ಕುಂಭಮೇಳದಲ್ಲಿ ಬಡವರಿಗೆ ಪುಣ್ಯಸ್ನಾನ ಭಕ್ತಿ, ಶ್ರೀಮಂತರಿಗೆ ಮುಕ್ತಿಯ ಚಿಂತೆ. ಲಕ್ಷಾಂತರ ಭಕ್ತರು ದೂರದೂರುಗಳಿಂದ ಪುಣ್ಯಸ್ನಾನಕ್ಕಾಗಿ ಆಗಮಿಸುತ್ತಾರೆ. ಶ್ರೀಮಂತರಿಗೆ ಶಾಹಿ ಸ್ನಾನವು ಒಂದು ಪ್ರಕ್ರಿಯೆಯಷ್ಟೇ.
12 ವರ್ಷ...144 ವರ್ಷ ಮಹಾಕುಂಭ.. ಕುಂಭಮೇಳ ಎಂದರೆ ಆಸ್ತಿಕರಿಗೆ ಅಚ್ಚುಮೆಚ್ಚು, ನಾಸ್ತಿಕರಿಗೆ ಕಿರಿಕಿರಿಯ ಕಿಚ್ಚು. ಕುಂಭಮೇಳದಲ್ಲಿ ಬಡವರು ಭಕ್ತಿಯಿಂದ ಪುಣ್ಯಸ್ನಾನ ಮಾಡಿದರೆ, ಶ್ರೀಮಂತರಿಗೆ ಮುಕ್ತಿಯೇ ಚಿಂತೆಯಾಗಿದೆ.
ಕುಂಭಮೇಳದಲ್ಲಿ ಕೋಟಿ, ಕೋಟಿ ಜನರು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದವರ ಲೆಕ್ಕವಿಲ್ಲ. ಪ್ರಯಾಗ್ರಾಜ್ ತ್ರಿವೇಣಿ ಸಂಗಮದ ಪವಿತ್ರ ಸ್ಥಳದಲ್ಲಿ ಬಡವರು, ಶ್ರೀಮಂತರಿಗೆ ಬೇಧವಿಲ್ಲವಾ ? ಎಲ್ಲರಿಗೂ ಸಂಗಮದಲ್ಲೇ ಮಿಂದೇಳುವ ಅವಕಾಶವೂ, ಭಾಗ್ಯವೂ ಇದೆಯಾ ? ನಾನು ಕಂಡಂತೆ ಇಲ್ಲ. ಬಡವರಿಗೆ ಪುಣ್ಯಸ್ನಾನ ಭಕ್ತಿ, ಶ್ರೀಮಂತರಿಗೆ ಮುಕ್ತಿಯ ಚಿಂತೆ. ಭಾರತದ ಬಹುಸಂಖ್ಯಾತ ಬಡವರಿಗೆ ಇಂಥ ತೀರ್ಥಯಾತ್ರೆ, ಅಮಾವಾಸ್ಯೆ, ಮಹಾಮೇಳಗಳು, ಜಾತ್ರೆಗಳು, ರಥೋತ್ಸವ ಅಂದರೆ ಅದ್ಯಾಕಿಷ್ಟು ಸಂಭ್ರಮ ? ದುಡಿದು, ದುಡಿದ ಜೀವಗಳು ಜಾತ್ರೆ, ಅಮಾವಾಸ್ಯೆ, ರಥೋತ್ಸವ ಎಂದಾಕ್ಷಣ ಪುಡಿದು ನಿಲ್ಲುವ ಅವರ ಉತ್ಸಾಹ ಭಗವಂತನ ಮೇಲಿನ ಭಕ್ತಿಯೇ ? ನಿಜಕ್ಕೂ ಅದು ಭಕ್ತಿಯೇ, ಅನುಮಾನವೇ ಇಲ್ಲ. ಬಿಸಿಲು, ಮಳೆಗೆ ತಲೆಕೆಡಿಸಿಕೊಳ್ಳದೇ, ಸಿಕ್ಕ ಸಿಕ್ಕ ವಾಹನ ಹಿಡಿದು, ಮಕ್ಕಳು, ವೃದ್ಧರು, ಮಹಿಳೆಯರು ನಡೆದೇ ಬಿಡುತ್ತಾರೆ. ಕುಂಭಮೇಳದಲ್ಲೂ ಇಂತಹ ಲಕ್ಷಾಂತರ, ಕೋಟ್ಯಂತರ ಭಕ್ತರ ದಂಡೇ ಬಂದಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ್, ಗುಜರಾತ್ ಸೇರಿದಂತೆ ಸುತ್ತಲ ರಾಜ್ಯಗಳು ಜನರು, ನೂರಾರು ಕಿಮೀ ದೂರದಿಂದ ರೈಲು, ಬಸ್ ನಲ್ಲಿ ಬಂದಿದ್ದರು. ಆಟೋಗೆ ನೂರಾರು ರೂಪಾಯಿ ಕೊಡಲಾರದೇ ಕಾಲ್ನಡಿಗೆಯಲ್ಲೇ ಹತ್ತಾರು ಕಿಲೋಮೀಟರ್ ನಡೆಯುತ್ತಾ, ಲಗ್ಗೇಜ್ ಹೊತ್ತು ನಡೆಯುತ್ತಿದ್ದರು.
ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವುದೇ ಅವರ ಪರಮೋಚ್ಚ ಗುರಿ ಮತ್ತು ಅದೇ ಅವರ ಧನ್ಯತೆ. ತ್ರಿವೇಣಿ ಸಂಗಮದವರೆಗೂ ಬೋಟ್ ನಲ್ಲಿ ಹೋಗಿ ಸ್ನಾನ ಮಾಡುವಷ್ಟು ಶ್ರೀಮಂತರಲ್ಲ. ಯಾಕಂದ್ರೆ ಬೋಟ್ ಗಳಲ್ಲಿ ತಲಾ ಒಬ್ಬೊಬ್ಬರಿಗೆ ಬಾಯಿಗೆ ಬಂದಷ್ಟು ರೇಟ್ ಹೇಳ್ತಾರೆ. ಒಬ್ಬರಿಗೆ ಒಂದು ಸಾವಿರದವರೆಗೂ ಪೀಕುತ್ತಾರೆ. ಚೌಕಾಸಿಗಿಳಿದರೆ ಕಡಿಮೆ ಮಾಡ್ತಾರೆ. ಆದರೆ, ಬಡ ಭಕ್ತ ಅದೆಲ್ಲ ಯೋಚಿಸುವುದೇ ಇಲ್ಲ. ದಡದಲ್ಲೇ, ಗಂಗೆಯ ಒಡಲಲ್ಲೇ ಸ್ನಾನಕ್ಕಿಳಿಯುತ್ತಿದ್ದರು. ಪುಟ್ಟ ಮಕ್ಕಳನ್ನು ಗಂಗೆಯಲ್ಲಿ ಮುಳುಗಿಸುವ ತಂದೆ, ವೃದ್ಧ ಅಪ್ಪನನ್ನೂ, ಅಮ್ಮನನ್ನೂ ಪುಣ್ಯಸ್ನಾನ ಮಾಡಿಸುತ್ತಿದ್ದ ಮಕ್ಕಳು, ಗಂಗೆಯಲ್ಲೇ ಯಮುನೆಯನ್ನೂ, ಸರಸ್ವತಿಯನ್ನೂ ಕಾಣುತ್ತಾ, ಗಂಗೆಯನ್ನೇ ತ್ರಿವೇಣಿ ಸಂಗಮ ಎಂದು ಭಾವಿಸಿ ಮಿಂದೇಳುತ್ತಿದ್ದರು. ಅವರಿಗೆ ಪುಣ್ಯಸ್ನಾನ ಎಂಬುದು ಪರಂಪರಾಗತ ಆಚರಣೆ, ಹಿರಿಯರು ರೂಪಿಸಿದ ಧರ್ಮದ ದಾರಿ.
ಇದನ್ನೂ ಓದಿ: ಅಘೋರಿಗಳು ಮಾನವರನ್ನ ಕೊಂದು ಮಾಂಸ ತಿನ್ನುತ್ತಾರೆಯೇ? ಇದರ ಹಿಂದಿನ ಅಸಲಿಯತ್ತೇನು?
ಮೂರು ಬಾರಿ ಸಂಗಮದಲ್ಲಿ ಮುಳುಗಿ, ಸೂರ್ಯನಿಗೆ ನಮಸ್ಕರಿಸಿ ಮನಸಾರೆ ಪ್ರಾರ್ಥಿಸಿ, ತಮ್ಮ ಸಂಪ್ರದಾಯದಂತೆ ಗಂಗೆಯನ್ನು ಪೂಜಿಸುತ್ತಾ ಸಾಗುತ್ತಿದ್ದರು. ಸಂಗಮದ ನದಿ ದಂಡೆಯಲ್ಲಿ ಮಹಿಳೆಯರು, ಗಂಗೆಯ ಮಣ್ಣಿನಿಂದ ಶಿವಲಿಂಗ ನಿರ್ಮಿಸಿ, ಹೂವು, ಕುಂಕುಮ ಅರ್ಪಿಸಿ, ಆರತಿ ಬೆಳಗಿ ಪೂಜಿಸುತ್ತಿದ್ದ ಅಪರೂಪದ ದೃಶ್ಯ ಮನಸೆಳೆಯುತ್ತಿತ್ತು. ನಂಬಿಕೆ ಅಂದರೆ ಇದೇನಾ ? ಭಗವಂತನ ಕಡೆಗೇ ಸಾಗುವಂಥ ನಂಬಿಕೆ ಒಂದಾದರೆ, ಜೀವಕ್ಕೆ ಮೋಕ್ಷದ ಬಯಕೆಯೂ, ಪಾಪ ಕರ್ಮ ಕಳೆಯುವ ನಂಬಿಕೆಯೂ ಇವರನ್ನೆಲ್ಲ ಸಂಗಮದತ್ತ ಸೆಳೆದಿತ್ತಲ್ಲವೇ ?
ಆದರೆ, ಸೋ ಕಾಲ್ಡ್ ಗಣ್ಯರಿಗೆ ಕುಂಭಮೇಳ ಕ್ಕೆ ಬರುವುದು, ಶಾಹಿಸ್ನಾನ ಮಾಡುವುದು ಚಿಟಿಕೆ ಹೊಡೆಯುವಷ್ಟರಲ್ಲಿ ಮುಗಿದು ಹೋಗುವ ಪ್ರಕ್ರಿಯೆ..ಪ್ರೊಟೋಕಾಲ್, ವಿವಿಐಪಿ, ವಿಐಪಿ.. ಇವರೆಲ್ಲ ರಾಜಕಾರಣಿಗಳು, ಸಚಿವರು, ಕೇಂದ್ರ ಸಚಿವರು, ಹೊರ ರಾಜ್ಯದ ಸಚಿವರು, ಶಾಸಕರು, ಅವರು ಕುಟುಂಬಸ್ಥರು, ಮಕ್ಕಳು,ಮೊಮ್ಮಕ್ಕಳು, ಅವರ ಆಪ್ತರು, ಸ್ನೇಹಿತರು, ಚಿತ್ರ ನಟ, ನಟಿಯರು, ಇವರಿಗೆಲ್ಲ ಶಾಹಿಸ್ನಾನ ಎಂಬುದು ಭಕ್ತಿಗಿಂತ ಭಯಕ್ಕಾಗಿಯೋ, ಮುಕ್ತಿಯೇ ಚಿಂತೆಯಿಂದಲೇ ಸಂಗಮದಲ್ಲಿ ಮುಳುಗೇಳುತ್ತಾರೇನೋ ಅನ್ನಿಸುತ್ತಿತ್ತು.
ಇದನ್ನೂ ಓದಿ: ಮಹಾಕುಂಭ ಮೇಳಕ್ಕೆ ಖರ್ಚೆಷ್ಟು? ಆದಾಯ ಎಷ್ಟು? 'ಹೊಟ್ಟೆ ತುಂಬುತ್ತಾ' ಅಂದವರಿಗೆ ಲಕ್ಷ ಕೋಟಿ ಆದಾಯದ ಉತ್ತರ!
ಪಾಪ ಕರ್ಮಗಳೆಲ್ಲ ತೊಡೆದು ಹೋದರೆ ಸಾಕಪ್ಪ ಎನ್ನುವುದಷ್ಟೇ ಇವರ ಚಿಂತೆ. ಹಾಗಾಗಿಯೇ ಏನೋ, ಪೊಲೀಸ್ ಭದ್ರತೆಯಲ್ಲೇ ಬರುತ್ತಿದ್ದರು, ಸಂಗಮ ಸ್ಥಳದಲ್ಲೇ ಮುಳುಗೇಳುತ್ತಿದ್ದರು.
ವಿಐಪಿಗಳಿದ್ದೆಡೆ ಕಾಲ್ತುಳಿತ ಆಗದು, ಉಸಿರುಗಟ್ಟದು, ಅಸ್ವಸ್ಥರಾಗರು. ಕಾಲ್ತುಳಿತದಲ್ಲಿ ಜೀವಬಿಡರು. ಬಹುಶಃ, ಪುಣ್ಯ ಸ್ನಾನದಿಂದ ಅವರ ಪಾಪಕರ್ಮ ತೊಳೆದು ಹೋಗಿರುತ್ತದೆನೋ?