
ನಂಬಿಕೆ ಇರಲಿ. ಆದರೆ, ಮೌಢ್ಯ ಬೇಡ ಎನ್ನುತ್ತಲೇ ದೇವರು, ದೆವ್ವದ ಹೆಸರಿನಲ್ಲಿ ದುಡ್ಡು ಮಾಡಿಕೊಳ್ಳುತ್ತಿರುವ, ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ಹಲವಾರು ಮಂದಿಯನ್ನು ಬೆತ್ತಲು ಮಾಡಿದವರು ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಹುಲಿಕಲ್ ನಟರಾಜ್. ಪವಾಡದ ಹೆಸರಿನಲ್ಲಿ ಅವೈಜ್ಞಾನಿಕ ಎನ್ನುವಂಥ ಘಟನೆಗಳನ್ನು ಜಗಜ್ಜಾಹೀರ ಮಾಡುತ್ತಲೇ ಹಲವರಿಂದ ಜೀವ ಬೆದರಿಕೆಯನ್ನೂ ಎದುರಿಸುತ್ತಿರುವವರು ಹುಲಿಕಲ್ ನಟರಾಜ್. 'ವೈಜ್ಞಾನಿಕ ಮನೋಭಾವದ ಹರಡುವಿಕೆಗಾಗಿ ಶ್ರಮಿಸಿದ ಡಾ. ಎ.ಟಿ. ಕೋವೂರ್, ಪ್ರೇಮಾನಂದರಿಂದ ನನಗೆ ಸ್ಫೂರ್ತಿ ಸಿಕ್ಕಿತು. ಪವಾಡ ಪುರುಷರಿಗೆ ಬಹಿರಂಗವಾಗಿ ಸವಾಲು ಹಾಕಿದ ಡಾ.ಎಚ್.ನರಸಿಂಹಯ್ಯ ಕೂಡ ನನ್ನ ಶಿಕ್ಷಕರು. ಪವಾಡ ನಡೆಯುವಲ್ಲೆಲ್ಲಾ ನಾನು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತೇನೆ. ಭಾರತದಲ್ಲಿ ಜನರನ್ನು ನಂಬುವಂತೆ ಮಾಡುವ ಅನೇಕ ಪವಾಡಗಳನ್ನು ನಾವು ಯಾವಾಗಲೂ ಕಾಣುತ್ತೇವೆ. ಪವಾಡಗಳು ಜನರನ್ನು ಮೋಸಗೊಳಿಸಲು ಆಯುಧಗಳಾಗಿವೆ. ಅಂತಹ ಪರಿಸ್ಥಿತಿಗಳಲ್ಲಿ ನಾನು ಪವಾಡಗಳನ್ನು ಭೇದಿಸುವ ಮೂಲಕ ಪಕ್ಕಕ್ಕೆ ನಿಲ್ಲುತ್ತೇನೆ' ಎಂದು ಹೇಳುವ ನಟರಾಜ್ ಅವರು, ತಮ್ಮ ಬಾಲ್ಯದಲ್ಲಿ ತಮ್ಮ ತಾಯಿಯ ಮೇಲೆ ನಡೆದ ಭಯಾನಕ ಘಟನೆಯನ್ನು ವಿವರಿಸಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಹುಲೀಕಲ್ ಅವರು, 'ನಮ್ಮ ಅವ್ವ ಸುಂದರಿಯಾಗಿದ್ದರು. ಈಗಿನಂತೆ ಆಗೆಲ್ಲಾ ಲಂಗ ಧರಿಸಿ ಸೀರೆ ಉಡುವುದು, ಒಳ ಉಡುಪು ಹಾಕಿ ರವಿಕೆ ಹಾಕುವುದು ಎಲ್ಲಾ ಇರಲಿಲ್ಲ. ಕಚ್ಚೆಯ ರೀತಿಯಲ್ಲಿ ಸೀರೆ ಉಡುತ್ತಿದ್ದಳು ನನ್ನವ್ವ. ಆಕೆಗೆ ದೇವರ ಮೇಲೆ ಇನ್ನಿಲ್ಲದ ಪ್ರೀತಿ. ಅದೇ ವೇಳೆ ಮೂಢನಂಬಿಕೆಯೂ ಆಕೆಯಲ್ಲಿ ಸಾಕಷ್ಟು ಇತ್ತು. ನಾನು ಮತ್ತು ನನ್ನ ಸಹೋದರರು ಎಲ್ಲರನ್ನೂ ಸಾಕಲು ಆಗದಷ್ಟು ಬಡತನ ಆಗ. ಈ ಬಡತನದಿಂದ ಆಕೆ ಬೇಸತ್ತು ಹೋಗಿದ್ದಳು. ಏನು ಮಾಡಿದರೂ ಇದರಿಂದ ಹೊರಕ್ಕೆ ಬರಲು ಆಗುತ್ತಿಲ್ಲವೆಂದು ನೋವಿನಿಂದ ಹೇಳುತ್ತಿದ್ದಳು. ಕೊನೆಗೆ ನಮ್ಮ ಊರಿನ ಸಮೀಪ ಒಬ್ಬರಿಗೆ ಮೈಮೇಲೆ ದೇವರು ಬರುತ್ತದೆ, ಅಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಎಂದು ಹೇಳಿದರು' ಎನ್ನುತ್ತಲೇ ಹುಲಿಕಲ್ ನಟರಾಜ್ ಅವರು, ಮೂಢ ನಂಬಿಕೆಯಿಂದ ತಮ್ಮ ತಾಯಿಯ ಮೇಲೆ ನಡೆದ ಅನಚಾರದ ಕುರಿತು ಮಾತನಾಡಿದ್ದಾರೆ.
ಇದೇನು ಕೈಬರಹವೋ, ಕಂಪ್ಯೂಟರ್ ಪ್ರಿಂಟೊ? ವಿಶ್ವದ ಸುಂದರ ಹ್ಯಾಂಡ್ರೈಟರ್ ಪ್ರಶಸ್ತಿಗೆ ಭಾಜನ ಈ ಬಾಲಕಿ!
'ಅಪ್ಪ-ಅಮ್ಮನ ಜೊತೆ ನಾನೂ ಹೋಗಿದ್ದೆ. ಆ ವ್ಯಕ್ತಿ ಅಲ್ಲಿಗೆ ಬಂದವರ ಸಮಸ್ಯೆಗಳಿಗೆ ಪರಿಹಾರ ಹೇಳುತ್ತಿದ್ದ. ಆದರೆ ನನ್ನ ಅಮ್ಮನಿಗೆ ಮಾತ್ರ ಹೇಳಿರಲಿಲ್ಲ. ಸದ್ಯ ಮೈಮೇಲೆ ದೇವರು ಬರಲಿಲ್ಲ, ಆಮೇಲೆ ಬರುತ್ತದೆ ಎಂದು ಹೇಳಿ ನನ್ನ ಅಪ್ಪನನ್ನು ಹೋಗಲು ಹೇಳಿದ. ನನ್ನ ಅಪ್ಪನಿಗೆ ಎಮ್ಮೆಯ ಕೆಲಸ ಇದ್ದುದರಿಂದ ಅಲ್ಲಿಂದ ಹೋದ. ಅಲ್ಲಿ ನಾನು ಮತ್ತು ಅಮ್ಮ ಇದ್ವಿ. ಸಂಜೆ ಆದರೂ ಆ ವ್ಯಕ್ತಿಯ ಮೇಲೆ ದೇವರು ಬರುವ ರೀತಿ ಕಾಣಿಸಲಿಲ್ಲ. ಅಲ್ಲಿ ಕರೆಂಟ್ ಕೂಡ ಇರಲಿಲ್ಲ. ಕಗ್ಗತ್ತಲು. ರಾತ್ರಿ ವೇಳೆ ಮೈಮೇಲೆ ದೇವರು ಬಂದಂತೆ ಆತ ವರ್ತಿಸಿದ. ಅಜಾನುಬಾಹುವುಳ್ಳ ಆ ವ್ಯಕ್ತಿ ಬಂದವನೇ ನನ್ನ ಅಮ್ಮನನ್ನು ಅಪ್ಪಿಕೊಂಡು ಬಿಟ್ಟ. ಅಮ್ಮನ ಮೈಮೇಲೆ ಇದ್ದ ಬಟ್ಟೆಗಳು ಬಿದ್ದವು. ಅದನ್ನು ನೋಡುತ್ತಿದ್ದ ನನಗೆ ಏನಾಗುತ್ತಿದೆ ಎನ್ನುವುದೇ ತಿಳಿಯಲಿಲ್ಲ. ದೇವರು ಹೀಗೆ ಮಾಡ್ತಾನೆಯೇ, ಅದೂ ದೇವಸ್ಥಾನದಲ್ಲಿ ಎಂದೆಲ್ಲಾ ಎನ್ನಿಸಿತು. ನನ್ನಮ್ಮ ಹೇಗೆ ಆ ವ್ಯಕ್ತಿಯ ಕೈಯಿಂದ ತಪ್ಪಿಸಿಕೊಂಡು ಹರಿದು ಹೋದ ಸೀರೆಯನ್ನು ಸರಿ ಮಾಡಿಕೊಂಡು ಅಲ್ಲಿಂದ ನನ್ನನ್ನು ಕರೆದುಕೊಂಡು ದೂರ ಓಡಿಬಂದಳು' ಎಂದು ವಿವರಿಸಿದ್ದಾರೆ ಹುಲಿಕಲ್ ನಟರಾಜ್.
ನಾನು ಮತ್ತು ನನ್ನ ಸಹೋದರರನ್ನು ಕರೆದುಕೊಂಡು ಅಮ್ಮ ಬೇರೆ ಊರಿಗೆ ಬಂದಳು. ನನ್ನ ಅಪ್ಪನನ್ನು ನಂಬಿಕೊಂಡರೆ ಸಾಧ್ಯವಿಲ್ಲ ಎನ್ನುವುದು ಅವಳಿಗೆ ತಿಳಿದಿತ್ತು. ಕೊನೆಗೆ ಸಾಯುವ ನಿರ್ಧಾರವನ್ನೂ ಮಾಡಿಬಿಟ್ಟಳು. ಆ ಘಟನೆ ಬಳಿಕ ಅಲ್ಲಿಯೇ ಇದ್ದ ಬಾವಿಯೊಂದರಲ್ಲಿ ಹಾರಲು ಹೋದಳು. ಆಕೆಯ ಸೀರೆಯನ್ನು ಎಳೆದು ನಾನು ಹೇಗೋ ಕಾಪಾಡಿದೆ. ಅಲ್ಲಿ ದೆವ್ವಗಳು ಹೆಚ್ಚಿರುತ್ತವೆ ಎಂದು ಎಲ್ಲರೂ ಹೇಳುತ್ತಿದ್ದರು. ದೆವ್ವಗಳು ಬಂದು ನಮ್ಮನ್ನೆಲ್ಲಾ ತಿಂದು ಹೋದರೆ ಎಷ್ಟು ಚೆನ್ನಾಗಿ ಇರತ್ತಲ್ವಾ ಎಂದು ಅಮ್ಮ ಕೇಳಿದಳು. ನನಗೆ ಯಾಕೆ ಅಮ್ಮ ಹಾಗೆ ಹೇಳುತ್ತಿದ್ದಾಳೆ ಎನ್ನುವುದೂ ಅರ್ಥವಾಗಿರಲಿಲ್ಲ. ಕೊನೆಗೆ ಊರು ಬಿಟ್ಟು ಬಂದೆವು ಎಂದು ಹುಲಿಕಲ್ ನಟರಾಜ್ ಹೇಳಿದ್ದಾರೆ. ಇಂಥ ಘಟನೆಗಳೇ ಅವರಿಗೆ ದೇವರ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಬಯಲಿಗೆ ಎಳೆಯುವಂತೆ ಪ್ರೇರೇಪಿಸಿದ್ದು. ಇದೇ ವೇಳೆ ನಾನು ದೇವರನ್ನು ನಂಬುವುದಿಲ್ಲ ಎಂದು ಹಲವರು ಅಂದುಕೊಂಡಿದ್ದಾರೆ. ನಾನು ಹಾಗೆಂದು ಎಲ್ಲಿಯೂ ಹೇಳಲಿಲ್ಲ. ನಾನು ನಂಬುವಷ್ಟು ಯಾರೂ ನಂಬಲು ಸಾಧ್ಯವಿಲ್ಲ. ಆದರೆ ದೇವರ ಹೆಸರಿನಲ್ಲಿ ನಡೆಯುವ ಅನಾಚಾರದ ವಿರುದ್ಧ ನನ್ನ ಹೋರಾಟ ಎಂದಿದ್ದಾರೆ ಅವರು.
ಹೆಂಡತಿ- ಅಸ್ಟ್ರಾಲಾಜಿ ಇಬ್ರಲ್ಲಿ ಹೆಚ್ಚು ಪ್ರೀತಿಸೋದು ಯಾರನ್ನು ಅಂತ ಕೇಳಿದ್ರೆ ಹೀಗೆ ಹೇಳೋದಾ ಗುರೂಜಿ?