ಕೇದಾರನಾಥದಲ್ಲಿ ಶಿವ ಸ್ಥಾಪಿತನಾಗಿದ್ದು ಹೇಗೆ? ಪಂಚಕೇದಾರಕ್ಕೂ ಮಹಾಭಾರತಕ್ಕೂ ಇರುವ ಲಿಂಕ್‌ ಏನು?

By Santosh NaikFirst Published May 10, 2024, 3:56 PM IST
Highlights

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ಕೇದಾರನಾಥ ಧಾಮದ ಬಾಗಿಲುಗಳು ಪೂರ್ಣ ವಿಧಿವಿಧಾನಗಳು ಮತ್ತು ವೈದಿಕ ಪಠಣದೊಂದಿಗೆ ಭಕ್ತರಿಂದ 'ಹರ ಹರ ಮಹಾದೇವ್' ಪಠಣದೊಂದಿಗೆ ಶುಕ್ರವಾರ ತೆರೆದುಕೊಂಡಿವೆ. ಈ ಹಿನ್ನಲೆಯಲ್ಲಿ ಕೇದಾರನಾಥದಲ್ಲಿ ಶಿವ ಸ್ಥಾಪಿತನಾಗಿದ್ದು ಹೇಗೆ ಎನ್ನುವ ಪೌರಾಣಿಕ ಕಥೆ ಇಲ್ಲಿದೆ.
 

ಶಿವನ ಶಕ್ತಿಪೀಠ ಹಾಗೂ ದೇಶದ ಪ್ರಮುಖ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ಕೇದಾರನಾಥ ಧಾಮ ಶುಕ್ರವಾರದಿಂದ ಭಕ್ತರಿಗೆ ತೆರೆದುಕೊಂಡಿದೆ. ಈ ಹಂತದಲ್ಲಿ ಕೇದಾರನಾಥ ದೇವಸ್ಥಾನದಲ್ಲಿ ಶಿವ ಸ್ಥಾಪಿತನಾಗಿದ್ದು ಹೇಗೆ, ಕೇದಾರನಾಥಕ್ಕೂ ಪಂಚ ಕೇದಾರಕ್ಕೂ ಇರುವ ಲಿಂಕ್‌ ಏನು. ಮಹಾಭಾರತಕ್ಕೂ ಶಿವನಿಗೂ ಇರೋ ಸಂಬಂಧವೇನು ಅನ್ನೋದದರ ಪೌರಾಣಿಕ ಕಥೆ ಇಲ್ಲಿದೆ. ಇದನ್ನು ಎಕ್ಸ್‌ನಲ್ಲಿ ವಿಯಾವನ್‌ (@VivanVatsa) ಎನ್ನುವವರು ಶೇರ್‌ ಮಾಡಿಕೊಂಡಿದ್ದಾರೆ.  ಅದರ ಪೂರ್ಣಪಾಠ ಇಲ್ಲಿದೆ. ರಕ್ತದೋಕುಳಿ ಹರಿದ ಮಹಾಭಾರತ ಯುದ್ಧ ಅಂತ್ಯ ಕಂಡ ಸಮಯ. ಗೆಲುವು ಸಾಧಿಸಿದ ಪಾಂಡವರಿಗೆ ತಮ್ಮ ಗುರುಗಳು ಹಾಗೂ ಸಹೋದರರನ್ನು ಸಾಯಿಸಿದ ತಪ್ಪತಸ್ಥ ಭಾವ ಕಾಡುತ್ತಿತ್ತು. ಪಾಂಡವರೇನೋ ಯುದ್ಧ ಗೆದ್ದರೂ ಆದರೆ ಆತ್ಮೀಯರನ್ನು ಕಳೆದುಕೊಂಡಿದ್ದಕ್ಕೆ ಅವರಲ್ಲಿ ಸಂಭ್ರಮದ ವಾತಾವರಣವೇ ಇದ್ದಿರಲಿಲ್ಲ. ಇದಕ್ಕಾಗಿ ಶಿವನ ಸಹಾಯವನ್ನು ಪಡೆಯೋಕೆ ಅವರು ತೀರ್ಮಾನ ಮಾಡಿದ್ದರು. ಆದರೆ, ಪಾಂಡವರು ಮಾಡಿದ ಪಾಪಗಳ ಕಾರಣಕ್ಕೆ ಶಿವ ಅವರಿಂದ ದೂರ ಹೋಗಲು ತೀರ್ಮಾನ ಮಾಡಿದ್ದ. ಇದರ ಪರಿಣಾಮ ಎನ್ನುವಂಥ ನಿಗೂಢವಾದ ಕೇದಾರನಾಥ ದೇವಾಲಯದಲ್ಲಿ ದೇಶದ ಅತ್ಯುನ್ನತ ಜ್ಯೋತಿರ್ಲಿಂಗ ಹೊರಹೊಮ್ಮಿತು.

ಶಿವನ ಆಶೀರ್ವಾದವನ್ನು ಕೋರಿ ಪಾಂಡವರು ನಿರ್ಮಾಣ ಮಾಡಿದ ಕೇದಾರನಾಥ ದೇವಾಲಯದ ಪೌರಾಣಿಕ ಕಥೆ. 2013ರಲ್ಲಿ ಇಡೀ ಕೇದಾರನಾಥಕ್ಕೆ ಪ್ರವಾಹ ವ್ಯಾಪಿಸಿದರೂ, ಈ ದೇವಾಲಯ ಮಾತ್ರ ಅಚಲವಾಗಿ ನಿಂತಿದ್ದು ಇಂದಿಗೂ ವಿಜ್ಞಾನಿಗಳಿಗೆ ಅಚ್ಚರಿ ಮೂಡಿಸುವ ಅಂಶ.

ಹೌದು, ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧದ ನಂತರ ಕೇದಾರನಾಥ ದೇವಾಲಯದ ಕಥೆ ಪ್ರಾರಂಭವಾಗುತ್ತದೆ. ಮನುಕುಲ ಕಂಡುಕೇಳರಿಯದ ಯುದ್ಧದ ನಂತರ ಪಾಂಡವರು ವಿಜಯಶಾಲಿಯಾಗಿದ್ದರು. ಆದರೆ, ತನ್ನ ಒಡಹುಟ್ಟಿದವರನ್ನೇ ಕೊಂದಿದ್ದು, ಅಪಾರ ಪ್ರಮಾಣದ ರಕ್ತಪಾತಕ್ಕಾಗಿ ಗೆಲುವು ಕಂಡ ಪಾಂಡವರೂ ಕೂಡ ದುಃಖದಲ್ಲಿ ಮುಳುಗಿದ್ದರು. ಮಹಾಕಾವ್ಯದ ಪ್ರಕಾರ, ಪಾಂಡವರು ತಮ್ಮ ಪಾಪಗಳನ್ನು ಪರಿಹರಿಸಲು ಶಿವನ ಆಶೀರ್ವಾದವನ್ನು ಪಡೆಯಲು ನಿರ್ಧಾರ ಮಾಡ್ತಾರೆ. ಪ್ರಮುಖವಾಗಿ ಯುದ್ಧದ ಸಮಯದಲ್ಲಾದ ವಂಚನೆ ಹಾಗೂ ಭಾತೃಹತ್ಯೆಗೆ ಶಿವನಲ್ಲಿ ಕ್ಷಮೆ ಕೋರುವುದೇ ಅವರ ಉದ್ದೇಶವವಾಗಿರುತ್ತದೆ. ಆದರೆ, ಯುದ್ಧದಲ್ಲಾದ ವಿನಾಶ, ನೈತಿಕ ನಿಯಮಗಳ ಉಲ್ಲಂಘನೆಯ ಕಾರಣಕ್ಕೆ ಶಿವ ಅಸಮಾಧಾನಗೊಂಡಿದ್ದ. ಪಾಂಡವರು ಬಯಸಿದ್ದ ಪಾಪವಿಮೋಚನೆಯನ್ನು ನೀಡಲು ಶಿವ ಕೂಡ ಹಿಂಜರಿಯುತ್ತಾನೆ.

ಆದರೆ, ಪಾಂಡವರು ತಾನು ಎಲ್ಲಿದ್ದರೂ ಬಿಡೋದಿಲ್ಲ ಅನ್ನೋದನ್ನು ಅರಿತ ಶಿವ ಕೆಲ ಕಾಲ ಅಜ್ಞಾತವಾಗಿರಲು ತೀರ್ಮಾನ ಮಾಡ್ತಾನೆ. ಅದರಂತೆ ಗೂಳಿಯಾಗಿ (ನಂದಿ) ರೂಪ ಬದಲಿಸಿಕೊಂಡು, ಹಿಮಾಲಯದ ಗರ್ವಾಲ್‌ ಪ್ರದೇಶದಲ್ಲಿ ಅಡಗಿಕೊಳ್ಳುತ್ತಾನೆ. ಹಾಗಂತ ಇದು ಪಾಂಡವರ ಮೇಲಿನ ಭಯದಿಂದ ಶಿವ ಮಾಡಿದ ಕೃತ್ಯವಲ್ಲ. ಪಾಪವಿಮೋಚನೆ ಕೇಳಿ ಬಂದ ಪಾಂಡವರಿಗೆ ಇದು ದೈವಿಕ ಪರೀಕ್ಷೆ ಆಗಿತ್ತು. ಪಾಪ ವಿಮೋಚನೆಯನ್ನು ಪಡೆಯಬೇಕಾದಲ್ಲಿ ಅವರ ದೃಢತೆ ಮತ್ತು ಪ್ರಾಮಾಣಿಕತೆಯನ್ನು ಅಳೆಯುವ ತೀರ್ಮಾವನ್ನು ಶಿವ ಮಾಡಿದ್ದ.

ಆದರೆ, ಪಾಂಡವರು ಮಾತ್ರ ಶಿವನನ್ನು ಹುಡುಕದ ಜಾಗವೇ ಇಲ್ಲ. ಹಿಮಾಲಯದ ಇಂಚಿಂಚಿನ್ನು ಶಿವನನ್ನು ಹುಡುಕಲು ಪ್ರಾರಂಭ ಮಾಡ್ತಾರೆ. ಈ ಹಂತದಲ್ಲಿ ಐವರು ಪಾಂಡವರಲ್ಲಿ 2ನೇಯವನಾದ ಭೀಮ, ಗೂಳಿಯ ರೂಪದಲ್ಲಿದ್ದ ಶಿವನನ್ನು ಗುರುತಿಸುತ್ತಾನೆ. ಮೂಲ ರೂಪಕ್ಕೆ ಬರಲು ನಿರಾಕರಿಸಿದಾಗ,  ಮಹಾದೇವನನ್ನು ಎದುರಿಸಲು ನಿರ್ಧರಿಸಿದ ಭೀಮನು ಗೂಳಿಯ ಬಾಲವನ್ನು ಹಿಡಿದುಕೊಳ್ಳುತ್ತಾನೆ. ಆದರೆ, ಗೂಳಿ ನೆಲದಡಿಯಲ್ಲಿ ಹುದುಗಿಕೊಳ್ಳುವ ಪ್ರಯತ್ನ ಮಾಡುತ್ತದೆ. ಈ ಹೋರಾಟ ಎಷ್ಟು ತೀಕ್ಷ್ಣವಾಗತ್ತೆಂದರೆ, ಶಿವ ನೆಲದಲ್ಲಿ ಅಡಗಿ ಹೋಗುವ ಮೂಲಕ ಇವರಿಂದ ತಪ್ಪಿಸಿಕೊಳ್ಳುವ ದೊಡ್ಡ ಪ್ರಯತ್ನ ಮಾಡ್ತಾನೆ. ಆದರೆ, ಭೀಮ ಬಲಶಾಲಿ. ಗೂಳಿಯ ಭಾಗಗಳನ್ನು ಹಿಡಿದಿಟ್ಟುಕೊಳ್ಳೋಕೆ ಯಶಸ್ವಿಯಾಗ್ತಾನೆ.

ಗೂಳಿಯ ರೂಪದಲ್ಲಿದ್ದ ಶಿವ ದೇಹ ಛಿದ್ರಗೊಂಡಂತೆ. ಅದರ ವಿವಿಧ ಭಾಗಗಳು ಹಿಮಾಲಯದ ಐದು ವಿಭಿನ್ನ ಸ್ಥಳಗಲ್ಲಿ ಕಾಣಿಸಿಕೊಂಡವು. ಶಿವನ ದೇಹದ ಭಾಗಗಳು ಕಾಣಿಸಿಕೊಂಡ ಈ ಸ್ಥಳಗಳನ್ನೇ ನಂತರ ಒಟ್ಟಾಗಿ ಪಂಚ ಕೇದಾರ ಎಂದು ಕರೆಯಲ್ಪಡುವ ಪವಿತ್ರ ಸ್ಥಳಗಳು ಎನಿಸಿಕೊಂಡವು.

ಕೇದಾರನಾಥ (ಗೊಡ್ಡು, ಅಥವಾ ಬೆನ್ನಿನ ಭಾಗ) - ಉತ್ತರಾಖಂಡ್‌ನಲ್ಲಿರುವ ಈ ಕ್ಷೇತ್ರ ಗೂಳಿಯ ಗೊಡ್ಡು ಪತ್ತೆಯಾದ ಸ್ಥಳವಾಗಿದೆ. ಕೇದಾರನಾಥ ಈಗ ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಚಾರ್ ಧಾಮ್ ತೀರ್ಥಯಾತ್ರೆಯ ಭಾಗವಾಗಿದೆ.

ತುಂಗನಾಥ (ಬಾಹುಗಳು) - ಉತ್ತರಾಖಂಡದಲ್ಲಿ ನೆಲೆಗೊಂಡಿರುವ ತುಂಗನಾಥದಲ್ಲಿ ಶಿವನ ತೋಳುಗಳು ಕಾಣಿಸಿಕೊಂಡಿದ್ದು. ಇದು ವಿಶ್ವದ ಅತಿ ಎತ್ತರದ ಶಿವನ ದೇವಾಲಯವಾಗಿದೆ.

ರುದ್ರನಾಥ (ಮುಖ) - ಉತ್ತರಾಖಂಡದಲ್ಲಿ ಶಿವನ ಮುಖವು ಕಾಣಿಸಿಕೊಂಡಿತ್ತು. ಇದು ಶಿವನನ್ನು ನೀಲಕಂಠ ಮಹಾದೇವ ಎಂದು ಪೂಜಿಸುವ ನೈಸರ್ಗಿಕ ಕಲ್ಲಿನ ದೇವಾಲಯವೆಂದು ಪೂಜಿಸಲ್ಪಟ್ಟಿದೆ.

ಮಧ್ಯಮಹೇಶ್ವರ (ಹೊಕ್ಕುಳ ಭಾಗ) - ಶಿವನ ಹೊಕ್ಕುಳ ಹೊರಹೊಮ್ಮಿದ ಈ ತಾಣವು ಅದರ ಪ್ರಶಾಂತ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು ಶಿವನ ಮಧ್ಯದ (ಮಧ್ಯ) ಭಾಗವನ್ನು ಲಿಂಗದ ರೂಪದಲ್ಲಿ ಪ್ರತಿನಿಧಿಸಲಾಗುತ್ತದೆ.

ಕಲ್ಪೇಶ್ವರ (ಕೂದಲು) - ಶಿವನ ಜಟಾ (ಕೂದಲು) ಕಲ್ಪೇಶ್ವರದಲ್ಲಿ ಕಾಣಿಸಿಕೊಂಡಿತು, ಇದು ಶಿವನಿಗೆ ಸಮರ್ಪಿತವಾದ ಗುಹೆ ದೇವಾಲಯಕ್ಕೆ ಹೆಸರುವಾಸಿಯಾಗಿದೆ, ಇದು ಉತ್ತರಾಖಂಡದಲ್ಲಿದೆ.

ಕೇದಾರನಾಥ ದೇವಾಲಯ ಮೇ 11ರಿಂದ ಭಕ್ತರಿಗೆ ದರ್ಶನಕ್ಕೆ ಮುಕ್ತ

ಕೇದಾರನಾಥ, ಬದ್ರಿನಾಥ ದೇಗುಲಕ್ಕೆ 5 ಕೋಟಿ ರೂ ದೇಣಿಗೆ ನೀಡಿದ ಉದ್ಯಮಿ ಮುಕೇಶ್ ಅಂಬಾನಿ!

click me!