ್ಹ ಆಹ್ವಾನಿತರಲ್ಲಿ ಕ್ರಿಕೆಟ್ ಐಕಾನ್‌ಗಳಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಸೇರಿದ್ದಾರೆ.

click me!