ಮರವಂತೆ: ಕರ್ಕಾಟಕ ಅಮವಾಸ್ಯೆ, ಸಮುದ್ರ ಸ್ನಾನ ಮಾಡಿ ಶ್ರೀ ವರಾಹ ದರ್ಶನ ಪಡೆದ ಭಕ್ತರು

By Ravi Janekal  |  First Published Aug 17, 2023, 2:23 PM IST

ವಿಶ್ವವಿಖ್ಯಾತ ಮರವಂತೆಯ ಪ್ರಕೃತಿ ಸೊಬಗಿನ ತಾಣದಲ್ಲಿ ನೆಲೆ ನಿಂತಿರುವ ಪುರಾಣ ಪ್ರಸಿದ್ದ ಕ್ಷೇತ್ರ ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಜಾತ್ರೆ ಸಂಭ್ರಮದಿಂದ ಜರುಗಿತು.


ಉಡುಪಿ (ಆ.17): ವಿಶ್ವವಿಖ್ಯಾತ ಮರವಂತೆಯ ಪ್ರಕೃತಿ ಸೊಬಗಿನ ತಾಣದಲ್ಲಿ ನೆಲೆ ನಿಂತಿರುವ ಪುರಾಣ ಪ್ರಸಿದ್ದ ಕ್ಷೇತ್ರ ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಜಾತ್ರೆ ಸಂಭ್ರಮದಿಂದ ಜರುಗಿತು.
 
ಮಳೆ ಬಿಡುವು ನೀಡಿದ್ದರಿಂದ ಬೆಳಗಿನಿಂದಲೇ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರ ಮಹಾಪೂರವೇ ಹರಿದು ಬಂದಿತು. ಕೆಲವರು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದು ಅಭಿಷೇಕ, ಪೂಜೆ, ಅರ್ಪಣೆ ಸಲ್ಲಿಸಿದರು. ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಉಡುಪಿ ಜಿಲ್ಲೆಗೆ 32 ಹೊಸ ಪ್ರವಾಸಿ ತಾಣಗಳು ಸೇರ್ಪಡೆ: ಜಿಲ್ಲಾ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್‌
 
ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದ್ದು, ದೇವಾಲಯದೊಳಗೆ ಆಡಳಿತ ಮಂಡಳಿ ಮತ್ತು ಸೇವಾ ವರ್ಗದ ಸದಸ್ಯರು ಸ್ವಯಂಸೇವಕರ ಜೊತೆಗೂಡಿ ಶುಚಿತ್ವ, ಪೂಜೆ, ಭಕ್ತರ ಆಗಮನ-ನಿರ್ಗಮನ, ಪ್ರಸಾದ ವಿತರಣೆ ಸುಗಮವಾಗಿ ನಡೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಿದರು. ಮಧ್ಯಾಹ್ನ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸರತಿ ಸಾಲು ಕಂಡು ಬಂದವು. 

Tap to resize

Latest Videos

undefined

ಈ ಬಾರಿಯ ವಿಶೇಷ:

ಈ ಬಾರಿಯ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅನ್ನ, ಚಿತ್ರಾನ್ನ ಮತ್ತು ಪಾಯಸ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು ಮೂವತ್ತು ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಈ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಅನುಕೂಲವಾಗುವಂತೆ, ಪ್ಲಾಸ್ಟಿಕ್ ನಿಷೇಧದ ಮಹತ್ವ ತಿಳಿಸುವ ಉದ್ದೇಶದಿಂದಾಗಿ ದೇವಸ್ಥಾನದ ವತಿಯಿಂದಲೇ ಹಣ್ಣುಕಾಯಿ ನೀಡುವ  ವ್ಯವಸ್ಥೆ ಕಲ್ಪಿಸಲಾಗಿದೆ. ಹೊರಗಡೆ ಅಂಗಡಿಯಿಂದ ಖರೀದಿಸುವ ಹಣ್ಣುಕಾಯಿಗಳಿಗೆ ನಿಷೇಧ ಹೇರಲಾಗಿದೆ.
 
ಸಮುದ್ರ ಹಾಗೂ ನದಿ ಸ್ನಾನ: 

ನದಿ ಹಾಗೂ ಸಮುದ್ರದ ನಡುವೆ ಕಂಡುಬರುವ ಪ್ರಕೃತಿ ರಮಣೀಯವಾದ ಧಾರ್ಮಿಕ ಕ್ಷೇತ್ರ ಇದಾಗಿದ್ದು, ಕರ್ಕಾಟಕ ಅಮವಾಸ್ಯೆಯಂದು ಕ್ಷೇತ್ರಕ್ಕೆ ಆಗಮಿಸುವ ಸಹಸ್ರಾರು ಭಕ್ತರು ಸಮುದ್ರ ಹಾಗೂ ದೇವಸ್ಥಾನದ ಎದುರಿನ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗುವ ನಂಬಿಕೆ ಬಹಳ ವಿಶಿಷ್ಟವಾಗಿದೆ. ಕರ್ಕಾಟಕ ಅಮವಾಸ್ಯೆಯಂದು ಇಲ್ಲಿ ಬಂದು ಸಮುದ್ರ ಸ್ನಾನ ಮಾಡಿದರೆ ರೋಗಗಳನ್ನು ವರಾಹ ಸ್ವಾಮಿ ಪರಿಹರಿಸುತ್ತಾನೆಂಬ ನಂಬಿಕೆ ಇದೆ. ಹಿಂದಿನಿಂದಲೂ ಮೀನುಗಾರರು ಹಾಗೂ ಕೃಷಿಕರು ಕ್ಷೇತ್ರವನ್ನು ಆರಾಧಿಸಿಕೊಂಡು ಬಂದಿದ್ದಾರೆ. 

ಶ್ರೀ ದೇವರಿಗೆ ಪ್ರಕೃತಿ ವಿಕೋಪವನ್ನು ತಡೆಯುವ ಶಕ್ತಿ ಇದೆ ಎನ್ನುವ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ಜಾತ್ರೆಯ ದಿನ ಬೆಳಿಗ್ಗೆನಿಂದಲೂ ಬಿಸಿಲಿನ ವಾತವರಣವಿದ್ದು ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
 
ಮೀನುಗಾರರ ಆರಾಧ್ಯ ಕ್ಷೇತ್ರ:

ಮತ್ಸ್ಯ ಸಂಪತ್ತು ಕರುಣಿಸಲು ಮತ್ತು ಮೀನುಗಾರರ ಸಂರಕ್ಷಕನಾಗಿಯೂ ಹಾಗೂ ಅಕಾಲಿಕ ಮಳೆ ಮುಂತಾದವುಗಳನ್ನು ತಡೆದು ಸಮೃದ್ಧ ಕೃಷಿಯನ್ನು ಕರುಣಿಸುವ ಶಕ್ತಿ ವರಾಹ ಸ್ವಾಮೀ ದೇವರಿಗೆ ಇದೆ ಎನ್ನುತ್ತಾರೆ. ದೇವಳದಲ್ಲಿ ನಡೆದ ಜಾತ್ರೋತ್ಸವ ಪ್ರಯುಕ್ತ ದೇವಳದಲ್ಲಿ ವಿಶೇಷ ಪೂಜಾ-ಕೈಂಕರ್ಯಗಳು ನಡೆದು ಪ್ರಸಾದ, ನೈವೇದ್ಯಗಳನ್ನು ಭಕ್ತರಿಗೆ ವಿತರಿಸಲಾಯಿತು. ಅಲ್ಲದೆ ಸಾವಿರಾರು ಜೋಡಿ ನವ ದಂಪತಿಗಳು ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನಕ್ಕೆ ಬಂದು ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ದೇವಾಲಯದ ಸಮೀಪದ ಸೌಪರ್ಣಿಕ ನದಿಯಲ್ಲಿ ಸ್ನಾನ ಮಾಡಿದ ಭಕ್ತರು ಮಹಾರಾಜಸ್ವಾಮಿ ಶ್ರೀ ವರಾಹ ದೇವರಿಗೆ ಪೂಜೆ ಸಲ್ಲಿಸಿದರು. ದೂರದೂರುಗಳಿಂದ ಭಕ್ತಾದಿಗಳು ಆಗಮನವಾಗಿದ್ದು ಸಂಭ್ರಮದ ವಾತಾವರಣ ಮನೆಮಾಡಿತು.

85 ಸಾವಿರ ಮಹಿಳೆಯರ ಪರಿಶ್ರಮದಿಂದ ಸಂಜೀವಿನಿ ಸೂಪರ್ ಮಾರ್ಕೆಟ್ ಆರಂಭ: ಇಲ್ಲಿ ಏನೇನಿದೆ ಗೊತ್ತಾ?
 
ಭಕ್ತರ ಸುರಕ್ಷತೆಗೆ ಆದ್ಯತೆ:

ಒಂದೆಡೆ ಸಮುದ್ರ, ಇನ್ನೊಂದೆಡೆ ನದಿ, ನಡುವೆ ಹಾದು ಹೋಗುವ ಹೆದ್ದಾರಿ ಕಾರಣದಿಂದ ತೀರ ಕಿರಿದಾದ ಭೂಪ್ರದೇಶದ ಇಲ್ಲಿ ಅಮಾವಾಸ್ಯೆಯ ಪರ್ವದಲ್ಲಿ ಪಾಲ್ಗೊಳ್ಳಲು ಬರುವ ಸಹಸ್ರಾರು ಭಕ್ತರ ಸುರಕ್ಷತೆಗಾಗಿ ಮತ್ತು ಹೆದ್ದಾರಿಯಲ್ಲಿ ಎಡೆಬಿಡದೆ ಸಂಚರಿಸುವ ವಾಹನಗಳ ಜತೆಗೆ ಜಾತ್ರೆಗೆ ಬರುವ ಅಸಂಖ್ಯ ವಾಹನಗಳ ಸುಗಮ ಸಂಚಾರ, ನಿಲುಗಡೆ ಮತ್ತು ಜನದಟ್ಟಣೆಯ ನಿಯಂತ್ರಣ, ಸಮುದ್ರ ಮತ್ತು ನದಿಸ್ನಾನ ಮಾಡುವವರ ಬಗೆಗೆ ವಹಿಸಬೇಕಾದ ಎಚ್ಚರದ ಕುರಿತು ಗಂಗೊಳ್ಳಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು, ಕುಂದಾಪುರ ಸಂಚಾರಿ ಪೆÇಲೀಸರು ಅಗತ್ಯ ಕ್ರಮಕೈಗೊಂಡರು. ದೇವಸ್ಥಾನದ ಎದುರು ಯಾವುದೇ ವ್ಯಾಪಾರಿ ಮಳಿಗೆಗೆ ಅವಕಾಶ ನೀಡದೇ ಅಲ್ಲಿ ಭಕ್ತರು ದೇವಳದೊಳಕ್ಕೆ ಆಗಮಿಸಲು ಸರತಿ ಸಾಲಿನ ಅವಕಾಶ ಮಾಡಿಕೊಡಲಾಯಿತು.

click me!