ದರ್ಗಾದೊಳಗೊಂದು ದೇವಾಲಯ; ಇದು ದಕ್ಷಿಣ ಭಾರತದ ಸೌಹಾರ್ದ ಧಾರ್ಮಿಕ ಕೇಂದ್ರ

By Suvarna News  |  First Published Jun 22, 2023, 3:35 PM IST

ಇಲ್ಲಿ ದರ್ಗಾದೊಳಗೇ ದೇವಾಲಯವಿದೆ. ಮಾಂಗಲ್ಯ ಸೂತ್ರ ಧರಿಸಿದವರಷ್ಟೇ ಸಂಖ್ಯೆಯಲ್ಲಿ ಬುರ್ಖಾ ಧರಿಸಿದವರೂ ಇಲ್ಲಿ ಬರುತ್ತಾರೆ. ಎರಡೂ ಧರ್ಮದವರು ದರ್ಗಾ- ದೇವಾಲಯ ಎರಡಕ್ಕೂ ನಡೆದುಕೊಳ್ಳುತ್ತಾರೆ. ಇಂಥದೊಂದು ಅಪರೂಪದ ಧಾರ್ಮಿಕ ಕೇಂದ್ರವಿರುವುದು ಮಲೆನಾಡಿನ ಮಡಿಲಲ್ಲಿ.


ಹಿಂದೂ ಮುಸ್ಲಿಂ ಜೋಡಿಯೊಂದರ ಪ್ರೀತಿ ಕೂಡಾ ಸಮಾಜದ ಸ್ವಾಸ್ಥ್ಯ ಕೆಡಿಸಿ ಹಿಂಸಾಚಾರಕ್ಕೆ ತಿರುಗುವ ಈ ಸಮಯದಲ್ಲಿ ದೇಶದ ಕೆಲ ಸ್ಥಳಗಳು ಮಾತ್ರ ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿವೆ. ಎರಡೂ ಧರ್ಮಗಳ ಯಾವುದೇ ದ್ವೇಷ, ದಳ್ಳುರಿ, ಹಿಂಸಾಚಾರ, ಕೋಪ ಇತ್ಯಾದಿಗಳ್ಯಾವುದೂ ತನಗೆ ತಾಗುವುದೇ ಇಲ್ಲವೆನ್ನುವಂತೆ ನಿಂತಿರುವ ಸೌಹಾರ್ದ ಕೇಂದ್ರವೆಂದರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯಲ್ಲಿರುವ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ-ಚೌಡಮ್ಮನ ಪುಣ್ಯಕ್ಷೇತ್ರ. 

ಇದು ಶಿವಮೊಗ್ಗದಿಂದ ಸುಮಾರು 38 ಕಿಮೀ ದೂರದಲ್ಲಿದ್ದು, ದರ್ಗಾ-ದೇಗುಲ ಸಂಕೀರ್ಣವು ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದ ಪ್ರಶಾಂತ ಪರಿಸರದ ನಡುವೆ ಇದೆ. ಇಲ್ಲಿ ದರ್ಗಾದೊಳಗೆ ದೇವಾಲಯ ಮಿಳಿತವಾಗಿ ಹೋಗಿದೆ. ಹಿಂದೂ ದೇವತೆಗಳಾದ ಭೂತರಾಯ ಮತ್ತು ಚೌಡಮ್ಮ ದೇವಿಯನ್ನು ದರ್ಗಾದಲ್ಲಿ ಸ್ಥಾಪಿಸಲಾಗಿದೆ. ಸುಮಾರು 400 ಹಿಂದೂಗಳು ಮತ್ತು 100 ಮುಸ್ಲಿಮರ ಮನೆಗಳನ್ನು ಹೊಂದಿರುವ ಹಣಗೆರೆ ಹಳ್ಳಿಯಲ್ಲಿ ಈವರೆಗೆ ಯಾವುದೇ ರೀತಿಯ ಕೋಮು ಗಲಭೆಗಳು ನಡೆದಿಲ್ಲ ಎಂಬುದು ವಿಶೇಷ.

Tap to resize

Latest Videos

ವೈವಾಹಿಕ ಜೀವನ ಮುಳುಗುತ್ತಿದ್ದರೂ, ದಡ ಮುಟ್ಟಿಸುವ ಹಟದವರು ಈ ರಾಶಿಯವರು

ನಿರ್ವಹಣೆ ಯಾರದು? 
ಹಿಂದೂ, ಮುಸ್ಲಿಂ ಎರಡೂ ಜನಾಂಗದ ಭಕ್ತರು ಇಲ್ಲಿ ಬಂದು ಎರಡೂ ದೇವರಿಗೆ ನಮಸ್ಕರಿಸಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ದೇಗುಲವನ್ನು 250 ವರ್ಷಗಳ ಹಿಂದೆ ಜಾಫರ್ ಮೊಹಿಯುದ್ದೀನ್ ಸಾಬ್ ಅವರ ಪೂರ್ವಜರು ಸ್ಥಾಪಿಸಿದರು. 1939 ರಲ್ಲಿ, ಮೊಹಿಯುದ್ದೀನ್ ದೇವಾಲಯದ ಮುಖ್ಯಸ್ಥರಾದರು. ಅವರ ಮಗ, ಸೈಯದ್ ಖಾರಿ ಸಾಹೇಬ್, 1965 ರಲ್ಲಿ ಅವರ ಉತ್ತರಾಧಿಕಾರಿಯಾದರು. 1992 ರಿಂದ, ಸಾಹೇಬ್ ಅವರ ಮೂವರು ಪುತ್ರರಾದ ಸೈಯದ್ ನೂರ್ ಸಾಬ್, ಸೈಯದ್ ಇಸಾಕ್ ಸಾಬ್ ಮತ್ತು ಸೈಯದ್ ಪಾಷಾ ಅವರು ದರ್ಗಾವನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನೊಂದು ಬದಿಯಲ್ಲಿರುವ ಭೂತರಾಯ ಮತ್ತು ಚೌಡಮ್ಮ ದೇವಿಯ ಗುಡಿಗಳನ್ನು ಮುಜರಾಯಿ ಇಲಾಖೆಯ ಅಧಿಕಾರಿಗಳು ನಿರ್ವಹಿಸುತ್ತಾರೆ. 

ಮರದ ತುಂಬಾ ನೇತಾಡುವ ಬೀಗಗಳು
ಇಲ್ಲಿ ಬೇಡಿದ್ದೆಲ್ಲ ನಿಜವಾಗುತ್ತದೆ ಎಂಬ ನಂಬಿಕೆ ಇದೆ. ಹೆಚ್ಚಿನ ಭಕ್ತರು ಇಲ್ಲಿ ಆರೋಗ್ಯ ಸಮಸ್ಯೆ ಹಾಗೂ ವೈಯಕ್ತಿಕ ಸಮಸ್ಯೆಗಳಿಂದ ಪರಿಹಾರ ಕೋರಿ ಬರುತ್ತಾರೆ. ಹಾಗೆ ಬಂದವರು ದೇವಾಲಯದ ಆವರಣದೊಳಗಿರುವ ಮತ್ತಿ ಮರಕ್ಕೆ ಬೀಗ ಕಟ್ಟಿ ತಮ್ಮ ಮನೋಕಾಮನೆಗಳನ್ನು ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ತಾಯಿತ, ತ್ರಿಶೂಲ ಕಟ್ಟುತ್ತಾರೆ. ಹೀಗೆ ಮಾಡಿದಾಗ ಕೇಳಿದ್ದು ಆಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಕೌಟುಂಬಿಕ ಕಲಹಗಳು ಅಥವಾ ನ್ಯಾಯಾಲಯದ ಪ್ರಕರಣಗಳಲ್ಲಿ ಸಿಲುಕಿರುವ ಭಕ್ತರು ಇಲ್ಲಿ ಬೀಗ ಕಟ್ಟುತ್ತಾರೆ. ಉಳಿದಂತೆ ತಮ್ಮ ಹರಕೆ ನೆರವೇರಿದರೆ ಭಕ್ತರು ಇಲ್ಲಿ ಬಂದು ಕುರಿ,ಕೋಳಿ ಬಲಿಕೊಟ್ಟು ಅಡುಗೆ ಎಡೆ ಇಟ್ಟು ಪ್ರಸಾದ ಸ್ವೀಕರಿಸುತ್ತಾರೆ. ಅದರಲ್ಲೂ ಅಮಾವಾಸ್ಯೆ, ಹುಣ್ಣಿಮೆ ದಿನದಂದು ಇಲ್ಲಿಗೆ 20 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ. ವಾರ್ಷಿಕ 1 ಕೋಟಿ ರೂ.ಗೂ ಹೆಚ್ಚು ಆದಾಯ ಹೊಂದಿರುವ ಈ ಧಾರ್ಮಿಕ ಕೇಂದ್ರವು, ಪ್ರತಿದಿನ ಅನೇಕ ಹಿಂದೂ ಮುಸ್ಲಿಂ ಸಮುದಾಯದ ಭಕ್ತರನ್ನು ಕಾಣುತ್ತದೆ. 

Numerology: ಹುಟ್ಟಿದ ದಿನದ ಪ್ರಕಾರ ನಿಮ್ಮ ಸಕ್ಸಸ್ ಈ ವೃತ್ತಿಯಲ್ಲಿ ಅಡಗಿದೆ..

ದರ್ಗಾ- ದೇವಾಲಯ ಆವರಣದ ಹೊರಗೆ ಅನೇಕ ಅಂಗಡಿಗಳಿದ್ದು, ಅವುಗಳನ್ನು ಕೂಡಾ ಹಿಂದೂ ಮುಸ್ಲಿಂ ವ್ಯಾಪಾರಿಗಳು ನಡೆಸುತ್ತಾರೆ. ಇಲ್ಲಿ ಎಲ್ಲ ರೀತಿಯ ಪೂಜಾ ಸಾಮಾಗ್ರಿಗಳು ದೊರೆಯುತ್ತವೆ. ಇಲ್ಲಿ ಬಂದವರು ಮೊದಲು  ಚೌಡೇಶ್ವರಿ- ಭೂತರಾಯನಿಗೆ ಹಣ್ಣುಕಾಯಿಯನ್ನೂ, ನಂತರ ದರ್ಗಾಕ್ಕೆ ಶಾಲನ್ನು ಅರ್ಪಿಸುತ್ತಾರೆ. ಮಾಟಮಂತ್ರ ಮಾಡಿದವರಿಗೆ ತಿರುಗೇಟು ನೀಡಲು, ಶತ್ರುದಮನಕ್ಕಾಗಿ ಇಲ್ಲಿ ಹಲವರು ಬರುತ್ತಾರೆ. 

ತಲುಪುವುದು ಹೇಗೆ?
ತೀರ್ಥಹಳ್ಳಿ, ಶೃಂಗೇರಿ, ಶಿವಮೊಗ್ಗದಿಂದ ಹಣಗೆರೆಗೆ ಬಸ್ ಸಂಪರ್ಕವಿದೆ. ದೂರದಿಂದ ಬರುವವರಿಗೆ ವಸತಿ ವ್ಯವಸ್ಥೆಯೂ ಇದೆ. 

click me!