ಇಂದು ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ: ದಾಸೋಹಕ್ಕೆ 14 ಲಕ್ಷ ಜಿಲೇಬಿ, 5 ಲಕ್ಷ ಮಿರ್ಜಿ ಭಜ್ಜಿ ರೆಡಿ!

By Kannadaprabha News  |  First Published Jan 15, 2025, 6:30 AM IST

ರಥೋತ್ಸವದ ಮಾರನೆ ದಿನ ಬರುವ ಭಕ್ತರಿಗೆ ಬರೋಬ್ಬರಿ 5 ಲಕ್ಷ ಮಿರ್ಚಿಯನ್ನು ತಯಾರು ಮಾಡಿ, ಬಡಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕವಾಗಿ ಸುಮಾರು ನಾಲೈದು ನೂರು ಜನರು ಹಗಲಿರುಳು ಶ್ರಮಿಸುತ್ತಾರೆ. ಕಳೆದ ಐದಾರು ವರ್ಷಗಳಿಂದ ಪ್ರತಿ ವರ್ಷವೂ ರಥೋತ್ಸವ ಮಾರನೇಯ ದಿನ ಮಿರ್ಚಿ ಭಜ್ಜಿ ನೀಡಲಾಗುತ್ತದೆ. ಇದಕ್ಕಾಗಿ 25 ಕ್ವಿಂಟಲ್ ಕಡಲೆ ಹಿಟ್ಟು, 20 ಕ್ವಿಂಟಲ್ ಹಸಿಮೆಣಸಿನಕಾಯಿ, 10 ಬ್ಯಾರಲ್ ಒಳ್ಳೆ ಎಣ್ಣೆ ಬಳಕೆ ಮಾಡಲಾಗುತ್ತದೆ. 25 ಕೆಜಿ ಅಜವಾನ್, 20 ಕೆಜಿ ಸೋಡಾಪುಡಿ ಬಳಕೆ ಮಾಡಲಾಗುತ್ತದೆ.


ಕೊಪ್ಪಳ(ಜ.15): ನಗರದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜ. 15ರ ಸಂಜೆ ಮಹಾರಥೋತ್ಸವ ಜರುಗಲಿದೆ. ಮಹಾರಥೋತ್ಸವ ಕಣ್ತುಂಬಿಕೊಳ್ಳಲು ಲಕ್ಷ ಲಕ್ಷ ಭಕ್ತಗಣ ಕಾತರದಲ್ಲಿದೆ. ಈ ವರ್ಷದ ಗವಿಸಿದ್ದೇಶ್ವರ ಮಹಾರಥೋತ್ಸಕ್ಕೆ ಧಾರವಾಡದ ಪ್ರಸಿದ್ಧ ಹಿಂದುಸ್ತಾನಿ ಗಾಯಕ, ಪಂಡಿತ ಪದ್ಮಶ್ರೀ ಎಂ. ವೆಂಕಟೇಶ ಕುಮಾರ್‌ ಚಾಲನೆ ನೀಡಲಿದ್ದಾರೆ. ನಂತರ ಕೈಲಾಸ ಮಂಟಪದಲ್ಲಿ ಜರುಗುವ ಉದ್ಘಾಟನೆ ಸಮಾರಂಭದ ಸಾನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ವಿಜಯಪುರದ ಹುಬ್ಬಳ್ಳಿ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್‌ಆಗಮಿಸುತ್ತಾರೆ. ಕೈಲಾಸ ಮಂಟಪದಲ್ಲಿ ನಡೆಯುವ ಸಂಗೀತ ಕಾರ್ಯ ಕ್ರಮದಲ್ಲಿ ಧಾರವಾಡದ ಬಸವರಾಜ ವಂದಲಿ ಹಾಗೂ ಹುಬ್ಬಳ್ಳಿಯ ಸುಜಯಿಂದ್ರ ಕುಲಕರ್ಣಿ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಮತ್ತು ಮೈಸೂರಿನ ಸರಿಗಮಪ ಖ್ಯಾತಿಯ ಗಾಯಕ ಶ್ರೀ ಹರ್ಷ ಎಂ.ಆರ್. ಹಾಗೂ ತಂಡದವರಿಂದ ಕಾರ್ಯಕ್ರಮ  ಜರುಗಲಿದೆ. 

Tap to resize

Latest Videos

ಪ್ರಯಾಗರಾಜ್ ಮಹಾಕುಂಭ 2025: ಇತಿಹಾಸ, ಮಹತ್ವ, ಕಥೆ

ಸಡಗರ ಇಮ್ಮಡಿ: 

ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ಮಹಾರಥೋತ್ಸವದ ಹಿನ್ನೆಲೆ ಇಡೀ ಕೊಪ್ಪಳದಲ್ಲಿ ಸಡಗರ ಮನೆ ಮಾಡಿದೆ. ರಾಜ್ಯ, ಅನ್ಯರಾಜ್ಯಗಳಿಂದಲೂ ಸಹ ಜನ ಆಗಮಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ನಾನಾ ಜಿಲ್ಲೆಗಳಿಂದ ಅಪಾರ ಪ್ರಮಾಣದಲ್ಲಿ ಭಕ್ತರು ಪಾದಯಾತ್ರೆ ಸಹ ಬರುತ್ತಿದ್ದಾರೆ. ಲೆಕ್ಕಕ್ಕೆ ಸಿಗದಷ್ಟು ಲಕ್ಷ ಲಕ್ಷ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ರಥೋತ್ಸವಕ್ಕೆ ಕ್ಷಣವನ್ನು ಎದುರು ನೋಡುತ್ತಿದ್ದಾರೆ. 

ಗವಿಸಿದ್ದಪ್ಪಜ್ಜನ ಜಾತ್ರೆ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಸಡಗರ ಕೊಪ್ಪಳ ನಗರದಲ್ಲಿ ಪ್ರತಿ ಮನೆಯೂ ಮಧುವಣಗಿತ್ತಿಯಂತೆ ಜಾತ್ರಾ ಮಹೋ ತ್ಸವಕ್ಕೆ ಶೃಂಗಾರಗೊಂಡಿವೆ. ನಗರದ ಪ್ರಮುಖ ಬೀದಿಗಳೂ ಭಕ್ತರನ್ನು ಜಾತ್ರಾ ಮಹೋತ್ಸವಕ್ಕೆ ಸ್ವಾಗತಿಸುತ್ತಿವೆ. ಮನೆಯಂಗಳಲ್ಲಿ ರಂಗೋಲಿ ಹಾಕಿ ಮಹಿಳೆಯರು ಚಿತ್ತಾರ ಬಿಡಿಸಿದ್ದಾರೆ. 

ಮಹಾದಾಸೋಹ: 

ಗವಿಸಿದ್ದೇಶ್ವರ ಮಹೋತ್ಸವದ ರಥೋತ್ಸವದ ದಿನ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಲಿದ್ದಾರೆ. ಏಕಕಾಲದಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ. ಲಕ್ಷ ಲಕ್ಷ ಭಕ್ತರು ರಥೋತ್ಸವ ದಿನ ಪ್ರಸಾದ ಸ್ವೀಕರಿಸಲಿದ್ದಾರೆ. ಭಕ್ತರಿಗಾಗಿ ರೊಟ್ಟಿ, ಮಾದಲಿ, ಜಿಲೇಬಿ, ಅನ್ನ, ಸಾಂಬಾರ್, ಚಟ್ಟೆ, ತರಹೇವಾರಿ ತರಕಾರಿ ಪಲೈ ಸಿದ್ದಪಡಿಸಲಾಗುತ್ತದೆ.

ಗ್ರಾಮ ಗ್ರಾಮಗಳಲ್ಲಿ ಭಕ್ತಿ ಸೇವೆ: 

ಜಾತ್ರೆಯ ಮಹಾದಾಸೋಹಕ್ಕೆ ನಾನಾ ಗ್ರಾಮಗಳಲ್ಲಿ ರೊಟ್ಟಿ, ಹೋಳಿಗೆ, ಧಾನ್ಯ, ಚಟ್ಟಿ, ಉಪ್ಪಿನಕಾಯಿ ಹೀಗೆ ಅಪಾರ ಪ್ರಮಾಣದಲ್ಲಿ ಸೇವೆಯನ್ನು ಗ್ರಾಮ ಗ್ರಾಮಗಳಲ್ಲಿ ಭಕ್ತರು ಸಮರ್ಪಿಸಿದ್ದಾರೆ. ಗವಿಸಿದ್ದಪ್ಪಜ್ಜನ ಜಾತ್ರೆಯ ರಥೋತ್ಸವ ದಿನ ಸಹ ಅಪಾರ ಪ್ರಮಾಣದಲ್ಲಿ ಜನರು ಆಗಮಿಸಿ ಭಕ್ತಿಯಿಂದ ಸಿದ್ದಪಡಿಸಿದ ಸೇವೆಯನ್ನು ಗವಿಮಠದ ದಾಸೋಹಕ್ಕೆ ನೀಡಲಿದ್ದಾರೆ.

ದಾಸೋಹಕ್ಕೆ 450 ಕ್ವಿಂಟಲ್ ಜಿಲೇಬಿ, 5 ಲಕ್ಷ ಮಿರ್ಚಿ!

ಸೋಮರಡ್ಡಿ ಅಳವಂಡಿ

ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ಲಕ್ಟೋಪ ಲಕ್ಷ ಭಕ್ತರಿಗೆ ಪ್ರಸಾದ ಭೋಜನದ ವ್ಯವಸ್ಥೆಗೆ ಭರ್ಜರಿ ಸಿದ್ಧತೆ ಮಾಡಲಾಗುತ್ತಿದೆ. ಈ ವರ್ಷ ರಥೋತ್ಸವದ ದಿನ ಭಕ್ತರಿಗೆ ಜಿಲೇಬಿಯ ಸವಿ ಸವಿಯುವ ಸುಸಂದರ್ಭ. ಇದಕ್ಕಾಗಿ ಭರ್ಜರಿ 450 ಕ್ವಿಂಟಲ್ ಜಿಲೇಬಿ (14 ಲಕ್ಷ) ಸಿದ್ದ ಮಾಡುವ ಕಾರ್ಯ ಭರದಿಂದ ಸಾಗಿದೆ. ಹಾಗೆಯೇ ರಥೋತ್ಸವದ ಮಾರನೇ ದಿನ ಪ್ರತಿ ಬಾರಿಯಂತೆ 5 ಲಕ್ಷ ಮಿರ್ಚಿ ಭಜ್ಜಿಯನ್ನು ಮಾಡುವ ಸಿದ್ಧತೆ ನಡೆಯುತ್ತಿದೆ. ನಾಡಿನ ಜಾತ್ರೆಗಳ ಪರಂಪರೆಯ ಮಹಾ ದಾಸೋಹದಲ್ಲಿ ಈ ಲೆಕ್ಕಾಚಾರ ದಾಖಲೆಯಾಗಿದೆ ಎನ್ನುವುದು ಗಮನಾರ್ಹ ಸಂಗತಿ. 

450 ಕ್ವಿಂಟಲ್‌ ಜಿಲೇಬಿ: ಜಾತ್ರಾ ಮಹೋತ್ಸವಕ್ಕೆ ಪ್ರತಿ ವರ್ಷವೂ ಒಂದಿಲ್ಲೊಂದು ಸಾಹಸಕ್ಕೆ ಕೈ ಹಾಕುವ ಸಿಂಧನೂರಿನ ಎಪಿಎಂಸಿ ವರ್ತಕರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ವಿಜಯಕುಮಾರ ಅವರ ನೇತೃತ್ವದಲ್ಲಿ ಕಳೆದ ವರ್ಷ 30 ಟನ್ ಶೇಂಗಾ ಹೋಳಿಗೆ ಮಾಡಿ, ದಾಖಲೆ ಮಾಡಿದ್ದರು. ಈ ವರ್ಷ 450 ಕ್ವಿಂಟಲ್ ಜಿಲೇಬಿ . ಈಗಾಗಲೇ ಗವಿಮಠದ ಮಹಾದಾಸೋಹದ ಆವರಣದಲ್ಲಿ ದೊಡ್ಡದಾದ ಟೆಂಟ್ ಹಾಕಲಾಗಿದ್ದು, ಅಲ್ಲಿ ಜಿಲೇಬಿ ತಯಾರಿಸುವ ಕಾರ್ಯವನ್ನು ಹಗಲು ಇರಳು ಮಾಡುತ್ತಿದ್ದಾರೆ. 

ಬಾದಾಮಿ: ಬನಶಂಕರಿ ದೇವಿಯ ಅದ್ಧೂರಿ ರಥೋತ್ಸವ, ತಾಯಿಯ ಆಶೀರ್ವಾದ ಪಡೆದ ಭಕ್ತರು!

ರಥೋತ್ಸವದ ದಿನದಂದು ಪ್ರಸಾದದ ಜೊತೆಗೆ ಜಿಲೇಬಿ ಬಡಿಸಲಾಗುತ್ತದೆ. ಎರಡು ದಿನಗಳ ಕಾಲ ವೂ ಈ ಜಿಲೇಬಿಯನ್ನು ಭಕ್ತರು ಸವಿಯಲಿದ್ದಾರೆ. ಸುಮಾರು 50 ಕ್ವಿಂಟಲ್ ಮೈದಾ ಹಿಟ್ಟು, 130 ಕ್ವಿಂಟಲ್ ಸಾವಯವ ಬೆಲ್ಲ, 1400 ಲೀಟರ್ ಎಣ್ಣೆ 300 ಲೀಟರ್ ತುಪ್ಪ, 20 ಕೆಜಿ ಯಾಲಕ್ಕಿ, 150 ಲೀಟರ್ ಮೊಸರನ್ನು ಇದಕ್ಕೆ ಬಳಸಲಾಗುತ್ತಿದೆ. ಇದೆಲ್ಲವನ್ನು ಒಳಗೊಂಡು ಸುಮಾರು 450 ಕ್ವಿಂಟಲ್ ಜಿಲೇಬಿಯನ್ನು ತಯಾರಿಸಲಾಗುತ್ತದೆ. ಸುಮಾರು 14 ಲಕ್ಷ ಜಿಲೇಬಿ ತಯಾರಾಗಲಿವೆ. ಇದಕ್ಕಾಗಿ 120 ಬಾಣಸಿಗರು, ಅವರಿಗೆ ಸಹಾಯ ಮಾಡಲು 150 ಜನ ಹಾಗೂ ಕಾರ್ಯಕರ್ತರು ನಿರಂತರವಾಗಿ ಸೇವೆ ಮಾಡುತ್ತಿದ್ದಾರೆ. ಈ ಜಿಲೇಬಿಗಳನ್ನು ತಯಾರಿಸಿದ ನಂತರ ವ್ಯವಸ್ಥಿತವಾಗಿಡಲು 1300 ಟ್ರೇಗಳನ್ನು ಸಿಂಧನೂರಿನ ಮಹಾನಂದಿ ಪ್ಲಾಸ್ಟಿಕ್ ಮಾಲೀಕ ಲಕ್ಷ್ಮಣ್ ಶೆಟ್ಟಿ ಉಚಿತವಾಗಿ ನೀಡಿದ್ದಾರೆ.

5 ಲಕ್ಷ ಮಿರ್ಚಿ: 

ರಥೋತ್ಸವದ ಮಾರನೆ ದಿನ ಬರುವ ಭಕ್ತರಿಗೆ ಬರೋಬ್ಬರಿ 5 ಲಕ್ಷ ಮಿರ್ಚಿಯನ್ನು ತಯಾರು ಮಾಡಿ, ಬಡಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕವಾಗಿ ಸುಮಾರು ನಾಲೈದು ನೂರು ಜನರು ಹಗಲಿರುಳು ಶ್ರಮಿಸುತ್ತಾರೆ. ಕಳೆದ ಐದಾರು ವರ್ಷಗಳಿಂದ ಪ್ರತಿ ವರ್ಷವೂ ರಥೋತ್ಸವ ಮಾರನೇಯ ದಿನ ಮಿರ್ಚಿ ಭಜ್ಜಿ ನೀಡಲಾಗುತ್ತದೆ. ಇದಕ್ಕಾಗಿ 25 ಕ್ವಿಂಟಲ್ ಕಡಲೆ ಹಿಟ್ಟು, 20 ಕ್ವಿಂಟಲ್ ಹಸಿಮೆಣಸಿನಕಾಯಿ, 10 ಬ್ಯಾರಲ್ ಒಳ್ಳೆ ಎಣ್ಣೆ ಬಳಕೆ ಮಾಡಲಾಗುತ್ತದೆ. 25 ಕೆಜಿ ಅಜವಾನ್, 20 ಕೆಜಿ ಸೋಡಾಪುಡಿ ಬಳಕೆ ಮಾಡಲಾಗುತ್ತದೆ.

click me!